ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲೆ ಎಂಬ ತೂತು ಮಡಕೆ

Last Updated 10 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಅವತ್ತೇ ದ್ವಿತೀಯ ಪಿಯುಸಿ ಫಲಿತಾಂಶ ಬಂದಿತ್ತು. ನಮ್ಮ ಪ್ರಯೋಗಾಲಯದಿಂದ ಆಫೀಸಿನ ಕಡೆಗೆ ಹೊರಟಿದ್ದೆ. ಎದುರಿಗೆ ಮೀನಾಕ್ಷಿ ಸಿಕ್ಕಿದರು. ಅವರು ನನ್ನ ವಿದ್ಯಾರ್ಥಿನಿ ರಶ್ಮಿಯ ತಾಯಿ. ನನ್ನನ್ನು ನೋಡಿದವರೇ ‘ಏನ್ಸಾರ್ ರಿಸಲ್ಟ್ ಹೀಗಾಗೋಯ್ತು’ ಎಂದರು. ಅವರ ದನಿಯಲ್ಲಿ ದುಗುಡವಿತ್ತು.

‘ಏಕೆ ಏನಾಯ್ತು?’ ಎಂದು ವಿಚಾರಿಸಿದೆ. ‘ನಮ್ಮ ಹುಡುಗಿ ಜಸ್ಟ್ ಪಾಸಾಗಿದ್ದಾಳೆ ಸಾರ್’ ಎಂದರು, ಕಣ್ಣಂಚಿನಲ್ಲಿ ನೀರು ಜಿನುಗುತ್ತಿತ್ತು. ಮಗಳನ್ನು ಡಾಕ್ಟರ್ ಮಾಡಬೇಕೆಂಬ ಕನಸು ಹೊತ್ತವರು ಮೀನಾಕ್ಷಿ. ಅದಕ್ಕಾಗಿ ತುಂಬಾ ಕಾಳಜಿ ವಹಿಸುತ್ತಿದ್ದರು. ‘ಏಕೆ ಸರಿಯಾಗಿ ಓದಲಿಲ್ಲವೇ?’ ನಾನು ಮಾಮೂಲಿ ಪ್ರಶ್ನೆ ಕೇಳಿದೆ. ‘ಅಯ್ಯೋ, ಹಾಗೇನಿಲ್ಲ ಸಾರ್. ತುಂಬಾ ಓದಿದಳು. ದಿನರಾತ್ರಿ ಒಂದು ಮಾಡಿ ಓದಿದಳು. ನಾವೂ ಅವಳ ಜೊತೆ ಇದ್ದು ಓದಿಸಿದೆವು. ಜೊತೆಗೆ ಪಾಠಕ್ಕೂ ಕಳಿಸಿದ್ದೆವು.

ಆದರೂ ಅವಳು ತಗೊಂಡಿರೋ ಮಾರ್ಕ್‌ ನೋಡಿ ಸಾರ್. ಎಷ್ಟು ಕಡಿಮೆ. ಇನ್ನು ಇವಳು ಡಾಕ್ಟರ್ ಆಗೋದು ಸಾಧ್ಯವಾ? ಅದು ಹೋಗಲಿ ಅಂದರೆ ಈಗ ನಾನು ಮುಂದೆ ಓದೋದೇ ಇಲ್ಲ ಅಂತ ಹಟ ಹಿಡಿದು ಕೂತಿ­ದ್ದಾಳೆ. ಮನೆಯಿಂದ ಆಚೆ ಬಂದು ಮೂರು ದಿನ ಆಗಿದೆ. ಏನು ಮಾಡಿಕೊಂಡುಬಿಡ್ತಾಳೋ ಅಂತ ನಮ್ಮ ಮನೆಯವ­ರನ್ನ ಕಾವಲು ಹಾಕಿ ಬಂದಿದ್ದೀನಿ’ ಎಂದು ಮಾತು ನಿಲ್ಲಿಸಿ ಕಣ್ಣೊರೆಸಿಕೊಂಡರು. ನನಗೇನು ಹೇಳಬೇಕೋ ತೋಚಲಿಲ್ಲ.

ರಶ್ಮಿಯ ಸಮಸ್ಯೆ ಏನು?
ಏಕಾಗ್ರತೆಯ ಕೊರತೆಯೇ ರಶ್ಮಿಯ ಸಮಸ್ಯೆ. ಅಂದರೆ, ತಲೆ ಎಂಬ ಮಡಕೆಯಲ್ಲಿ ತೂತುಗಳು ಇವೆ ಎಂದರ್ಥ. ಇದನ್ನು ಸರಳವಾಗಿ ಹೀಗೆ ಅರ್ಥ ಮಾಡಿಕೊಳ್ಳಬಹುದು. ಜ್ಞಾನ ಸ್ವೀಕಾರ ಮಾಡುವ ತಲೆಯನ್ನು ಒಂದು ಮಡಕೆ ಎಂದು ಭಾವಿಸಿದರೆ, ಏಕಾಗ್ರತೆಯ ಕೊರತೆ ಇರುವ ಮಕ್ಕಳ ತಲೆ ಎಂಬ ಮಡಕೆಯ ಕತ್ತು ನೆಟ್ಟಗಿರುವುದಿಲ್ಲ (ಅಂದರೆ, ಪಾಠ ಓದುವಾಗ/ ಕೇಳುವಾಗ ಕಣ್ಣು, ಕಿವಿ ಪುಸ್ತಕ, ಶಿಕ್ಷಕರ ಕಡೆಗೆ ನೆಟ್ಟಿರುವುದಿಲ್ಲ). ಇದರಿಂದ ಜ್ಞಾನ ಸ್ವೀಕಾರವೇ ಗರಿಷ್ಠವಾಗಿರುವುದಿಲ್ಲ.

ಜೊತೆಗೆ, ಕೆಲವು ಮಕ್ಕಳ ತಲೆಯೆಂಬ ಮಡಕೆಯಲ್ಲಿ ಒಂದು ಸಣ್ಣ ರಂಧ್ರ ಇರುತ್ತದೆ. ಇದರಿಂದಾಗಿ ಇಂದು ಹೇಳಿಕೊಟ್ಟ ಪಾಠ ನಿಧಾನವಾಗಿ ಸೋರಿಹೋಗುತ್ತಿರುತ್ತದೆ. ಹೆಚ್ಚೆಂದರೆ ಒಂದು ತಿಂಗಳವರೆಗೆ ಅದು ತಲೆಯೆಂಬ ಮಡಕೆಯಲ್ಲಿ ಇರುತ್ತದೆ. ಆನಂತರ ಅಲ್ಲೇನೂ ಇರುವುದಿಲ್ಲ.

ಇನ್ನು ಕೆಲವರ ತಲೆಯೆಂಬ ಮಡಕೆಯಲ್ಲಿ ಎರಡು– ಮೂರು ರಂಧ್ರಗಳಿರುತ್ತವೆ. ಅದರೊಳಗೆ ಸುರಿದ ಜ್ಞಾನ ಒಂದು ವಾರದೊಳಗೆ ಸೋರಿಹೋಗುತ್ತದೆ. ಮತ್ತೆ ಕೆಲವರಲ್ಲಿ ಇನ್ನೂ ಹೆಚ್ಚಿನ ರಂಧ್ರಗಳಿರುತ್ತವೆ. ಅಂಥವರ ತಲೆಯೊಳಗೆ ಸುರಿದ ಜ್ಞಾನ ಒಂದು ದಿನದವರೆಗೆ ಮಾತ್ರ ಇರುತ್ತದೆ. ಕೆಲವರ ತಲೆಯೆಂಬ ಮಡಕೆಗೆ ತಳವೇ ಇರುವುದಿಲ್ಲ.

ಅಂಥವರ ತಲೆಗೆ ಸುರಿದ ಜ್ಞಾನ ಧಾರಣೆಯಾಗದೆ ಆಗಿಂದಾಗಲೇ ಸೋರಿಹೋಗುತ್ತಿರುತ್ತದೆ. ಇದು ಮಕ್ಕಳನ್ನು ಶೈಕ್ಷಣಿಕವಾಗಿ ಕಾಡುವ ನಿಜವಾದ ಮತ್ತು ಅತ್ಯಂತ ದೊಡ್ಡ ಸಮಸ್ಯೆ. ಇದೇ ವಿದ್ಯಾರ್ಥಿಗಳನ್ನು ಕಾಡುವ ಬೇರೆಲ್ಲಾ ಸಮಸ್ಯೆಗಳಿಗೂ ಮೂಲ. ಅವರಿಗೆ ಕನ್ನಡ, ಇಂಗ್ಲಿಷ್, ಸಮಾಜ, ಗಣಿತ, ಫಿಸಿಕ್ಸ್, ಕೆಮಿಸ್ಟ್ರಿ... ಇತ್ಯಾದಿ ಯಾವ ಪಠ್ಯ ವಿಷಯವೂ ಸಮಸ್ಯೆಯಲ್ಲ. ನಿಜವಾದ ಸಮಸ್ಯೆ ಇರುವುದು ಈ ವಿಷಯಗಳ ಸ್ವೀಕಾರ ಮತ್ತು ಧಾರಣೆಯಲ್ಲಿ.

ಇಂಥ ಮಕ್ಕಳನ್ನು ಸರಿ ಮಾಡಬೇಕೆಂದರೆ ಅವರ ತಲೆಯೆಂಬ ಮಡಕೆಯಲ್ಲಿ ಇರುವ ರಂಧ್ರಗಳನ್ನು ಮೊದಲು ಮುಚ್ಚಬೇಕು. ಆ ರಂಧ್ರಗಳನ್ನು ಮುಚ್ಚುವ ಬಿರಟೆಯೇ ಏಕಾಗ್ರತೆ. ಏಕಾಗ್ರತೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳದೆ ಬೇರೇನೇ ಮಾಡಿದರೂ ಅದು ತೂತು ತೊಟ್ಟಿಗೆ ನೀರು ಸುರಿದಂತೆ ಆಗುತ್ತದೆ.

ರಶ್ಮಿಯ ಸಮಸ್ಯೆ ಇದೇ. ಅವಳ ತಲೆ ಎಂಬ ಮಡಕೆಯಲ್ಲಿ ತೂತುಗಳಿವೆ. ಇದನ್ನು ಯಾವುದೇ ವಿಷಯದ ಅಧ್ಯಯನಕ್ಕೆ ಅನ್ವಯಿಸಿದರೆ ಏನಾಗುತ್ತದೆ? ಸರಳ ಲೆಕ್ಕಾಚಾರದ ಮೂಲಕ ಇದನ್ನು ಹೀಗೆ ಅರ್ಥ ಮಾಡಿಕೊಳ್ಳಬಹುದು:
ಅಂಕಗಳ ಮೇಲೆ ಏಕಾಗ್ರತೆ ಕೊರತೆಯ ಪರಿಣಾಮ (ಅಂಕಗಳು ನಾಸ್ತಿ) ಏಕಾಗ್ರತೆಯ ಮಟ್ಟ ಶೇ 100 ಇದ್ದಲ್ಲಿ ಸೋರಿಕೆ ಸೊನ್ನೆಯಾಗಿರುತ್ತದೆ. ಅಂಥ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಎಲ್ಲ ಪ್ರಶ್ನೆಗಳಿಗೆ ಸರಿ ಉತ್ತರ ಬರೆದು 100ಕ್ಕೆ 100 ಅಂಕ ಗಳಿಸುತ್ತಾರೆ.

ಏಕಾಗ್ರತೆಯ ಮಟ್ಟ ಶೇ 75 ಇದ್ದಲ್ಲಿ ಸೋರಿಕೆ ಶೇ 25 ಆಗಿರುತ್ತದೆ. ಅಂಥ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಬರೆದ ಉತ್ತರಗಳು ಒಟ್ಟಾರೆ ಶೇ 75 ಸರಿಯಾಗಿರುತ್ತವೆ. ಹೀಗಾಗಿ ಅವರು ಗಳಿಸುವ ಅಂಕ ಕೂಡ 75 ಆಗಿರುತ್ತದೆ. ಇದರಂತೆಯೇ ಶೇ 25 ಮಾತ್ರ ಏಕಾಗ್ರತೆ ಉಳ್ಳವರು ಕೇವಲ 25 ಅಂಕಗಳನ್ನು ಗಳಿಸುತ್ತಾರೆ. ಸೊನ್ನೆ ಏಕಾಗ್ರತೆ ಉಳ್ಳವರು ಸೊನ್ನೆ ಅಂಕ ಗಳಿಸುತ್ತಾರೆ. ಅಂದರೆ, ಏಕಾಗ್ರತೆ ಎಷ್ಟೋ ಅಷ್ಟೇ ಅಂಕಗಳು ಎಂದಾಯಿತು.  

ಗ್ರಹಿಕೆಯ ಮೇಲೆ ಪರಿಣಾಮ
ಏಕಾಗ್ರತೆಯ ಮಟ್ಟ ಶೇ 100 ಇದ್ದವರು ಒಂದು ಪಾಠವನ್ನು ಪೂರ್ಣವಾಗಿ ಗ್ರಹಿಸಲು ಕೇವಲ ಒಂದು ಸಲ ಓದುತ್ತಾರೆ ಮತ್ತು ಅದಕ್ಕೆ ಒಂದು ಗಂಟೆ ಸಮಯ ತೆಗೆದುಕೊಳ್ಳುತ್ತಾರೆ ಎಂದಿಟ್ಟುಕೊಳ್ಳೋಣ. ಇದರೊಂದಿಗೆ ಹೋಲಿಕೆ ಮಾಡಿದರೆ ಶೇ 75ರಷ್ಟು ಏಕಾಗ್ರತೆ ಮಾತ್ರ ಇರುವವರು, ಅಂದರೆ ಶೇ 25ರಷ್ಟು ಕೊರತೆ ಇರುವವರು, ಅದೇ ಪಾಠವನ್ನು ಗ್ರಹಿಸಲು 2 -3 ಸಲ ಓದಬೇಕಾಗುತ್ತದೆ ಮತ್ತು ಅದಕ್ಕೆ ಅವರಿಗೆ 3-4 ಗಂಟೆ ಬೇಕಾಗುತ್ತದೆ.

ಶೇ 50ರಷ್ಟು ಕೊರತೆ ಇರುವವರು 3-4 ಸಲ ಓದಬೇಕಾಗುತ್ತದೆ ಮತ್ತು ಅದಕ್ಕಾಗಿ 4 -5 ಗಂಟೆ ಬೇಕಾಗುತ್ತದೆ. ಏಕಾಗ್ರತೆಯ ಕೊರತೆಯೊಂದಿಗೆ ಎಷ್ಟು ಸಲ ಓದಬೇಕು ಎಂಬುದು ಮತ್ತು ಅದಕ್ಕೆ ಬೇಕಾಗುವ ಸಮಯ ಎರಡೂ ಹೆಚ್ಚುತ್ತಾ ಹೋಗುತ್ತದೆ. ಇದನ್ನು ನಾನು ಸುಮ್ಮನೆ ಹೇಳುತ್ತಿಲ್ಲ. ಇದಕ್ಕೆ ಪ್ರಾಯೋಗಿಕ ಸಮರ್ಥನೆ ಇದೆ.

ಕುತೂಹಲಕ್ಕೆ ನಮ್ಮ ಪ್ರಯೋಗಾಲಯದಲ್ಲಿ ನಾನೊಂದು ಪ್ರಯೋಗ ಮಾಡಿದೆ. ಪ್ರಯೋಗಾಲಯದಲ್ಲಿದ್ದ 16 ವಿದ್ಯಾರ್ಥಿಗಳ ತಂಡಕ್ಕೆ ಒಂದೇ ಪ್ರಯೋಗದ ಪ್ರಯೋಗ ವಿವರ (ಪ್ರೊಸೀಜರ್) ಬರೆಯಲು ಹೇಳಿದೆ. ಹೇಗೆ? ಮೊದಲು ಅವರು ಪ್ರಯೋಗ ವಿವರವನ್ನು ಕೈಪಿಡಿಯಲ್ಲಿ ಓದಬೇಕು. ಆ ನಂತರ ಕೈಪಿಡಿಯನ್ನು ಮುಚ್ಚಿಟ್ಟು ಸ್ವತಂತ್ರವಾಗಿ ಪ್ರಯೋಗ ವಿವರವನ್ನು ಬರೆಯಬೇಕು.

ಬರೆದದ್ದನ್ನು ಕೈಪಿಡಿಯೊಂದಿಗೆ ಹೋಲಿಸಿ, ಆಗಿರುವ ತಪ್ಪುಗಳೆಷ್ಟು ಎಂಬುದನ್ನು ಅವರೇ ಗುರುತಿಸಬೇಕು. ಅದಕ್ಕೆ ಅವರು ಎಷ್ಟು ಸಲ ಓದಿದರು, ಎಷ್ಟು ಸಮಯ ತೆಗೆದುಕೊಂಡರು, ಬರೆಯಲು ಎಷ್ಟು ಸಮಯ ತೆಗೆದುಕೊಂಡರು, ಓದಿ -ಬರೆಯಲು ಒಟ್ಟು ಎಷ್ಟು ಸಮಯ ತೆಗೆದುಕೊಂಡರು, ಬರೆದದ್ದರಲ್ಲಿ ಎಷ್ಟು ತಪ್ಪುಗಳಿದ್ದವು ಎಂಬುದನ್ನು ಒಂದು ಕೋಷ್ಟಕದಲ್ಲಿ ದಾಖಲಿಸುವಂತೆ ಹೇಳಿದೆ. ಇಲ್ಲಿ ಎರಡು ತುದಿಗಳಲ್ಲಿದ್ದ ವಿದ್ಯಾರ್ಥಿಗಳ ವಿಷಯವನ್ನು ಪ್ರಸ್ತಾಪಿಸಿದ್ದೇನೆ.

ಮೊದಲ ತುದಿಯಲ್ಲಿದ್ದ ವಿದ್ಯಾರ್ಥಿ ಕೇವಲ 10 ನಿಮಿಷದಲ್ಲಿ ಎರಡು ಸಲ ಓದಿ, 15 ನಿಮಿಷದಲ್ಲಿ ಬರೆದು ಮುಗಿಸಿದ್ದ. ಅವನು ಬರೆದದ್ದರಲ್ಲಿ ಇದ್ದ ತಪ್ಪುಗಳು 2. ಅಂದರೆ, ಅವನು ಓದಿ ಬರೆಯಲು ತೆಗೆದುಕೊಂಡ ಒಟ್ಟು ಸಮಯ 25 ನಿಮಿಷ. ಅದೇ ಕೊನೆಯ ತುದಿಯಲ್ಲಿದ್ದ ವಿದ್ಯಾರ್ಥಿ ಬರೆಯುವುದಕ್ಕೆ ಮುಂಚೆ 10 ಸಲ ಓದಿದ್ದ. ಅದಕ್ಕೆ ಅವನು ತೆಗೆದುಕೊಂಡ ಸಮಯವೇ 40 ನಿಮಿಷ. ಆನಂತರ ಬರೆಯಲು ತೆಗೆದುಕೊಂಡ ಸಮಯ 30 ನಿಮಿಷ. ಅಂದರೆ, ಓದಿ ಬರೆಯಲು ತೆಗೆದುಕೊಂಡ ಒಟ್ಟು ಸಮಯ 60 ನಿಮಿಷ. ಅದರಲ್ಲಿದ್ದ ತಪ್ಪುಗಳ ಸಂಖ್ಯೆ 7. ಈ ಎರಡೂ ತುದಿಗಳ ನಡುವೆ ಉಳಿದ ವಿದ್ಯಾರ್ಥಿಗಳಿದ್ದರು. ರಶ್ಮಿ ಹೆಚ್ಚುಕಮ್ಮಿ ಕೊನೆಯ ತುದಿಯಲ್ಲಿದ್ದಳು.

ಒಂದೆರಡು ಸಲ/ ಒಂದೆರಡು ಗಂಟೆ ಓದಬೇಕಾದ ಜಾಗದಲ್ಲಿ ಆರೇಳು ಸಲ/ ಆರೇಳು ಗಂಟೆ ಓದಬೇಕಾದ ಅನಿವಾರ್ಯಕ್ಕೆ ಸಿಲುಕಿದ ವಿದ್ಯಾರ್ಥಿಗೆ ಓದುವುದು ಹಿಂಸೆ, ಅಸಾಧ್ಯ, ನರಕ ಅನ್ನಿಸುತ್ತದೆ. ಓದು ತನ್ನ ತಲೆಗೆ ಹತ್ತುವುದಿಲ್ಲ ಎಂದು ಸಹ ಅನ್ನಿಸಬಹುದು. ಇದರಿಂದ ಆತ/ ಆಕೆ ಶಾಲೆ ಅಥವಾ ಕಾಲೇಜು ಬಿಡುವ ಇಲ್ಲವೇ  ಬೇರೆ ಅಡ್ಡ ದಾರಿಗಳನ್ನು ಹಿಡಿಯುವ ಸಾಹಸಕ್ಕೆ ಕೈಹಾಕಬಹುದು ರಶ್ಮಿಯಂತೆ.

ಅಂತಹವರನ್ನು ರಕ್ಷಿಸಬೇಕಾದರೆ ಅವರಲ್ಲಿ ಸ್ವೀಕಾರ ಮತ್ತು ಧಾರಣಾ ಮನೋಭಾವವನ್ನು ಹೆಚ್ಚಿಸಬೇಕು. ಆ ಮೂಲಕ, ನಾನೂ ಓದಬಲ್ಲೆ ಎಂಬ ವಿಶ್ವಾಸ ಮೂಡಿಸ­ಬೇಕು. ಅದಕ್ಕಾಗಿ ನಾವು ಮೊದಲು ಮಾಡಬೇಕಾದದ್ದು ಅವರ ಏಕಾಗ್ರತೆಯನ್ನು ಹೆಚ್ಚಿಸುವ ಕೆಲಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT