ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

14 ಸಾವಿರ ಮಕ್ಕಳು ಶಾಲೆಯಿಂದ ಹೊರಗೆ

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ 904 ಮಕ್ಕಳು ಶಿಕ್ಷಣದಿಂದ ದೂರ
Last Updated 22 ಮೇ 2018, 19:28 IST
ಅಕ್ಷರ ಗಾತ್ರ

ಬೆಂಗಳೂರು: 1 ರಿಂದ 10ನೇ ತರಗತಿ ವರೆಗೆ ಕಡ್ಡಾಯ ಶಿಕ್ಷಣ ಎಂಬ ಕಾನೂನು ಇದ್ದರೂ ರಾಜ್ಯದಲ್ಲಿ 6ರಿಂದ 14 ವರ್ಷದೊಳಗಿನ ಸಾವಿರಾರು ಮಕ್ಕಳು ಪ್ರತಿ ವರ್ಷ ಶಾಲೆಯಿಂದ ಹೊರಗುಳಿಯುತ್ತಿದ್ದಾರೆ. ಸದ್ಯ 14,192 ಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ.

2018ರಲ್ಲಿ 6,803 ಮಕ್ಕಳು ಹಾಗೂ ಹಿಂದಿನ ಶೈಕ್ಷಣಿಕ ವರ್ಷದಲ್ಲಿ 7,389 ವಿದ್ಯಾರ್ಥಿಗಳು ಸೇರಿ ಒಟ್ಟು 14,192 ಮಂದಿ ಶಾಲೆಯಿಂದ ಹೊರಗುಳಿದಿದ್ದಾರೆ.

ಸರ್ವಶಿಕ್ಷಣ ಅಭಿಯಾನ 2017ರ ಡಿಸೆಂಬರ್‌ 5ರಿಂದ 18ರವರೆಗೆ ಸಮೀಕ್ಷಾ ಕಾರ್ಯ ನಡೆಸಿದ್ದು, ಕಲಬುರ್ಗಿ ಜಿಲ್ಲೆಯಲ್ಲಿ ಅತಿ ಹೆಚ್ಚು 984 ಮಕ್ಕಳು ಶಾಲೆ ಬಿಟ್ಟಿದ್ದಾರೆ.

ಅಚ್ಚರಿಯ ವಿಷಯವೆಂದರೆ ರಾಜಧಾನಿಯಲ್ಲಿ (ಬೆಂಗಳೂರಿನಲ್ಲಿ ದಕ್ಷಿಣ ಶೈಕ್ಷಣಿಕ ಜಿಲ್ಲೆ) ಈ ವರ್ಷ 904 ಹಾಗೂ ಕಳೆದ ಸಾಲಿನ 300 ಮಕ್ಕಳು ಸೇರಿ ಒಟ್ಟು 1,204 ಮಕ್ಕಳು ಶಿಕ್ಷಣದಿಂದ ದೂರ ಉಳಿದಿದ್ದಾರೆ.

ಹಿಂದಿನ ಸಾಲಿನ ಸಂಖ್ಯೆಯೂ ಸೇರಿ ಶಾಲೆ ಬಿಟ್ಟಿರುವ ಮಕ್ಕಳ ಸಂಖ್ಯೆಯಲ್ಲಿ ಬಳ್ಳಾರಿ ಮುಂಚೂಣಿಯಲ್ಲಿದೆ. ಈ ಸಾಲಿನ 638 ಹಾಗೂ ಕಳೆದ ಸಾಲಿನಲ್ಲಿ ಉಳಿದ 2,602 ಮಕ್ಕಳು ಸೇರಿ ಒಟ್ಟು 3,240 ವಿದ್ಯಾರ್ಥಿಗಳು ಕಲಿಕೆಯಿಂದ ದೂರವಾಗಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಅತ್ಯಂತ ಕಡಿಮೆ 20 ಮಕ್ಕಳು ಶಾಲೆ ಬಿಟ್ಟಿದ್ದಾರೆ.

ಒಟ್ಟು 34 ಶೈಕ್ಷಣಿಕ ಜಿಲ್ಲೆಗಳಲ್ಲಿ ಕೇವಲ 12 ಜಿಲ್ಲೆಗಳಲ್ಲಿ ಮಾತ್ರ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ನೂರರೊಳಗಿದೆ.

2016 ನೇ ಶೈಕ್ಷಣಿಕ ವರ್ಷದಲ್ಲಿ ಒಟ್ಟು 8,687 ಹಾಗೂ ಆ ಹಿಂದಿನ ವರ್ಷದ 8,318 ಮಕ್ಕಳು ಸೇರಿ ಒಟ್ಟು 17,005 ಮಕ್ಕಳು ಶಾಲೆ ಬಿಟ್ಟಿದ್ದರು. ಇಲಾಖೆ ಹಮ್ಮಿಕೊಂಡಿದ್ದ ವಿವಿಧ ಕಾರ್ಯಕ್ರಮಗಳಿಂದಾಗಿ 2017ರ ಮಾರ್ಚ್‌ ಅಂತ್ಯಕ್ಕೆ 13,136 ಮಕ್ಕಳನ್ನು ಮರಳಿ ಶಾಲೆಗೆ ಕರೆತರಲಾಗಿದೆ.

ಪ್ರತಿ ವರ್ಷ ಡಿಸೆಂಬರ್‌ ಮೊದಲ ವಾರದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ನಡೆಸಲಾಗುತ್ತದೆ.

ಇದರಲ್ಲಿ ಶಾಲೆಗಳಲ್ಲಿ ಹಿಂದಿನ ವರ್ಷದ ದಾಖಲಾತಿ ಮತ್ತು ಪ್ರಸ್ತುತ ವರ್ಷದ ದಾಖಲಾತಿ, ಮಕ್ಕಳು ದೊರೆಯಬಹುದಾದ ಆಯ್ದ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿ, ಹೊರಗುಳಿದ ಮಕ್ಕಳನ್ನು ಗುರುತಿಸಲಾಗುತ್ತದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷದಲ್ಲಿ ಹೊರಗುಳಿಯುವ ಮಕ್ಕಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ.

ಮುಖ್ಯವಾಹಿನಿಗೆ ತರಲು ಚಿಣ್ಣರ ತಂಗುಧಾಮ ವಿಶೇಷ ತರಬೇತಿ, ಆರು ತಿಂಗಳ ವಸತಿರಹಿತ ವಿಶೇಷ ತರಬೇತಿ, ಟೆಂಟ್ ಶಾಲೆ, ಶಾಲಾಧಾರಿತ ವಿಶೇಷ ತರಬೇತಿ, ಆರು ತಿಂಗಳು ವಸತಿಯುತ ತರಬೇತಿ... ಹೀಗೆ 11 ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ ₹8.26 ಕೋಟಿ ಅನುದಾನಕ್ಕೆ ಇಲಾಖೆ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿದೆ.

‘ನಮ್ಮ ಕಾರ್ಯಕ್ರಮಗಳಿಂದ ಮಕ್ಕಳನ್ನು ಶಾಲೆಗೆ ಕರೆತರುವಲ್ಲಿ ಯಶಸ್ವಿಯಾಗುತ್ತಿದ್ದೇವೆ. ವರ್ಷದಿಂದ ವರ್ಷಕ್ಕೆ ಹೊರಗುಳಿಯುವವರ ಸಂಖ್ಯೆ ಕಡಿಮೆಯಾಗುತ್ತಿದೆ.

ಕಳೆದ ಶೈಕ್ಷಣಿಕ ವರ್ಷದಲ್ಲಿ ಕೈಗೊಂಡ ಕಾರ್ಯಕ್ರಮಗಳನ್ನೇ ಈ ಬಾರಿಯೂ ಮುಂದುವರಿಸುತ್ತೇವೆ’ ಎಂದು ಸರ್ವ ಶಿಕ್ಷಣ ಅಭಿಯಾನದ ನಿರ್ದೇಶಕಿ ಹೊನ್ನಾಂಬ ತಿಳಿಸಿದರು.

ಮಾಹಿತಿ ನೀಡಿ

ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಅಧಿಕಾರಿಗಳು, ಯುವ ಸಂಘಗಳು, ಸ್ತ್ರೀಶಕ್ತಿ, ಸ್ವಸಹಾಯ ಗುಂಪುಗಳು, ಸರ್ಕಾರೇತರ ಸಂಘ–ಸಂಸ್ಥೆಗಳು ಸಹ ಸಮೀಕ್ಷೆಗೆ ನೆರವಾಗಬಹುದು.

ಯಾವುದೇ ಮಗು ಶಾಲೆ ಬಿಟ್ಟಿದ್ದಲ್ಲಿ ಅಥವಾ ಶಾಲೆಗೆ ಸೇರದೇ ಇದ್ದಲ್ಲಿ ಆ ಬಗ್ಗೆ ಶಿಕ್ಷಣ ಇಲಾಖೆಗೆ ಮಾಹಿತಿ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT