ಗುರುವಾರ , ನವೆಂಬರ್ 21, 2019
27 °C
ಟ್ರ್ಯಾಕ್ ಏಷ್ಯಾಕಪ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌

ದಾಖಲೆ ನಿರ್ಮಿಸಿದ ರೊನಾಲ್ಡೊ

Published:
Updated:

ನವದೆಹಲಿ: ಭಾರತದ ರೊನಾಲ್ಡೊ ಲೈತೋನ್‌ಜಮ್‌ ಅವರು ಮಂಗಳವಾರ ಟ್ರ್ಯಾಕ್ ಏಷ್ಯಾಕಪ್‌ ಸೈಕ್ಲಿಂಗ್‌ನಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದರು.

ಜೂನಿಯರ್‌ ವಿಭಾಗದ 200 ಮೀಟರ್ಸ್‌ ಟೈಮ್‌ ಟ್ರಯಲ್‌ ಸ್ಪರ್ಧೆಯಲ್ಲಿ ಅವರು ಏಷ್ಯನ್‌ ದಾಖಲೆ ನಿರ್ಮಿಸಿದರು.

 ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅರ್ಹತಾ ಸುತ್ತಿನಲ್ಲಿ 10.065 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿದ ರೊನಾಲ್ಡೊ ಅವರು ಚೀನಾದ ಲಿವು ಕ್ವಿ ಹೆಸರಿನಲ್ಲಿದ್ದ ದಾಖಲೆ ಅಳಿಸಿಹಾಕಿದರು. 2018ರಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ ಲಿವು 10.149 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು.

ಜೂನಿಯರ್‌ ವಿಶ್ವ ಚಾಂಪಿಯನ್‌ ಆಗಿರುವ ರೊನಾಲ್ಡೊ, ಸೋಮವಾರ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದರು.

‘ಫೈನಲ್‌ಗೆ ಅರ್ಹತೆ ಗಳಿಸುವತ್ತ ಮಾತ್ರ ಚಿತ್ತ ಹರಿಸಿದ್ದೆ. ದಾಖಲೆ ನಿರ್ಮಿಸಿದ್ದು ಗೊತ್ತಾದಾಗ ನಿಜಕ್ಕೂ ಅಚ್ಚರಿಯಾಯಿತು. ಜೊತೆಗೆ ಅತೀವ ಸಂತಸವೂ ಆಯಿತು’ ಎಂದು ರೊನಾಲ್ಡೊ ಹೇಳಿದರು.

ಮೊದಲ ದಿನ 12 ಪದಕಗಳನ್ನು ಗೆದ್ದಿದ್ದ ಭಾರತದ ಸ್ಪರ್ಧಿಗಳು ಎರಡನೇ ದಿನವೂ ಪದಕಗಳ ಬೇಟೆ ಮುಂದುವರಿಸಿದರು.

ಪುರುಷರ ಎಲೀಟ್‌ 4 ಕಿಲೊ ಮೀಟರ್ಸ್‌ ವೈಯಕ್ತಿಕ ಪರ್ಸ್ಯೂಟ್‌ ಸ್ಪರ್ಧೆಯಲ್ಲಿ ಪೂನಮ್‌ ಚಾಂದ್‌ ಬೆಳ್ಳಿಯ ಪದಕ ಪಡೆದರು.

ಮಲೇಷ್ಯಾದ ಇಮಾಮ್‌ ಫಿರ್ದೋಷ್‌ ಮೊಹಮ್ಮದ್‌ ಈ ವಿಭಾಗದ ಚಿನ್ನದ ಪದಕ ಗೆದ್ದರು. ಕಜಕಸ್ತಾನದ ಡಿಮಿಟ್ರಿ ‍ಪೋಟಾಪೆಂಕೊ ಅವರು ಕಂಚಿನ ಪದಕ ಪಡೆದರು.

ಮಹಿಳೆಯರ ಎಲೀಟ್‌ 3 ಕಿಲೊ ಮೀಟರ್ಸ್‌ ವೈಯಕ್ತಿಕ ಪರ್ಸ್ಯೂಟ್‌ ವಿಭಾಗದಲ್ಲಿ ಎಲಂಗ್‌ಬಮ್‌ ದೇವಿ ಮತ್ತು ಇರುಂಗ್‌ಬಮ್‌ ದೇವಿ ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು. ಉಜ್ಬೇಕಿಸ್ತಾನದ ರೆನಾಟ ಬೆಮೇಟೊವಾ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ಪ್ರತಿಕ್ರಿಯಿಸಿ (+)