ಗುರುವಾರ , ಡಿಸೆಂಬರ್ 12, 2019
16 °C
ಕೊರಿಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್‌ ಟೂರ್ನಿ: ಸೌರಭ್‌ ನಿರ್ಗಮನ

ಶ್ರೀಕಾಂತ್‌, ಸಮೀರ್‌ ಮುನ್ನಡೆ

Published:
Updated:
Prajavani

ಗ್ವಾಂಗ್‌ಜು (ಕೊರಿಯಾ): ಕೊರಿಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಆಟಗಾರರು ಶುಭಾರಂಭ ಮಾಡಿದ್ದಾರೆ. ಕಿದಂಬಿ ಶ್ರೀಕಾಂತ್‌ ಹಾಗೂ ಸಮೀರ್‌ ವರ್ಮಾ ಬುಧವಾರ ಟೂರ್ನಿ ಎರಡನೇ ಸುತ್ತಿಗೆ ಲಗ್ಗೆಯಿಟ್ಟರು.

ಆರನೇ ಶ್ರೇಯಾಂಕದ ಶ್ರೀಕಾಂತ್‌ ಅವರು ಹಾಂಗ್‌ಕಾಂಗ್‌ನ ವಾಂಗ್‌ ವಿಂಗ್‌ ಕಿ ವಿನ್ಸೆಂಟ್‌ ಅವರನ್ನು 21–18, 21–17 ಗೇಮ್‌ಗಳಿಂದ ಪರಾಭವಗೊಳಿಸಿದರು. ಕೇವಲ 37 ನಿಮಿಷಗಳಲ್ಲಿ ಪಂದ್ಯ ಮುಗಿಯಿತು. ಇದರೊಂದಿಗೆ ಭಾರತದ ಆಟಗಾರ ವಿನ್ಸೆಂಟ್‌ ಎದುರಿನ ಪಂದ್ಯಗಳ ಗೆಲುವಿನ ಸಂಖ್ಯೆಯನ್ನು 11ಕ್ಕೆ ಹೆಚ್ಚಿಸಿಕೊಂಡರು.

ಎರಡನೇ ಸುತ್ತಿನ ಹಣಾಹಣಿಯಲ್ಲಿ ಶ್ರೀಕಾಂತ್‌ ಅವರು ಜಪಾನ್‌ನ ಕಂಟಾ ತ್ಸುನೆಯಮಾ ವಿರುದ್ಧ ಆಡಲಿದ್ದಾರೆ.

ಮೊದಲ ಸುತ್ತಿನ ಮತ್ತೊಂದು ಪಂದ್ಯದಲ್ಲಿ ಸಮೀರ್‌ ವರ್ಮಾ ಅವರು ಜಪಾನ್‌ನ ಕಜುಮಸಾ ಸಕಾಯ್‌ ವಿರುದ್ಧ ಕಣಕ್ಕಿಳಿದಿದ್ದರು. ಸಮೀರ್‌ ಮೊದಲ ಗೇಮ್‌ನಲ್ಲಿ 11–8ರಲ್ಲಿ ಮುನ್ನಡೆಯಲ್ಲಿರುವಾಗ ಜಪಾನ್‌ ಆಟಗಾರ ಪಂದ್ಯದಿಂದ ಹಿಂದೆ ಸರಿದರು. ಸಮೀರ್‌ ಎರಡನೇ ಸುತ್ತಿಗೆ ಮುನ್ನಡೆದರು. ಮುಂದಿನ ಪಂದ್ಯದಲ್ಲಿ ಅವರು ಕೊರಿಯಾದ ಕಿಮ್‌ ಡೊಂಗನ್‌ ಅವರಿಗೆ ಮುಖಾಮುಖಿಯಾಗಲಿದ್ದಾರೆ.

ಮತ್ತೊಂದು ಪಂದ್ಯದಲ್ಲಿ ಸಮೀರ್‌ ಅವರ ಸಹೋದರ ಸೌರಭ್‌, ಡೊಂಗನ್‌ ಎದುರು ಸೋತರು. ಮೊದಲ ಗೇಮ್‌ ಗೆದ್ದ ಅವರು ಬಳಿಕ ಎರಡರಲ್ಲಿ ಎಡವಿದರು. 21–13, 12–21, 13–21ರಿಂದ ಪಂದ್ಯ ಕೈಚೆಲ್ಲಿದರು.

ಪ್ರತಿಕ್ರಿಯಿಸಿ (+)