ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧನರಾಜ್‌ಗೆ ’ಮಿಸ್ಟರ್‌ ಇಂಡಿಯಾ’ ಕನಸು

ಸಂದರ್ಶನ
Last Updated 17 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಅಂದು ಹಂಗಿಸಿ, ಅಪಹಾಸ್ಯ ಮಾಡಿದವರು ಇವತ್ತು ಬೆನ್ನು ತಟ್ಟುತ್ತಿದ್ದಾರೆ. ‘ಈ ಹುಡುಗನಿಂದ ಏನೂ ಆಗಲಿಲ್ಲ ಎಂದು ಅಣಕ ಮಾಡಿದವರಿಗೆ ಕಷ್ಟದ ಬದುಕಿನಲ್ಲಿಯೂ ಉತ್ತಮ ಸಾಧನೆ ಮಾಡುವ ಮೂಲಕ ತಕ್ಕ ಉತ್ತರ ನೀಡಿದ್ದಾರೆ ಧನರಾಜ್‌ ಗಾಣಿಗ.

ಮಂಗಳೂರಿನ ಆಕಾಶಭವನದಲ್ಲಿ ತಂದೆ ತಾಯಿ ಜತೆಗೆ ವಾಸವಿರುವ 23 ವರ್ಷದ ಈ ದೇಹದಾರ್ಢ್ಯ ಪಟು ಚಂಡೀಗಡದಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಫೆಡರೇಷನ್‌ ಕಪ್‌ ದೇಹದಾರ್ಢ್ಯ ಚಾಂಪಿಯನ್‌ ಷಿಪ್‌ನ 80
ಕೆ. ಜಿ ಒಳಗಿನವರ ವಿಭಾಗದಲ್ಲಿ ಚಿನ್ನ ಹಾಗೂ ಚಾಂಪಿಯನ್‌ ಆಫ್‌ ಚಾಂಪಿಯನ್‌ ಪ್ರಶಸ್ತಿ ಮುಡಿಗೇರಿಸಿಕೊಂಡ ರಾಜ್ಯದ
ಮೊದಲ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪ್ರಶಸ್ತಿ ಗಳಿಸಲು ಪಟ್ಟ ಕಷ್ಟ, ಇದಕ್ಕಾಗಿ ಮಾಡಿದ ವರ್ಕೌಟ್‌, ಅವರು ಆರ್ಥಿಕ ಸಂಕಷ್ಟದ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.

ಚಂಡೀಗಡದಲ್ಲಿ ಮಾಡಿದ ಸಾಧನೆಯ ಗುಟ್ಟು ಏನು?

ಚಂಡೀಗಡದಲ್ಲಿ ನಡೆದಿದ್ದು ರಾಷ್ಟ್ರ ಮಟ್ಟದ ಸ್ಪರ್ಧೆ. ಬಹಳ ಕಠಿಣ ಸ್ಪರ್ಧೆ ಇತ್ತು. 250 ಕ್ಕೂ ಹೆಚ್ಚು ಬಲಾಢ್ಯ ಸ್ಪರ್ಧಿಗಳು ವಿವಿಧ ವಿಭಾಗಗಳಲ್ಲಿ ಪಾಲ್ಗೊಂಡಿದ್ದರು. ರಾಜ್ಯದಿಂದ ಆರು ಮಂದಿ ಪಾಲ್ಗೊಂಡಿದ್ದೆವು. ಈ ಸ್ಪರ್ಧೆಯಲ್ಲಿ ಗೆಲುವು ಸಾಧಿಸಬೇಕು ಎಂಬ ಹಠದಿಂದಲೇ ಪಾಲ್ಗೊಂಡಿದ್ದೆ. ಕಷ್ಟಪಟ್ಟಿದ್ದೆ ಫಲ ಸಿಕ್ಕಿದೆ. ತಮಿಳುನಾಡು, ನವದೆಹಲಿಯಿಂದ ಬಂದಿದ್ದ ಸ್ಪರ್ಧಿಗಳಿಂದ ಪ್ರಬಲ ಸ್ಪರ್ಧೆ ಎದುರಿಸಬೇಕಾಯಿತು. ಅಂತಿಮವಾಗಿ ಗೆದ್ದೆ. ಚಾಂಪಿಯನ್‌ ಆಫ್‌ ಚಾಂಪಿಯನ್‌ ಪ್ರಶಸ್ತಿ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಸಿಕ್ಕಿರುವುದು ಖುಷಿ ತಂದಿದೆ.

ದೇಹದಾರ್ಢ್ಯದ ಆಸಕ್ತಿ ಬಗ್ಗೆ ಒಂದಿಷ್ಟು ಮಾಹಿತಿ ನೀಡಿ?

ದೇಹದಾರ್ಢ್ಯ ಸ್ಪರ್ಧೆ ಬಗ್ಗೆ ನನಗೆ ಆರಂಭದಲ್ಲಿ ಒಲವು ಇರಲಿಲ್ಲ. ಬದುಕು ಸಾಗಿಸುವುದಕ್ಕೆ
ಕೆಲಸ ಬೇಕಿತ್ತು. ಅದಕ್ಕಾಗಿ ಜಿಮ್ನಾಷಿಯಂನಲ್ಲಿ ಕೆಲಸಕ್ಕೆ ಸೇರಿಕೊಂಡೆ. ಜಿಮ್‌ಗೆ ಸೇರಬೇಕು
ಎಂಬ ಆಸೆ ನನ್ನಲ್ಲಿಯೂ ಇತ್ತು. ಆದರೆ, ಟ್ರೈನರ್‌ ಆಗಿ ಮೊದಲು ಲಾವಿ ಫಿಟನೆಸ್‌ ಜೀಮ್‌ಗೆ ಆರಂಭದಲ್ಲಿ ಕೆಲಸ ಮಾಡುವುದಕ್ಕೆ ಶುರು ಮಾಡಿದೆ. ಅಲ್ಲಿ ಅಲ್ಪಸ್ವಲ್ಪ ವರ್ಕೌಟ್‌ ಮಾಡುವುದನ್ನು ಕಲಿತೆ. 50 ಕೆ.ಜಿ, ತೂಕ ಇದ್ದವನಿಗೆ ಇದು ಹೇಗೆ ಸಾಧ್ಯ ಎಂದು ಅವಮಾನಿಸಿದ್ದೂ ಇದೆ. ಇದು ಬೇಸರ ತಂದಿತ್ತು. ಅವಕಾಶ ಬಂತು ನಾನು ಕೂಡಾ ಏಕೆ ಪ್ರಯತ್ನಿಸಬಾರದು ಎಂದು ಮೊದಲ ಬಾರಿಗೆ ಪುರಭವನದಲ್ಲಿ ನಡೆದ ಗುಂಪು ಸ್ಪರ್ಧೆಯಲ್ಲಿ ಪಾಲ್ಗೊಂಡ ನಂತರ ದೇಹದಾರ್ಢ್ಯ ಸ್ಪರ್ಧೆಯ ಕಡೆಗೆ ಹೆಚ್ಚು ಒಲವು ಬೆಳೆಸಿಕೊಂಡೆ.

ಮನೆ ಪರಿಸ್ಥಿತಿ, ಪೋಷಕರ ಬೆಂಬಲ ಹೇಗಿದೆ.

ಮಂಗಳೂರಿನ ಕೆನರಾ ಹೈಸ್ಕೂಲ್‌ನಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿ, ಐಟಿಐಗೆ ಸೇರಿಕೊಂಡೆ, ಕೋರ್ಸ್‌ ಮುಗಿದ ನಂತರ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಸರಿ ಇಲ್ಲದೇ ಇರುವುದರಿಂದ ಓದಿಗೆ ಪೂರ್ಣವಿರಾಮ ಇಟ್ಟೆ. ತಂದೆ ವಿಜಯ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಾರೆ. ತಾಯಿ ರತ್ನಾ ಬೀಡಿ ಕಟ್ಟುವ ಕೆಲಸ ಮಾಡುತ್ತಾರೆ. ನಾನೊಬ್ಬನೇ ಮಗ, ಅಕ್ಕ ಇದ್ದಾರೆ. ಅವರ ಮದುವೆಯಾಗಿದೆ. ಕಷ್ಟದ ಜೀವನ. ಅದರಲ್ಲಿಯೂ ಸಾಧನೆ ಮಾಡಿರುವುದು ತೃಪ್ತಿ ತಂದಿದೆ. ಈಗ ಜೂಸಿ ಫಿಟ್‌ನೆಸ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ.

ನಿಮ್ಮ ಸಾಧನೆಗೆ ಬೆನ್ನೆಲುಬಾಗಿ ಇದ್ದವರು?

ದೇಹದಾರ್ಢ್ಯ ಪಟು ಆಗಬೇಕು ಎಂಬ ಆಸೆಗೆ ಮೊದಲು ಗುರುವಾಗಿ ಸಿಕ್ಕವರು ಶಿವಾನಂದ ಅವರು. ಅವರು ನನ್ನಲ್ಲಿನ ಸಾಮರ್ಥ್ಯ ಗುರುತಿಸಿದ್ದರು. ಮಂಗಳೂರಿನ ಕೊಟ್ಟಾರದಲ್ಲಿರುವ ಸ್ನೇಹಿತ ಸಂದೀಪ್‌ಕುಮಾರ್ ಅವರ ಜೀಮ್‌ಗೆ ಸೇರಿಕೊಂಡ ನಂತರ ಅದೃಷ್ಟ ಬದಲಾಯಿತು. ನಾನು ಯಾವುದೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಹಣ ಬೇಕು. ಅದಕ್ಕೆ ಸಂಪೂರ್ಣ ಸಹಕಾರ ನೀಡುತ್ತಿರುವ ಕಿರಣ್‌ ಬಿ.ಎನ್‌ ಅವರು ಪ್ರತಿ ತಿಂಗಳು ನನಗೆ ₹30 ಸಾವಿರ ಖರ್ಚು ಮಾಡುತ್ತಿದ್ದಾರೆ. ಪ್ರಾಯೋಜಕರು ಕೂಡಾ ಅವರೇ ಆಗಿದ್ದಾರೆ.

ಜಿಲ್ಲಾಡಳಿತದಿಂದ ಸಹಕಾರ ಸಿಕ್ಕಿದೆಯೆ? ಮುಂದಿನ ಗುರಿ ಏನು? ಯಾವ ಪ್ರಶಸ್ತಿ ಗೆದ್ದಿದ್ದಿರಿ?

ಜಿಲ್ಲಾಡಳಿತದಿಂದ ಇದುವರೆಗೆ ಯಾವುದೇ ಸಹಕಾರ ಸಿಕ್ಕಿಲ್ಲ. ಆ ನೋವು ನನ್ನಲ್ಲಿ ಇದೆ. ಯಾರು ಕೂಡಾ ಸಂಪರ್ಕ ಮಾಡಿಲ್ಲ. ಮಿಸ್ಟರ್‌ ಇಂಡಿಯಾ ಆಗಬೇಕು ಎಂಬ ಕನಸಿದೆ. ಇದಕ್ಕಾಗಿ ದಿನ ಎರಡು ಗಂಟೆ ವರ್ಕೌಟ್‌ ಮಾಡುತ್ತಿರುವೆ. ಇದಕ್ಕಾಗಿ ಲಕ್ಷಾಂತರ ಹಣ ಬೇಕು. ಪ್ರಾಯೋಜಕರ ಅಗತ್ಯವಿದೆ. ಮಿಸ್ಟರ್‌ ದಸರಾ, ಸತೀಶ್‌ ಸುಗರ್‌ ಕ್ಲಾಸಿಕ್‌, ಮಿಸ್ಟರ್‌ ವಜ್ರದೇಹಿ, ಗೋಲ್‌ ಗುಂಬಜ್‌ ಕ್ಲಾಸಿಕ್‌, ಅಶೋಕ್‌ ಕ್ಲಾಸಿಕ್‌ ಪ್ರಶಸ್ತಿ ಒಲಿದಿವೆ.

(ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT