ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯು.ಪಿ.ಯೋಧಾಗೆ ‘ಜೈಂಟ್‌’ ಸವಾಲು

ಎರಡನೇ ಕ್ವಾಲಿಫೈಯರ್ ಪಂದ್ಯ ಇಂದು; ಕನ್ನಡಿಗ ಆಟಗಾರರ ಮೇಲೆ ಕಣ್ಣು
Last Updated 2 ಜನವರಿ 2019, 20:00 IST
ಅಕ್ಷರ ಗಾತ್ರ

ಮುಂಬೈ: ಟೂರ್ನಿಯ ಉದ್ದಕ್ಕೂ ಉತ್ತಮ ಸಾಮರ್ಥ್ಯ ತೋರುತ್ತ ಬಂದಿರುವ ಯು.ಪಿ.ಯೋಧಾ ತಂಡದ ಮುಂದೆ ಈಗ ‘ಜೈಂಟ್‌’ ಸವಾಲು. ಗುರುವಾರ ರಾತ್ರಿ ಇಲ್ಲಿ ನಡೆಯಲಿರುವ ಪ್ರೊ ಕಬಡ್ಡಿ ಲೀಗ್‌ನ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಯೋಧಾ ಮತ್ತು ಗುಜತಾರ್ ಫಾರ್ಚೂನ್‌ಜೈಂಟ್ಸ್ ತಂಡಗಳು ಸೆಣಸಲಿವೆ. ಫೈನಲ್‌ ಪ್ರವೇಶದ ಕನಸಿನೊಂದಿಗೆ ಎರಡೂ ತಂಡಗಳು ಕಣಕ್ಕೆ ಇಳಿಯಲಿದ್ದು ಪ್ರಬಲ ಹಣಾಹಣಿ ನಿರೀಕ್ಷಿಸಲಾಗಿದೆ.

ಕನ್ನಡಿಗ ರಿಷಾಂಕ್ ದೇವಾಡಿಗ ನಾಯಕತ್ವದ ಯು.ಪಿ.ಯೋಧಾ ಲೀಗ್‌ ಹಂತದಲ್ಲಿ ಏಳು–ಬೀಳುಗಳನ್ನು ಕಂಡು ಪ್ಲೇ ಆಫ್ ಹಂತಕ್ಕೆ ತಲುಪಿತ್ತು. ಮೊದಲ ಎಲಿಮಿನೇಟರ್‌ನ ರೋಚಕ ಪಂದ್ಯದಲ್ಲಿ ಯು.ಮುಂಬಾವನ್ನು 34–29ರಲ್ಲಿ ಮಣಿಸಿದ ತಂಡ ಮೂರನೇ ಎಲಿಮಿನೇಟರ್‌ನಲ್ಲಿ ದಬಾಂಗ್ ಡೆಲ್ಲಿಯನ್ನು 45–33ರಿಂದ ಸೋಲಿಸಿತ್ತು. ಈ ಮೂಲಕ ಎಂಟು ಪಂದ್ಯಗಳಲ್ಲಿ ಸತತ ಜಯ ಸಾಧಿಸಿತ್ತು. ಇದೇ ಲಯದಲ್ಲಿ ಆಡಿ ಪ್ರಶಸ್ತಿ ಸುತ್ತು ಪ್ರವೇಶಿಸುವ ಬಯಕೆ ತಂಡದ್ದು.

ಗುಜರಾತ್ ಫಾರ್ಚೂನ್‌ಜೈಂಟ್ಸ್ ಲೀಗ್ ಹಂತದಲ್ಲಿ ಉತ್ತಮ ಸಾಮರ್ಥ್ಯ ಮೆರೆದಿದ್ದು ‘ಎ’ ವಲಯದಲ್ಲಿದ್ದ ತಂಡ ಒಟ್ಟು 17 ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯ ಅಗ್ರ ಸ್ಥಾನಕ್ಕೇರಿತ್ತು. ಆದರೆ ಮೊದಲನೇ ಕ್ವಾಲಿಫೈಯರ್‌ನಲ್ಲಿ ಬೆಂಗಳೂರು ಬುಲ್ಸ್‌ಗೆ ಮಣಿದಿತ್ತು. ಸತತ ಆರು ಜಯ ಸಾಧಿಸಿದ್ದ ತಂಡ ಈ ಸೋಲಿನೊಂದಿಗೆ ನಿರಾಸೆಗೆ ಒಳಗಾಗಿತ್ತು. ಫೈನಲ್‌ನಲ್ಲಿ ಬುಲ್ಸ್ ವಿರುದ್ಧ ಸೇಡು ತೀರಿಸಿಕೊಳ್ಳಲು ಹಂಬಲಿಸುತ್ತಿರುವ ತಂಡ ಪ್ರಶಸ್ತಿ ಸುತ್ತಿನ ಹಂತ ತಲುಪಬೇಕಾದರೆ ಗುರುವಾರ ಗೆಲ್ಲಲೇಬೇಕು.

ಕನ್ನಡಿಗರ ಬಲ: ರಿಷಾಂಕ್ ದೇವಾಡಿಗ ಅವರೊಂದಿಗೆ ಅತ್ಯುತ್ತಮ ಆಟ ಆಡಿರುವ ಪ್ರಶಾಂತ್ ಕುಮಾರ್ ರೈ ತಂಡದ ಈ ವರೆಗಿನ ಸಾಧನೆಗೆ ಭಾರಿ ಕಾಣಿಕೆ ನೀಡಿದ್ದಾರೆ. ಲೆಫ್ಟ್ ಕಾರ್ನರ್‌ ಆಟಗಾರ ಜೀವ ಕುಮಾರ್ ಆಲ್‌ರೌಂಡ್ ಆಟದ ಮೂಲಕ ಮಿಂಚಿದ್ದಾರೆ. ನಿತೇಶ್ ಕುಮಾರ್‌, ನರೇಂದ್ರ ಮತ್ತು ಶ್ರೀಕಾಂತ್ ಜಾಧವ್ ಅವರ ಬಲವೂ ಯೋಧಾ ತಂಡಕ್ಕಿದೆ.

ಸುನಿಲ್ ಕುಮಾರ್ ನಾಯಕತ್ವದ ಫಾರ್ಚೂನ್‌ಜೈಂಟ್ಸ್‌ ಸಂಘಟಿತ ಆಡಕ್ಕೆ ಹೆಸರು ಗಳಿಸಿದೆ. ಋತುರಾಜ್‌ ಕೊರವಿ ಮತ್ತು ಹಾದಿ ಒಶ್ಟರೊಕ್‌, ಎಡ ಮತ್ತು ಬಲ ಕಾರ್ನರ್‌ಗಳ ಪ್ರಬಲ ಆಟಗಾರರಾಗಿ ಮೆರೆದಿದ್ದಾರೆ. ರೇಡಿಂಗ್‌ ವಿಭಾಗಕ್ಕೆ ಬೆಂಗಳೂರಿನ ಕೆ.ಪ್ರಪಂಚನ್‌ ಶಕ್ತಿ ತುಂಬಿದ್ದಾರೆ. ಸಚಿನ್‌, ರೋಹಿತ್ ಗುಲಿಯಾ ಮತ್ತು ಪರ್ವೇಶ್‌ ಬೈನ್ಸವಾಲ್‌ ಸಂದರ್ಭಕ್ಕೆ ತಕ್ಕಂತೆ ಆಡುವ ಗುಣ ಬೆಳೆಸಿಕೊಂಡಿದ್ದಾರೆ.

***

ಕಣಕ್ಕಿಳಿಯಲಿರುವ ಸಂಭಾವ್ಯ ಆಟಗಾರರು

ಗುಜರಾತ್ ಫಾರ್ಚೂನ್‌ಜೈಂಟ್ಸ್ ; ಸ್ಥಾನ ; ಯು.ಪಿ.ಯೋಧಾ

ಋತುರಾಜ್ ಕೊರವಿ ; ರೈಟ್‌ ಕಾರ್ನರ್‌ ; ನಿತೇಶ್ ಕುಮಾರ್‌

ಕೆ.ಪ್ರಪಂಚನ್‌ ; ರೈಟ್‌ ಇನ್‌ ; ರಿಷಾಂಕ್ ದೇವಾಡಿಗ

ಸುನಿಲ್ ಕುಮಾರ್‌ ; ರೈಟ್ ಕವರ್‌ ; ನರೇಂದ್ರ

ಸಚಿನ್‌ ; ಸೆಂಟರ್‌ ; ಶ್ರೀಕಾಂತ್ ಜಾಧವ್‌

ಪರ್ವೇಶ್‌ ಬೈನ್ಸ್ವಾಲ್‌ ; ಲೆಫ್ಟ್‌ ಕವರ್‌ ; ಜೀವ ಕುಮಾರ್‌

ರೋಹಿತ್ ಗುಲಿಯಾ ; ಲೆಫ್ಟ್ ಇನ್‌ ; ಪ್ರಾಶಾಂತ್ ಕುಮಾರ್ ರೈ

ಹಾದಿ ಓಷ್ಟರೊಕ್‌ ; ಲೆಫ್ಟ್ ಕಾರ್ನರ್‌ ; ಸಚಿನ್ ಕುಮಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT