ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದೀಪ್‌, ಸತ್ಯಾವರ್ತ್‌, ಸುಮಿತ್‌ಗೆ ನಿರಾಸೆ

ಒಲಿಂಪಿಕ್ಸ್‌ಗೆ ಏಷ್ಯನ್ ಅರ್ಹತಾ ಕುಸ್ತಿ: ಸೆಮಿಫೈನಲ್‌ ಬೌಟ್‌ನಲ್ಲಿ ಸೋಲುಂಡ ಪೈಲ್ವಾನರು
Last Updated 11 ಏಪ್ರಿಲ್ 2021, 14:20 IST
ಅಕ್ಷರ ಗಾತ್ರ

ಅಲ್ಮಾಟಿ, ಕಜಕಸ್ತಾನ: ನೀರಸ ಪ್ರದರ್ಶನ ತೋರಿದ ರಾಷ್ಟ್ರೀಯ ಚಾಂಪಿಯನ್ ಸಂದೀಪ್ ಸಿಂಗ್ ಮನ್‌ ಅವರು ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ವಿಫಲರಾದರು. ಸತ್ಯಾವರ್ತ್‌ ಕಾಡಿಯನ್‌ ಮತ್ತು ಸುಮಿತ್ ಮಲಿಕ್ ಕೂಡ ನಿರಾಸೆಗೆ ಒಳಗಾದರು.

ಇಲ್ಲಿ ನಡೆದ ಏಷ್ಯನ್ ಅರ್ಹತಾ ಟೂರ್ನಿಯಲ್ಲಿ ಭಾನುವಾರ 74 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಸಂದೀಪ್ ಸಿಂಗ್ ಸೆಮಿಫೈನಲ್‌ನಲ್ಲಿ ಸೋತರು. 97 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಸತ್ಯಾವರ್ತ್ ಕಾಡಿಯನ್ ಮತ್ತು 125 ಕೆಜಿ ವಿಭಾಗದಲ್ಲಿ ಕಣಕ್ಕೆ ಇಳಿದ ಸುಮಿತ್ ಮಲಿಕ್ ಕೂಡ ಕೊನೆಯ ದಿನವಾದ ಭಾನುವಾರ ಸೋಲನುಭವಿಸಿದರು. ಇವರೆಲ್ಲರಿಗೂ ಬಲ್ಗೇರಿಯಾದ ಸೋಫಿಯಾದಲ್ಲಿ ಮೇ ಆರರಿಂದ ಒಂಬತ್ತರ ವರೆಗೆ ನಡೆಯಲಿರುವ ವಿಶ್ವ ಒಲಿಂಪಿಕ್ ಅರ್ಹತಾ ಟೂರ್ನಿಯಲ್ಲಿ ಇನ್ನೊಂದು ಅವಕಾಶ ಉಳಿದುಕೊಂಡಿದೆ.

ಉತ್ತಮ ಆರಂಭ ಕಂಡ ಸಂದೀಪ್‌

ಅರ್ಹತಾ ಸುತ್ತಿನಲ್ಲಿ ಕತಾರ್‌ನ ಇಬ್ರಾಹಿಂ ಎ ಇಬ್ರಾಹಿಂ ವಿರುದ್ಧ ಜಯ ಗಳಿಸಿ ಸಂದೀಪ್ ಭರವಸೆ ಮೂಡಿಸಿದ್ದರು. ನಂತರ ತಜಿಕಿಸ್ತಾನದ ಗುಲೋಮ್‌ಜೋನ್ ಶರಿಪೊವ್ ಎದುರು 6–2ರ ಜಯ ಗಳಿಸಿದರು. ಆದರೆ ನಾಲ್ಕರ ಘಟ್ಟದ ಬೌಟ್‌ನಲ್ಲಿ ಇರಾನ್‌ನ ಯೋನಸ್ ಅಲಿ ಅಕ್ಬರ್‌ಗೆ ಮಣಿದರು.

ಸತ್ಯಾವರ್ತ್ ಕಾಡಿಯನ್ ಮೊದಲು ಕೊರಿಯಾದ ಮಿನ್‌ವಾನ್‌ ಸೀಯೊ ಅವರನ್ನು 6–2ರಲ್ಲಿ ಮಣಿಸಿದರು. ಆದರೆ ಸೆಮಿಫೈನಲ್‌ನಲ್ಲಿ ಇರಾನ್‌ನ ಮೊಹಮ್ಮದೊಸೇನ್ ಅಸ್ಕಾರಿಗೆ ಮಣಿದರು. ಸುಮಿತ್ 7–0 ಅಂತರದಲ್ಲಿ ಮಕ್ಸೂದ್‌ ವೆಯ್‌ಸಲೊವ್‌ ವಿರುದ್ಧ ಗೆದ್ದು ಸೆಮಿಫೈನಲ್‌ನಲ್ಲಿ 0–2ರಲ್ಲಿ ಸ್ಥಳೀಯ ಪೈಲ್ವಾನ್ ಯೂಸುಫ್‌ ಬಟಿರ್ಮುಜೆವ್‌ಗೆ ಮಣಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT