ಶೂಟಿಂಗ್‌: ಭಾರತಕ್ಕೆ ಕಂಚಿನ ಪದಕ

7

ಶೂಟಿಂಗ್‌: ಭಾರತಕ್ಕೆ ಕಂಚಿನ ಪದಕ

Published:
Updated:

ಚಾಂಗ್ವಾನ್‌, ದಕ್ಷಿಣ ಕೊರಿಯಾ: ಭಾರತದ ದಿವ್ಯಾಂಶ್‌ ಸಿಂಗ್‌ ಪನ್ವಾರ್‌ ಹಾಗೂ ಶ್ರೇಯಾ ಅಗರ್‌ವಾಲ್‌ ಜೋಡಿಯು ಅಂತರರಾಷ್ಟ್ರೀಯ ಶೂಟಿಂಗ್‌ ಸ್ಪೋರ್ಟ್‌ ಫೆಡರೇಷನ್‌ (ಐಎಸ್‌ಎಸ್‌ಎಫ್‌) ಆಯೋಜಿಸಿರುವ ವಿಶ್ವ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದೆ. 

ಬುಧವಾರ ನಡೆದ 10 ಮೀಟರ್ಸ್‌ ಏರ್‌ ರೈಫಲ್‌ ಮಿಶ್ರ ಜೂನಿಯರ್‌ ವಿಭಾಗದ ಫೈನಲ್‌ನಲ್ಲಿ ಭಾರತದ ಈ ಜೋಡಿಯು 435 ಸ್ಕೋರ್‌ ಗಳಿಸಿತು. 

ಇಟಲಿಯ ಸೋಫಿಯಾ ಬೆನೆಟ್ಟಿ ಹಾಗೂ ಮಾರ್ಕೊ ಸಪ್ಪಿನಿ ಜೋಡಿಯು ಚಿನ್ನದ ಸಾಧನೆ ಮಾಡಿತು. ಇರಾನ್‌ನ ಸದೆಘಿಯಾನ್‌ ಅರ್ಮಿನಾ ಹಾಗೂ ಮೊಹಮ್ಮದ್‌ ಅಮೀರ್‌ ಜೋಡಿಯು ಬೆಳ್ಳಿಯ ಪದಕ ತನ್ನದಾಗಿಸಿಕೊಂಡಿತು. 

ಭಾರತದವರೇ ಆದ ಎಲವೆನಿಲ್‌ ವಲರಿವನ್‌ ಹಾಗೂ ಹೃದಯ್‌ ಹಜಾರಿಕಾ ಜೋಡಿಯು 13ನೇ ಸ್ಥಾನ ಪಡೆಯಿತು. ಇಲ್ಲಿಯವರೆಗೂ ಟೂರ್ನಿಯಲ್ಲಿ ಭಾರತ ಮೂರು ಚಿನ್ನ, ಮೂರು ಬೆಳ್ಳಿ ಹಾಗೂ ಮೂರು ಕಂಚಿನ ಪದಕಗಳನ್ನು ತನ್ನ ಖಾತೆಗೆ ಹಾಕಿಕೊಂಡಿದೆ. ಪದಕಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. 

ಪುರುಷರ 50 ಮೀಟರ್ಸ್‌ ರೈಫಲ್‌ ಪ್ರೋನ್‌ ಸ್ಪರ್ಧೆಯಲ್ಲಿ ಭಾರತದ ಚೇನ್‌ ಸಿಂಗ್‌ ಅವರು 623.9 ಸ್ಕೋರ್‌ನೊಂದಿಗೆ 14ನೇ ಸ್ಥಾನ ಪಡೆದರು. 620 ಸ್ಕೋರ್‌ ಗಳಿಸಿದ ಸಂಜೀವ್‌ ರಜಪೂತ್‌ 48ನೇ ಸ್ಥಾನ ಗಳಿಸಿದರು. 

ಮಹಿಳೆಯರ 50  ಮೀಟರ್ಸ್‌ ರೈಫಲ್‌ ಪ್ರೋನ್‌ನಲ್ಲಿ ತೇಜಸ್ವಿನಿ ಸಾವಂತ್‌ ಅವರು 28ನೇ ಸ್ಥಾನ ಪಡೆದರು. ಅವರು 617.4 ಸ್ಕೋರ್‌ ಗಳಿಸಿದರು. ಅಂಜುಮ್‌ ಮೌದ್ಗಿಲ್‌, 33ನೇ ಸ್ಥಾನ ಗಳಿಸಿದರು. 

ಮಹಿಳೆಯರ 10 ಮೀಟರ್ಸ್‌ ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಅಬಿದನ್ಯಾ ಪಾಟೀಲ್‌ 13ನೇ ಸ್ಥಾನ ಗಳಿಸಿದರು. ಅವರು 568 ಸ್ಕೋರ್‌ ಗಳಿಸಿದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !