ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡಚರು ನಾವು ಎಡಚರು!

Last Updated 11 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

`ಟ್ರಿನ್... ಟ್ರಿನ್...' ಲ್ಯಾಂಡ್‌ಲೈನ್ ಫೋನ್ ಹೊಡೆದುಕೊಳ್ಳತೊಡಗಿತು. ಮಾಡುತ್ತಿರುವ ಕೆಲಸ ಬಿಟ್ಟು ಧಾವಿಸಿದೆ. ರಿಸೀವರ್ ಕಿವಿಗೆ ಹಿಡಿದು `ಹಲೋ' ಎಂದಾಕ್ಷಣ ಕೇಳಿಸಿದ್ದು `ಏನೇ ಲೊಡ್ಡೆ! ಎಂತಾ ಮಾಡ್ತಿದ್ಯೇ...?' ಕೇಳಿಬಂದ ಹೆಣ್ಣು ಧ್ವನಿಯನ್ನು ಅರಗಿಸಿಕೊಳ್ಳುವುದು ಕಷ್ಟವೆನ್ನಿಸಿತು. `ಯಾರು ಮಾತಾಡ್ತಿರೋದು?' ಅಸಹನೆಯಿಂದಲೇ ಪ್ರಶ್ನಿಸಿದೆ.

ಸೋದರತ್ತೆಯ ಮಗಳು ಬಹಳ ವರ್ಷಗಳ ನಂತರ ಯಾರಿಂದಲೋ ನಂಬರ್ ಗಿಟ್ಟಿಸಿಕೊಂಡು ಮಾತನಾಡಿದ್ದು ಸಂತಸ ತಂದರೂ, ಆಕೆಯ ಆ ಸಂಬೋಧನೆ ಬೇಸರ ಹುಟ್ಟಿಸಿತ್ತು. ಬಾಲ್ಯದಲ್ಲಿ ನಾವೆಲ್ಲ ಕಸಿನ್‌ಗಳು ಒಟ್ಟಿಗೇ ಬೆಳೆದಿದ್ದರ ಸಿಹಿ ನೆನಪುಗಳ ಮೇಲೆ ಕಹಿ ನೆನಪುಗಳು ಹಿಡಿತ ಸಾಧಿಸುವಂತೆ ಮಾಡಿದ್ದು ಅದೇ ಸಂಬೋಧನೆ. ಮನಸ್ಸಿನ ಆಳದಲ್ಲೆಲ್ಲೋ ಹುದುಗಿಹೋಗಿದ್ದ ಘಟನೆಗಳು ಮೊಳೆಯತೊಡಗಿದವು.

ಬಾಲ್ಯದ ಬೇಡದ ಆ ನೆನಪುಗಳು ಚಿಗುರೊಡೆಯದಂತೆ ಅವುಗಳನ್ನು ಅಲ್ಲೇ ಚಿವುಟಿ ಸಾವರಿಸಿಕೊಂಡು ಹೇಗೋ ಮಾತನಾಡಿ ಮುಗಿಸಿದೆ. ಬಾಲ್ಯದಲ್ಲಿ ಹೀಗೆ ಕರೆಸಿಕೊಂಡಾಗಲೆಲ್ಲ ಪೆದ್ದುಪೆದ್ದಾಗಿ ಹಲ್ಲು ಕಿರಿದು ಸುಮ್ಮನಿರುವುದು ಬಿಟ್ಟರೆ ಬೇರೇನೂ ತೋಚುತ್ತಿರಲಿಲ್ಲ. ಆದರೆ ಆ ಎಳೆ ಮನ ಘಾಸಿಗೊಳ್ಳುತ್ತಿದ್ದುದಂತೂ ನಿಜ.

ಪಕ್ಕಾ ಎಡಚಳಾದ ನನಗೆ ನನ್ನ ಎಡಚತನದ ಬಗ್ಗೆ ಈಗ ಖಂಡಿತವಾಗಿಯೂ ಹೆಮ್ಮೆಯಿದೆ. ಕಾರಣ ನಾನು ಸಾಮಾನ್ಯರೆಲ್ಲರಿಗಿಂತಲೂ ಭಿನ್ನಳು ಎಂಬುದು. ಆದರೂ ಬಾಲ್ಯದಲ್ಲಿ ನನಗಿಟ್ಟ ಆ ಅಡ್ಡ ಹೆಸರನ್ನು ಮಾತ್ರ ಮುಕ್ತಮನದಿಂದ ಅರಗಿಸಿಕೊಳ್ಳಲು ಇಂದಿಗೂ ಸಾಧ್ಯವಾಗಿಲ್ಲ.

ನಾನು ಶಾಲೆಗೆ ಸೇರಿದ ಹೊಸತು. ಆ ನೆನಪಿನ್ನೂ ಮನದಂಗಳದಲ್ಲಿ ಹಸಿರಾಗಿದೆ. ಸುಮಾರು 45 ವರ್ಷಗಳ ಹಿಂದಿನ ಘಟನೆ. ನನ್ನನ್ನು ಬೆಂಗಳೂರಿನ ಕನ್ನಡ ಶಾಲೆಗೆ ಒಂದನೇ ಇಯತ್ತೆಗೆ ಸೇರಿಸಿದಾಗ ಅಪ್ಪ ಮಾಡಿದ ಮೊದಲ ಕೆಲಸವೆಂದರೆ, ಶಾಲೆಗೆ ಬಂದು ಕ್ಲಾಸ್ ಟೀಚರ್ಸರಲ್ಲಿ ನನಗೆ ಬಲಗೈಯಿಂದ ಬರೆಯಲು ಆಗ್ರಹಿಸಬಾರದೆಂದು ವಿನಂತಿಸಿಕೊಂಡಿದ್ದು. ಐವತ್ತರ ದಶಕದ ವಿಜ್ಞಾನ ಪದವೀಧರರಾದ ಅವರಿಗೆ ನನ್ನ ಎಡಚತನದ ಸಕಾರಣದ ಅರಿವಿತ್ತು.

ಹುಟ್ಟಿನಿಂದಲೇ ಎಡಚರಾಗಿರುವವರಿಗೆ ಒತ್ತಾಯದಿಂದ ಬಲಗೈ ರೂಢಿಸಿದರೆ ಅವರಲ್ಲಿಯ ಸೃಜನಶೀಲತೆ, ಕ್ರಿಯಾಶೀಲತೆಯನ್ನು ನಾಶ ಮಾಡಿದಂತೆ ಎಂದು ಕಾರಣಗಳನ್ನು ತಿಳಿಹೇಳಿ ಹೋದದ್ದು ತಕ್ಕಮಟ್ಟಿಗೆ ನನ್ನ ಸಹಾಯಕ್ಕೆ ಬಂದಿತ್ತು. ಆದರೂ ಗೆಳತಿಯರು ಗುಂಪುಕಟ್ಟಿ ಆಡಿಕೊಂಡು ನಗುವುದು ಅಳು ತರಿಸಿತ್ತು. ನಾ ಎಡಗೈಯಲ್ಲಿ ಬರೆಯುವಾಗ ಅವರೆಲ್ಲ ನನ್ನನ್ನು ವಿಚಿತ್ರ ಪ್ರಾಣಿಯೆಂಬಂತೆ ನೋಡುವಾಗ ಕೀಳರಿಮೆ ಕಾಡಿತ್ತೇನೋ. ಅಂತರ್ಮುಖಿ ಸ್ವಭಾವವನ್ನು ಬೆಳೆಸಿಕೊಂಡದ್ದು ಆಗಲೇ. ಆದರೆ ಕಾಲಾನಂತರ ಅದೇ ಗೆಳತಿಯರು ನನ್ನ ಸ್ನೇಹಕ್ಕಾಗಿ ಹಾತೊರೆದದ್ದು ನನ್ನಲ್ಲಿರುವ ಚಿತ್ರಕಲೆಯ ನೈಪುಣ್ಯದಿಂದಾಗಿ.

ನಾವಿರುವುದು ಬಲಗೈ ಪ್ರಾಬಲ್ಯದ ಜಗದಲ್ಲಿ. ಅವರ ಅನುಕೂಲಕ್ಕೆ ತಕ್ಕಂತೆ ಬಾಗಿಲ ಹಿಡಿಕೆ, ಚಿಲಕ, ಸಂಗೀತ ಸಲಕರಣೆಗಳು, ಮಶೀನ್‌ಗಳು, ಶರ್ಟಿನ ಬಟನ್‌ಗಳು, ಕ್ಯಾಮೆರಾ, ಕಂಪ್ಯೂಟರ್ ಮೌಸ್, ಕೀಬೋರ್ಡ್‌ನ ಜೋಡಣೆ ಮುಂತಾದ ದಿನನಿತ್ಯದ ಸಲಕರಣೆಗಳು, ವ್ಯವಸ್ಥೆಗಳು ರೂಪುಗೊಂಡಿವೆ. ಕಷ್ಟವೋ, ನಷ್ಟವೋ ಎಡಗೈಯವರು ಇದಕ್ಕೆ ಹೊಂದಿಕೊಳ್ಳಲೇಬೇಕು. ಎಡಚರಾಗಿ ಹುಟ್ಟುವುದು ಕೇಡೆಂದೋ, ಅನಿಷ್ಟ ಎಂದೋ ತಿಳಿದಿದ್ದ ಕಾಲವೊಂದಿತ್ತು. `ಎಡ' ಸರಿಯಲ್ಲವೆಂಬ ಭಾವನೆ ಈಗಲೂ ಇದೆಯಾದರೂ ಅದರಲ್ಲಿ ಮೊದಲಿನಷ್ಟು ತೀವ್ರತೆಯಿಲ್ಲ. ವಿಶಾಲ ಮನೋಭಾವದವರ ಸಂಖ್ಯೆಯೂ ಹೆಚ್ಚಿದೆ.

ನಮ್ಮದು ಸಂಪ್ರದಾಯಸ್ಥ ಕೂಡು ಕುಟುಂಬವಾಗಿತ್ತು. ಆ ಪರಿಸರದಲ್ಲಿ ಹೆಣ್ಣು, ಮೇಲಾಗಿ ಎಡಚಳಾದ ನನ್ನ ಕಷ್ಟದ ಕಲ್ಪನೆ ನಿಮಗೆ ಆಗಿರಬಹುದು. ನನ್ನ 6-7ನೇ ವಯಸ್ಸಿನಲ್ಲಿ ಎಡಗೈಯಲ್ಲೇ ಉಣ್ಣುತ್ತಿದ್ದೆ. ಅಪ್ಪ ಜೊತೆಗಿದ್ದರೆ ಅವರ ಹೆದರಿಕೆಗೆ ಯಾರೂ ಚಕಾರ ಎತ್ತುತ್ತಿರಲಿಲ್ಲ. ಆದರೆ ಅಪ್ಪ ಏನಾದರೂ ಕೆಲಸದ ನಿಮಿತ್ತ ಬೇರೆ ಊರಿಗೆ ಹೋದಾಗ ಮಾತ್ರ ನನ್ನ ಗೋಳು ಹೇಳತೀರದು.

ಬಲಗೈಯಲ್ಲಿ ಉಣ್ಣಲು, ಬರೆಯಲು, ಇತರ ಕೆಲಸಗಳನ್ನು ಮಾಡಲು ಒತ್ತಾಯಿಸುವುದು, ನಾನು ಮಾಡದಿದ್ದಲ್ಲಿ ಎಡಗೈ ಬೆರಳುಗಳ ಗೆಣ್ಣಿನ ಮೇಲೆ ಹೊಡೆತ ನಿಶ್ಚಿತವಾಗಿತ್ತು. ಭಯದಿಂದ ಎರಡೂ ಕೈಯಲ್ಲಿ ಬರಹ, ಇತರ ಕೆಲಸಗಳನ್ನು ರೂಢಿಸಿಕೊಂಡು ಸವ್ಯಸಾಚಿಯಾದರೂ ನಾನು ಮಾತ್ರ ಪಕ್ಕಾ ಎಡಚಳು.

ಬಾಲ್ಯದಲ್ಲಿ ಅಣ್ಣಂದಿರೊಂದಿಗೆ ಆಡುವಾಗ `ಹುಡುಗರು' ಎಂಬ ಹೆಚ್ಚುಗಾರಿಕೆಯ ತೋರುವಿಕೆಗೋ, ಹುಂಬತನದಿಂದಲೋ ಅನಿರೀಕ್ಷಿತವಾಗಿ `ಲೊಡ್ಡೆ' ಎಂದು ಕರೆದು ನನ್ನಲ್ಲಿಯ ಸ್ವಚ್ಛಂದ ಮುಕ್ತ ಭಾವವನ್ನು ಚಿವುಟಿ, ಕ್ಷಣಾರ್ಧದಲ್ಲಿ ಅಂತರ್ಮುಖಿಯನ್ನಾಗಿಸಿ ಬಿಡುತ್ತಿದ್ದರು. ಆಗೆಲ್ಲ ನನ್ನ ಎಡಚತನದ ಬಗ್ಗೆ ಕೀಳರಿಮೆಯಿಂದ ತಪ್ಪಿತಸ್ಥ ಭಾವ ಕಾಡುತ್ತಿತ್ತು.

ಯಾಕೆ ಹಾಗೆ?
`ಎಡಚರಾಗಲು ಕಾರಣವೇನು?' ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ನರತಜ್ಞ ನಾರ್ಮನ್ ಗೆಶ್‌ವಿಂಡ್ ಅವರ ಪ್ರಕಾರ, ಗರ್ಭಾವಧಿಯಲ್ಲಿ ಟೆಸ್ಟೋಸ್ಟಿರಾನ್ ಹಾರ್ಮೋನ್‌ನ ಏರಿಳಿತದಿಂದಾಗಿ ಹುಟ್ಟುವ ಮಕ್ಕಳು ಎಡಚರಾಗುತ್ತಾರೆ. ಪೆನ್‌ಸಿಲ್ವೇನಿಯಾ ವಿಶ್ವವಿದ್ಯಾಲಯದ ಮನಃಶಾಸ್ತ್ರಜ್ಞ `ಕ್ಲೇರ್‌ಪೊರಾಕ್'ರ ಸಂಶೋಧನಾ ಅಧ್ಯಯನದ ಪ್ರಕಾರ, ಜೈವಿಕ ಮತ್ತು ವಂಶಪಾರಂಪರ್ಯ ಕಾರಣಗಳು ಕೈಗಳ ಬಳಕೆಯನ್ನು ನಿರ್ಧರಿಸುತ್ತವೆ.

ಇನ್ನು ವೈಜ್ಞಾನಿಕವಾಗಿ ಹೇಳುವುದಾದರೆ, ಮನುಷ್ಯನ ಮೆದುಳಿನ ಎಡಭಾಗ ಪ್ರಬಲವಾಗಿದ್ದು ಶರೀರದ ಬಲಭಾಗವನ್ನು ನಿಯಂತ್ರಿಸುತ್ತದೆ. ಇದು ಸರ್ವೇ ಸಾಮಾನ್ಯವಾದ್ದರಿಂದ ಬಲಗೈ ಬಳಸುವವರ ಸಂಖ್ಯೆ ಹೆಚ್ಚು. ಜಗತ್ತಿನ ಶೇ 80ರಷ್ಟು ಜನರದ್ದು ಇದೇ ಬಳಕೆ. ಇನ್ನುಳಿದ ಶೇ 20ರಷ್ಟು ಮಂದಿ ಮಾತ್ರ ಎಡಚರಂತೆ! ಇವರಲ್ಲಿ ಮೆದುಳಿನ ಬಲಭಾಗ ಪ್ರಬಲವಾಗಿರುತ್ತದೆ. ಹಾಗಾಗಿ ಅದು ಶರೀರದ ಎಡಭಾಗದ ನಿಯಂತ್ರಣಕ್ಕೆ ಕಾರಣವಾಗುತ್ತದೆ. ಇವರಲ್ಲಿ ಕೂಡ ಎಲ್ಲರೂ ಪೂರ್ತಿ ಎಡಚರಾಗಿ ಇರುವುದಿಲ್ಲ.

ಅರ್ಧ ಕೆಲಸ ಬಲಗೈ ಹಾಗೂ ಅರ್ಧ ಕೆಲಸ ಎಡಗೈಯಲ್ಲಿ ಮಾಡುತ್ತಾರೆ. ಆದರೆ ಪೂರ್ತಿ ಎಡಚರಿರುವುದು ಜಗತ್ತಿನಲ್ಲಿ ಶೇ 10ರಷ್ಟು ಮಾತ್ರ! ಇನ್ನೊಂದು ಆಶ್ಚರ್ಯಕರ ಸಂಗತಿಯೆಂದರೆ, ಎಡಚರಲ್ಲಿ ಗಂಡಸರೇ ಹೆಚ್ಚು. ನರದೋಷ ಸಮಸ್ಯೆ, ಡೌನ್ ಸಿಂಡ್ರೋಮ್, ಡಿಸ್‌ಲೆಕ್ಷಿಯಾ, ಆಟಿಸಂ, ಸ್ಕೀಜೋಫ್ರೇನಿಯಾ ಕಾಯಿಲೆಯಿಂದ ಬಳಲುವವರಲ್ಲಿ ಎಡಚರೇ ಹೆಚ್ಚು. ಇವರಲ್ಲಿ ಮದ್ಯಪಾನಿಗಳು, ಸಲಿಂಗಕಾಮಿಗಳೂ ಹೆಚ್ಚಂತೆ. ಇವರ ಜೀವಿತಾವಧಿ ಬಲಗೈಯವರಿಗಿಂತ ಸರಾಸರಿ 9 ವರ್ಷಗಳಷ್ಟು ಕಡಿಮೆ ಎಂದೂ; ಕಾಲೇಜು ವಿದ್ಯಾಭ್ಯಾಸ ಪಡೆದ ಎಡಚರು ಬಲಗೈಯವರಿಗಿಂತ ಶೇ 15ರಷ್ಟು ಹೆಚ್ಚು ಹಣ ಗಳಿಸುತ್ತಾರೆ ಎಂಬುದು ಅಂತರ್ಜಾಲ ಮಾಹಿತಿಯ ಸಾರ.

ಈ ಎಲ್ಲ ವಾದಗಳು, ಅಭಿಪ್ರಾಯಗಳು ಏನೇ ಇದ್ದರೂ ಸಂಶೋಧನೆಗಳ ಒಟ್ಟಾರೆ ಅಭಿಪ್ರಾಯವೆಂದರೆ, ಬಲಗೈಯವರಿಗಿಂತ ಎಡಗೈಯವರು ಹೆಚ್ಚು ಬುದ್ಧಿವಂತರು ಎಂದು. ಎಡಚರಲ್ಲಿ ಸೃಜನಶೀಲತೆ ಹೆಚ್ಚು. ಕಲೆ, ಸಾಹಿತ್ಯ, ಸಂಗೀತ, ವಿಜ್ಞಾನ, ರಾಜಕೀಯ, ಕ್ರೀಡೆಗಳಲ್ಲಿ ಗಮನಾರ್ಹ ಸಾಧನೆ ಮಾಡಿದವರು ಅನೇಕರಿದ್ದಾರೆ. ಈಜುಗಾರರು, ಬಾಕ್ಸರ್‌ಗಳಲ್ಲಿ ಹೆಚ್ಚಿನವರು ಎಡಚರಾದರೆ, ಶೇ 40ರಷ್ಟು ಟೆನ್ನಿಸ್ ಆಟಗಾರರೂ ಎಡಚರೇ! ಜಗತ್ತಿನ ಜನಸಂಖ್ಯೆಯ ಬರೀ ಶೇ 20ರಷ್ಟಿರುವ ಎಡಚರಲ್ಲಿ ಸಾಧಕರ ಸಂಖ್ಯೆಯನ್ನು ನೋಡಿದಾಗ ಇದು ನಿಜ ಎನ್ನಿಸದೇ ಇರದು.

`ಎಡ' ಅಥವಾ `ಬಲ' ಪ್ರಾಬಲ್ಯತೆ ಹುಟ್ಟಿನಿಂದಲೇ ಬರುವುದಾದರೂ ಬಲ ಪದಕ್ಕಿರುವ `ಪವಿತ್ರ', `ಒಳ್ಳೆಯದು', `ಸರಿ', `ಶ್ರೇಷ್ಠ' ಎಂಬ ಪರ್ಯಾಯಗಳಿಂದಾಗಿ ಸಾಂಸ್ಕೃತಿಕವಾಗಿಯೂ ಸಾರ್ವತ್ರಿಕವಾಗಿಯೂ ಅದು ಒಪ್ಪಿಗೆಯ ಮುದ್ರೆ ಪಡೆದಿದೆ. ಇದಕ್ಕೆ ಒತ್ತು ಕೊಡುವಂತೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ವ್ಯಕ್ತಿಯನ್ನು ಎದುರುಗೊಳ್ಳುವಾಗ, ಹಸ್ತಲಾಘವ ಮಾಡುವಾಗ, ಊಟ ಬಡಿಸುವಾಗ, ಮಂಗಳ ಕಾರ್ಯಗಳಲ್ಲಿ ಬಲಗೈ ಬಳಕೆ ಕಡ್ಡಾಯ. ಸೆಲ್ಯೂಟ್ ಹೊಡೆಯುವುದು ಕೂಡ ಬಲಗೈಯಿಂದಲೇ.

ಎಲ್ಲ ದೇಶಗಳಲ್ಲೂ ಇದು ಸರ್ವಸಮ್ಮತ. ಬಲ ಶಬ್ದದ ಮೇಲರಿಮೆಯಿಂದಾಗಿ ಬಲಗೈ ಬಳಕೆಗೇ ಹೆಚ್ಚು ಪ್ರಾಶಸ್ತ್ಯ- ಮನ್ನಣೆ. ಅಶುಭವಾದದ್ದು, ಕೀಳು ಕೆಲಸಕ್ಕೆ, ಶೌಚಕ್ರಿಯೆಗೆ ಎಡಗೈ ಬಳಕೆ ಎಂಬುದು  ಸರ್ವವಿಧಿತ. ಅಹಿತಕರ ಘಟನೆ ಘಟಿಸಿದಾಗಲೋ ಅಥವಾ ದಿನ ಅಂದುಕೊಂಡಂತೆ ಇಲ್ಲದಿದ್ದಾಗ `ಇವತ್ತು ಎಡಮಗ್ಗುಲಲ್ಲಿ ಎದ್ದೆ ಅಂತ ಕಾಣುತ್ತೆ. ಒಂದೂ ಸರಿಯಿಲ್ಲ' ಎನ್ನುವುದು ಇಂದಿಗೂ ರೂಢಿಯಲ್ಲಿದೆ.

ಅಲ್ಪಸಂಖ್ಯಾತರು!
ಬಲಕ್ಕೆ ಪ್ರಾಮುಖ್ಯತೆ ಇರುವ ಈ ಜಗತ್ತಿನಲ್ಲಿ ಬಲಗೈಯವರ ಅನುಕೂಲಕ್ಕಾಗಿಯೇ ರೂಪುಗೊಂಡಿರುವ ನಡವಳಿಕೆಗಳು, ಚಟುವಟಿಕೆಗಳು, ಉಪಕರಣಗಳ ಬಳಕೆ ಎಲ್ಲವೂ ಇರುವಾಗ, ಅಕ್ಷರಶಃ ಅಲ್ಪಸಂಖ್ಯಾತರಾಗಿರುವ ಎಡಚರಿಗೆ ಹೆಜ್ಜೆಹೆಜ್ಜೆಗೂ ಅನನುಕೂಲಗಳೇ ಹೆಚ್ಚು. ಇದರಿಂದ ಉಂಟಾಗುವ ಅಡಚಣೆಗಳು, ತೊಡಕುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಏಗುತ್ತಾ ತಮ್ಮ ಸೃಜನಶೀಲತೆಯನ್ನು ಮೆರೆಯಬೇಕಾಗಿ ಬರುವುದು ಎಷ್ಟು ಕ್ಲಿಷ್ಟ ಅಲ್ಲವೇ?

ಇತ್ತೀಚಿನ ದಿನಗಳಲ್ಲಿ ಎಡಗೈ ಬಳಕೆಯನ್ನು ಬುದ್ಧಿಪೂರ್ವಕವಾಗಿ ದೈನಂದಿನ ಜೀವನದಲ್ಲಿ ರೂಢಿಸಿಕೊಳ್ಳುವುದು ಫ್ಯಾಷನ್ ಆಗಿದೆ. ಎಡಚರನ್ನು ಮುಕ್ತಮನದಿಂದ ಹೊಗಳುವುದು, ಅದು ಕೇಡೆಂದಾಗಲೀ, ಅನಿಷ್ಟವೆಂದಾಗಲೀ ಹೀಯಾಳಿಸದೆ ಅವರ ಕೆಲಸಗಳನ್ನು ಬೆರಗುಗಣ್ಣಿನಿಂದ, ಮೆಚ್ಚುಗೆಯಿಂದ ವೀಕ್ಷಿಸುವುದನ್ನು ಕಂಡಾಗ ಎಡಚಳಾಗಿದ್ದಕ್ಕೆ ಹೆಮ್ಮೆ ಎನಿಸುತ್ತದೆ.

ಚಿಕ್ಕಂದಿನಿಂದಲೇ ಬಲಗೈ ಪ್ರಾಬಲ್ಯದ ಪ್ರಪಂಚಕ್ಕೆ ಹೊಂದಿಕೊಳ್ಳಲು ಹೊಂದಾಣಿಕೆ ಸೂತ್ರಕ್ಕೆ ಶರಣಾಗಿ ಜೀವನ ಕಲಿಕೆ ಪ್ರಾರಂಭಿಸಿದ್ದಕ್ಕೋ ಏನೋ, ಪ್ರೌಢಾವಸ್ಥೆಯಲ್ಲಿ ಎಂತಹ ಪರಿಸ್ಥಿತಿಯನ್ನೂ ಎದುರಿಸಿ ಹೊಂದಿಕೊಳ್ಳುವಂತಹ ಮನೋಸ್ಥೈರ್ಯ ನನ್ನಲ್ಲಿ ಬೆಳೆದಿದೆ. ನನ್ನ ಮಗನನ್ನು ಶಾಲೆಗೆ ಸೇರಿಸುವಾಗ ಅವನೇಕೆ ಎಡಚ ಎಂಬುದನ್ನು ತಿಳಿಹೇಳಿ, ನನ್ನ ಅಪ್ಪ ಹಾಕಿಕೊಟ್ಟ ಹಾದಿಯನ್ನು ಮುಂದುವರಿಸಿದ್ದೇನೆ!

ಇವರೆಲ್ಲ ಎಡಚರು!

ಅಮಿತಾಭ್ ಬಚ್ಚನ್, ವಿಷ್ಣುವರ್ಧನ್, ಮರ್ಲಿನ್ ಮನ್ರೊ, ಏಂಜಲಿನಾ ಜೋಲಿ, ಸಚಿನ್ ತೆಂಡೂಲ್ಕರ್, ಗಂಗೂಲಿ, ಯುವರಾಜ್ ಸಿಂಗ್, ಮಾರ್ಟಿನಾ ನವ್ರಾಟಿಲೋವಾ, ಬ್ರಯಾನ್ ಲಾರಾ, ಪೀಲೆ, ಮರಡೋನಾ, ನಡಾಲ್, ಲಿಯೊನಾರ್ಡೋ ಡ ವಿಂಚಿ, ಮೈಕಲ್ ಏಂಜಲೋ, ಸರ್ ಐಸಾಕ್ ನ್ಯೂಟನ್, ಚಾರ್ಲ್ಸ್ ಡಾರ್ವಿನ್, ಬೆಂಜಮಿನ್ ಫ್ರಾಂಕ್ಲಿನ್, ಐನ್‌ಸ್ಟೀನ್, ಚಾರ್ಲಿ ಚಾಪ್ಲಿನ್, ಅರಿಸ್ಟಾಟಲ್, ಮೇರಿ ಕ್ಯೂರಿ, ಗಾಂಧೀಜಿ, ಬಿಲ್‌ಗೇಟ್ಸ್, ನೆಲ್ಸನ್ ಮಂಡೇಲಾ, ಬರಾಕ್ ಒಬಾಮ, ಬಿಲ್ ಕ್ಲಿಂಟನ್, ಜಾರ್ಜ್ ಬುಷ್, ಓಪ್ರಾ ವಿನ್‌ಫ್ರೇ... ಸಾಧಕರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಎಡಗೈ ಕ್ರೀಡಾಳುಗಳನ್ನು `ಸೌತ್‌ಪಾ' ಎನ್ನುತ್ತಾರೆ. ಇಂಗ್ಲೆಂಡ್‌ನಲ್ಲಿ ಬೇಸ್‌ಬಾಲ್ ಆಡುವ ಸಂದರ್ಭದಲ್ಲಿ ಹುಟ್ಟಿಕೊಂಡ ಪದ ಇದು.

-ಲತಾ ಉದಯಹೆಗಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT