ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನಾ, ಶ್ರೀಕಾಂತ್‌ ಶುಭಾರಂಭ

ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಸಮೀರ್‌ ವರ್ಮಾಗೆ ಸೋಲು
Last Updated 7 ಮಾರ್ಚ್ 2019, 18:21 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್‌ : ಭಾರತದ ಸೈನಾ ನೆಹ್ವಾಲ್‌ ಮತ್ತು ಕಿದಂಬಿ ಶ್ರೀಕಾಂತ್‌ ಅವರು ಪ್ರತಿಷ್ಠಿತ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದ್ದಾರೆ.

ಬುಧವಾರ ರಾತ್ರಿ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಪೈಪೋಟಿಯಲ್ಲಿ ಸೈನಾ 21–17, 21–18 ನೇರ ಗೇಮ್‌ಗಳಿಂದ ಸ್ಕಾಟ್ಲೆಂಡ್‌ನ ಕ್ರಿಸ್ಟಿ ಗಿಲ್‌ಮೌರ್‌ ಅವರನ್ನು ಪರಾಭವಗೊಳಿಸಿದರು. ಈ ಹೋರಾಟ 35 ನಿಮಿಷ ನಡೆಯಿತು.

ಎರಡನೇ ಸುತ್ತಿನಲ್ಲಿ ಸೈನಾ, ಡೆನ್ಮಾರ್ಕ್‌ನ ಲಿನೆ ಹೊಜ್‌ಮಾರ್ಕ್‌ ಜಾಯೆರ್ಸ್‌ಫೆಲ್ತ್‌ ಎದುರು ಆಡಲಿದ್ದಾರೆ.

ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಪದಕ ಗೆದ್ದ ಸಾಧನೆ ಮಾಡಿರುವ ಸೈನಾ, ಆರಂಭಿಕ ಗೇಮ್‌ನ ಶುರುವಿನಲ್ಲಿ ಎದುರಾಳಿಯಿಂದ ಪ್ರಬಲ ಪೈಪೋಟಿ ಎದುರಿಸಿದರು. ಹೀಗಾಗಿ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು. ನಂತರ ಚುರುಕಿನ ಸರ್ವ್‌ ಮತ್ತು ಆಕರ್ಷಕ ಬ್ಯಾಕ್‌ ಹ್ಯಾಂಡ್‌ ಹೊಡೆತಗಳ ಮೂಲಕ ಭಾರತದ ಆಟಗಾರ್ತಿಯು ಗಿಲ್‌ಮೌರ್‌ ಅವರನ್ನು ಕಂಗೆಡಿಸಿದರು.

ಎರಡನೇ ಗೇಮ್‌ನಲ್ಲೂ ಉಭಯ ಆಟಗಾರ್ತಿಯರು ತುರುಸಿನ ಪೈಪೋಟಿ ನಡೆಸಿದರು. ರೋಚಕತೆ ಕಾಯ್ದುಕೊಂಡು ಸಾಗಿದ್ದ ಪಂದ್ಯದ ಕೊನೆಯಲ್ಲಿ ಸೈನಾ ಮೇಲುಗೈ ಸಾಧಿಸಿದರು.

ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಹೋರಾಟದಲ್ಲಿ ಶ್ರೀಕಾಂತ್‌ 21–13, 21–11ರಲ್ಲಿ ಫ್ರಾನ್ಸ್‌ನ ಬ್ರೈಸ್‌ ಲೆವರ್‌ಡೆಜ್‌ ಅವರನ್ನು ಮಣಿಸಿದರು.

ಮುಂದಿನ ಸುತ್ತಿನಲ್ಲಿ ಶ್ರೀಕಾಂತ್‌, ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನದ ಸಾಧನೆ ಮಾಡಿರುವ ಜೊನಾಥನ್‌ ಕ್ರಿಸ್ಟಿ ಎದುರು ಸೆಣಸಲಿದ್ದಾರೆ.

ಸಮೀರ್‌ಗೆ ನಿರಾಸೆ: ಸಮೀರ್‌ ವರ್ಮಾ, ಮೊದಲ ಸುತ್ತಿನಲ್ಲೇ ಮುಗ್ಗರಿಸಿದರು.

ಸಮೀರ್‌ 21–16, 18–21, 14–21ರಲ್ಲಿ ಡೆನ್ಮಾರ್ಕ್‌ನ ಆಟಗಾರ, ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ವಿಕ್ಟರ್‌ ಆ್ಯಕ್ಸಲ್‌ಸನ್‌ ಎದುರು ಸೋತರು.

ಮಹಿಳೆಯರ ಡಬಲ್ಸ್‌ನಲ್ಲಿ ಕಣದಲ್ಲಿದ್ದ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ ಕೂಡಾ ಆರಂಭಿಕ ಸುತ್ತಿನಲ್ಲೇ ನಿರಾಸೆ ಕಂಡರು.

ಅಶ್ವಿನಿ ಮತ್ತು ಸಿಕ್ಕಿ 21–16, 26–28, 16–21ರಲ್ಲಿ ಜಪಾನ್‌ನ ಶಿಹೊ ತನಾಕ ಮತ್ತು ಕೊಹಾರು ಯೊನೆಮೊಟೊ ಎದುರು ಮಣಿದರು.

ಮಿಶ್ರ ಡಬಲ್ಸ್‌ ವಿಭಾಗದ ಮೊದಲ ಸುತ್ತಿನ ಪೈಪೋಟಿಯಲ್ಲಿ ಸಿಕ್ಕಿ ರೆಡ್ಡಿ ಮತ್ತು ಪ್ರಣವ್‌ ಜೆರಿ ಚೋಪ್ರಾ 21–23, 17–21ರಲ್ಲಿ ಹಾಂಕಾಂಗ್‌ನ ಚಾಂಗ್‌ ತಾಕ್‌ ಚಿಂಗ್‌ ಮತ್ತು ವಿಂಗ್‌ ಯಂಗ್‌ ಎದುರು ಪರಾಭವಗೊಂಡರು.

ಪುರುಷರ ಡಬಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಹೋರಾಟದಲ್ಲಿ ಮನು ಅತ್ರಿ ಮತ್ತು ಬಿ.ಸುಮೀತ್‌ ರೆಡ್ಡಿ 19–21, 21–16, 14–21ರಲ್ಲಿ ಚೀನಾದ ಒವು ಕ್ಸುವಾನ್ಯಿ ಮತ್ತು ರೆನ್‌ ಕ್ಸಿಯಾಂಗ್ಯು ಎದುರು ಸೋತರು.

***

ಆಲ್‌ ಇಂಗ್ಲೆಂಡ್‌ನಲ್ಲಿ ಪ್ರಶಸ್ತಿ ಗೆಲ್ಲುವುದು ಎಲ್ಲರ ಕನಸು. ಇದು ಸಾಕಾರಗೊಳ್ಳಬೇಕಾದರೆ ಎಲ್ಲಾ ಪಂದ್ಯಗಳಲ್ಲೂ ಶ್ರೇಷ್ಠ ಸಾಮರ್ಥ್ಯ ತೋರಬೇಕು. ಇದನ್ನು ಗಮನದಲ್ಲಿಟ್ಟುಕೊಂಡು ಆಡುತ್ತಿದ್ದೇನೆ.

-ಸೈನಾ ನೆಹ್ವಾಲ್‌,ಭಾರತದ ಆಟಗಾರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT