ಸೋಮವಾರ, ನವೆಂಬರ್ 18, 2019
24 °C

ಒಲಿಂಪಿಕ್ಸ್ ಹಾಕಿ ಅರ್ಹತಾ ಟೂರ್ನಿ: ಭಾರತ–ಪಾಕ್‌ಗೆ ಯುರೋಪ್‌ನಲ್ಲಿ ಅಂಗಣ?

Published:
Updated:

ಕರಾಚಿ: ಒಲಿಂಪಿಕ್ಸ್‌ ಅರ್ಹತಾ ಹಾಕಿ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುವ ಸಾಧ್ಯತೆ ಇದ್ದರೆ ಯುರೋಪ್‌ನ ಯಾವುದಾದರೂ ಅಂಗಣದಲ್ಲಿ ಆಡಿಸಲು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್‌ಐಎಚ್) ಮುಂದಾಗಿದೆ.

ಮುಂದಿನ ವರ್ಷ ಟೋಕಿಯೊದಲ್ಲಿ ಒಲಿಂಪಿಕ್ಸ್ ನಡೆಯಲಿದ್ದು ಇದರ ಅರ್ಹತಾ ಟೂರ್ನಿ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ನಡೆಯಲಿದೆ. ಟೂರ್ನಿಯ ವೇಳಾಪಟ್ಟಿಯನ್ನು ಎಫ್ಐಎಚ್ ಶೀಘ್ರ ಬಿಡುಗಡೆ ಮಾಡಲಿದೆ. ರ‍್ಯಾಂಕಿಂಗ್‌ನ ಅಗ್ರ ಸ್ಥಾನದಲ್ಲಿರುವ ತಂಡಗಳು ಕೆಳ ಕ್ರಮಾಂಕದಲ್ಲಿರುವ ತಂಡಗಳನ್ನು ಎದುರಿಸಲಿರುವುದರಿಂದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗುವ ಸಾಧ್ಯತೆ ಕಡಿಮೆ. ಉಭಯ ತಂಡಗಳು ಈಗಾಗಲೇ ಮೊದಲನೇ ಅರ್ಹತಾ ಟೂರ್ನಿಯಲ್ಲಿ ಪಾಲ್ಗೊಂಡಿವೆ.

ಅರ್ಹತಾ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಈಜಿಪ್ಟ್‌, ದಕ್ಷಿಣ ಕೊರಿಯಾ, ಸ್ಪೇನ್‌, ಜರ್ಮನಿ, ನ್ಯೂಜಿಲೆಂಡ್ ಮತ್ತು ಇತರ ತಂಡಗಳು ಪಾಲ್ಗೊಳ್ಳಲಿದ್ದು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಬಾಕಿ ಇರುವ ಏಳು ಸ್ಥಾನಗಳಿಗಾಗಿ ಸ್ಪರ್ಧಿಸಲಿವೆ.

ಪ್ರತಿಕ್ರಿಯಿಸಿ (+)