‘ಭಾರತೀಯರೂ ಡಕಾರ್‌ ರ‍್ಯಾಲಿ ಗೆಲ್ಲಬಹುದು’

7
ಮಹತ್ವದ ಸಾಧನೆ ಮಾಡಿದ ಭಾರತದ ಎರಡನೇ ಚಾಲಕ ಕೆ.ಪಿ.ಅರವಿಂದ ಅಭಿಮತ

‘ಭಾರತೀಯರೂ ಡಕಾರ್‌ ರ‍್ಯಾಲಿ ಗೆಲ್ಲಬಹುದು’

Published:
Updated:
Prajavani

ನವದೆಹಲಿ : ‘ಎರಡು ವರ್ಷಗಳ ಒಳಗೆ, ಭಾರತೀಯ ಚಾಲಕ ಖಂಡಿತವಾಗಿ ಡಕಾರ್ ರ‍್ಯಾಲಿಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಲಿದ್ದಾನೆ...’

ರೋಮಾಂಚಕ ಡಕಾರ್‌ ರ‍್ಯಾಲಿಯನ್ನು ಪೂರ್ತಿಗೊಳಿಸಿದ ಎರಡನೇ ಭಾರತೀಯ ಎಂಬ ಖ್ಯಾತಿ ಗಳಿಸಿರುವ ಕೆ.ಪಿ.ಅರವಿಂದ ಆಡಿದ ಭರವಸೆಯ ನುಡಿಗಳು ಇವು.

ಸುದ್ದಿಸಂಸ್ಥೆ ಜೊತೆ ಮಾತನಾಡಿದ 34 ವರ್ಷದ ಅರವಿಂದ ಅವರು ‘2020ರ ಆವೃತ್ತಿಯಲ್ಲೂ ಉತ್ತಮ ಸಾಧನೆ ಮಾಡುವತ್ತ ಚಿತ್ತ ನೆಟ್ಟಿದ್ದೇನೆ. ಸರಿಯಾದ ಲಯ ಕಂಡುಕೊಳ್ಳಲು ಸಾಧ್ಯವಾದರೆ ಮುಂದಿನ ವರ್ಷ ಅಗ್ರ 10ರ ಒಳಗೆ ಸ್ಥಾನ ಗಳಿಸಲು ಪ್ರಯತ್ನಿಸುತ್ತೇನೆ. ರ‍್ಯಾಲಿಯನ್ನು ಪೂರ್ತಿಗೊಳಿಸುವುದರಲ್ಲಿ ಸಂದೇಹವೇ ಇಲ್ಲ’ ಎಂದರು.

ಪೆರುವಿನಲ್ಲಿ ಜನವರಿ ಆರರಿಂದ 17ರ ವರೆಗೆ ನಡೆದ ಡಕಾರ್ ರ‍್ಯಾಲಿಯಲ್ಲಿ ಅರವಿಂದ, ಶೆರ್ಕೊ ಟಿವಿಎಸ್‌ ರೇಸಿಂಗ್‌ ಕಂಪನಿ ಪರವಾಗಿ ಕಣಕ್ಕೆ ಇಳಿದಿದ್ದರು. 2017 ಮತ್ತು 2018ರಲ್ಲೂ ಯಶಸ್ವಿಯಾಗಿದ್ದ ಅವರು ಈ ಬಾರಿ 37ನೇ ಸ್ಥಾನ ಗಳಿಸಿದ್ದರು.‌

2015, 2017 ಮತ್ತು 2018ರಲ್ಲಿ ಡಕಾರ್ ರ‍್ಯಾಲಿಯನ್ನು ಯಶಸ್ವಿಯಾಗಿ ಮುಗಿಸಿದ್ದ ಸಿ.ಎಸ್‌.ಸಂತೋಷ್‌ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂದೆನಿಸಿಕೊಂಡಿದ್ದರು. ಡರ್ಟ್ ಟ್ರ್ಯಾಕ್‌ ರ‍್ಯಾಲಿ ಮತ್ತು ಮೋಟೊಕ್ರಾಸ್‌ ಸ್ಪರ್ಧೆಗಳಲ್ಲಿ 17 ಬಾರಿ ರಾಷ್ಟ್ರೀಯ ಚಾಂಪಿಯನ್‌ ಆಗಿರುವ ಅರವಿಂದ್‌ ಕಳೆದ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಪ್ಯಾನ್ ಆಫ್ರಿಕಾ ರ‍್ಯಾಲಿಯ ಸಂದರ್ಭದಲ್ಲಿ ಬೆರಳಿಗೆ ಗಾಯಗೊಂಡಿದ್ದರು. ಶೀಘ್ರ ಚೇತರಿಸಿಕೊಂಡು ಡಕಾರ್ ರ‍್ಯಾಲಿಗೆ ಸಿದ್ಧರಾಗಿದ್ದರು.

‘ಎಲುಬಿಗೆ ಗಾಯವಾಗಿತ್ತು. ವಾಸಿಯಾಗಲು ಆರು ತಿಂಗಳು ಬೇಕು ಎಂದು ವೈದ್ಯರು ಹೇಳಿದ್ದರು. ಆದರೂ ಎದೆಗುಂದದೆ ರ‍್ಯಾಲಿಯಲ್ಲಿ ಪಾಲ್ಗೊಂಡೆ. ಇಗಲೂ ಸಂಪೂರ್ಣ ಗುಣಮುಖನಾಗಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ಮಾಡಿರುವ ಸಾಧನೆ ತೃಪ್ತಿ ತಂದಿದೆ’ ಎಂದು ಅರವಿಂದ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !