ಶುಕ್ರವಾರ, ನವೆಂಬರ್ 22, 2019
22 °C
ವಿಯೆಟ್ನಾಂ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ

ಸೌರಭ್‌ ವರ್ಮಾ ಸೆಮಿಫೈನಲ್‌ಗೆ

Published:
Updated:
Prajavani

ಹೊ ಚಿ ಮಿನ್‌ ಸಿಟಿ, ವಿಯೆಟ್ನಾಂ (ಪಿಟಿಐ): ದಿಟ್ಟ ಆಟವಾಡಿದ ಭಾರತದ ಸೌರಭ ವರ್ಮಾ ವಿಯೆಟ್ನಾಂ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ  ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಸ್ಥಳೀಯ ಆಟಗಾರ ತಿಯೆನ್‌ ಮಿನ್‌ ಎನ್‌ಗುಯೆನ್‌ ವಿರುದ್ಧ ಅವರು ನೇರ ಗೇಮ್‌ಗಳಿಂದ ಗೆದ್ದರು.

ಎರಡನೇ ಶ್ರೇಯಾಂಕದ ಸೌರಭ್‌, 43 ನಿಮಿಷಗಳ ಹಣಾಹಣಿಯಲ್ಲಿ ತಿಯೆನ್‌ ಮಿನ್‌ ಎದುರು 21–13, 21–18ರಿಂದ ಜಯಿಸಿದರು.

ಸದ್ಯ ರಾಷ್ಟ್ರೀಯ ಚಾಂಪಿಯನ್‌ ಆಗಿರುವ ಸೌರಭ್‌, ಹೈದರಾಬಾದ್‌ ಓಪನ್‌ನಲ್ಲಿ ಪ್ರಶಸ್ತಿ ಗೆದ್ದಿದ್ದರು.

ಮುಂದಿನ ಪಂದ್ಯದಲ್ಲಿ ಅವರು ಜಪಾನ್‌ನ ಮಿನೊರು ಕೊಗಾ ಅಥವಾ ಥಾಯ್ಲೆಂಡ್‌ನ ತನೊಂಗ್ಸಾಕ್‌ ಸೇನ್‌ ಸೊಂಬುನ್ಸಕ್‌ ಅವರನ್ನು ಎದುರಿಸುವರು.

ಪಂದ್ಯದ ಆರಂಭದಲ್ಲಿ ಸೌರಭ್‌ 4–1ರಿಂದ ಮುನ್ನಡೆ ಪಡೆದರು. ವಿರಾಮದ ಅವಧಿಯಲ್ಲಿ 11–6ರ ಮುನ್ನಡೆ ಅವರಿಗೆ ದೊರಕಿತ್ತು. ಮಧ್ಯಂತರದ ನಂತರವೂ ಪಂದ್ಯದಲ್ಲಿ ನಿಯಂತ್ರಣ ಕಾಯ್ದುಕೊಂಡ ಅವರು ಮೊದಲ ಗೇಮ್‌ ವಶಪಡಿಸಿಕೊಂಡರು.

ಎರಡನೇ ಗೇಮ್‌ನಲ್ಲಿ ಜಿದ್ದಾಜಿದ್ದಿ ಕಂಡುಬಂತು. ವಿರಾಮದ ವೇಳೆ ವಿಯೆಟ್ನಾಂ ಆಟಗಾರ 11–10ರಿಂದ ಮುನ್ನಡೆಯಲ್ಲಿದ್ದರು. ಆದರೆ ತಿರುಗೇಟು ನೀಡಿದ ಸೌರಭ್‌ 17–12ರಿಂದ ಮುನ್ನಡೆ ಗಳಿಸಿದರು. ಆದರೆ ಒಂದು ಹಂತದಲ್ಲಿ ಮಿನ್‌ 18–19ರಿಂದ ಹಿನ್ನಡೆ ತಗ್ಗಿಸಿಕೊಂಡರು. ಆದರೆ ಸತತ ಎರಡು ಪಾಯಿಂಟ್‌ ಗಳಿಸಿದ ಸೌರಭ್‌ ಜಯದ ಸಂಭ್ರಮದಲ್ಲಿ ಮಿಂದೆದ್ದರು.

ಪ್ರತಿಕ್ರಿಯಿಸಿ (+)