ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂಡೊ, ಕುರಾಶ್‌ನಲ್ಲಿ ಭರವಸೆಯ ಚಿಗುರು

Last Updated 23 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ಏಷ್ಯನ್ ಕ್ರೀಡಾಕೂಟದ ಕುರಾಶ್ ಸ್ಪರ್ಧೆಯಲ್ಲಿ ಬೆಳಗಾವಿಯ ಮಲಪ್ರಭಾ ಜಾಧವ್‌ ಅವರು ಕಂಚಿನ ಪದಕ ಗೆದ್ದು ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಕುರಾಶ್‌ಗೆ ಸಾಕಷ್ಟು ಸಾಮ್ಯತೆ ಇರುವ ಕ್ರೀಡೆ ಜೂಡೊ.

ಈ ಎರಡೂ ಕ್ರೀಡೆಗಳತ್ತ ಹೈದರಾಬಾದ್ ಕರ್ನಾಟಕ ಭಾಗದ ಕಲಬುರ್ಗಿಯಲ್ಲಿ ಕೆಲ ವರ್ಷಗಳಿಂದೀಚೆಗೆ ಒಲವು ಬೆಳೆಯುತ್ತಿದ್ದು, ಇಲ್ಲಿನ ಪ್ರತಿಭೆಗಳು ಭವಿಷ್ಯದಲ್ಲಿ ಸಾಧನೆ ಮಾಡುವ ಭರವಸೆ ಮೂಡಿಸಿದ್ದಾರೆ.

2018-19ನೇ ಸಾಲಿನಲ್ಲಿ ಜೂಡೊ ಸ್ಪರ್ಧೆಯ ವಿವಿಧ ವಯೋಮಾನದವರ ವಿಭಾಗದಲ್ಲಿ ನಾಲ್ಕು ಬೆಳ್ಳಿ, ಒಂದು ಕಂಚಿನ ಪದಕಗಳು ಬಂದಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇದು ಉತ್ತಮ ಸಾಧನೆ. 2015–16ರಲ್ಲಿ ಒಂದೂ ಪದಕ ಬಂದಿರಲಿಲ್ಲ. 2016–17ರಲ್ಲಿ ನಾಲ್ಕು, 2017–18ರಲ್ಲಿ ಕೇವಲ ಒಂದು ಪದಕದ ಸಾಧನೆ ಆಗಿತ್ತು.

ಇಬ್ಬರು ಕ್ರೀಡಾಪಟುಗಳು ರಾಜ್ಯಮಟ್ಟದ ಕುರಾಶ್ ಸ್ಪರ್ಧೆಯಲ್ಲಿ ಪದಕ ಗಳಿಸಿ, ರಾಷ್ಟ್ರಮಟ್ಟದಲ್ಲಿ ಆಡಿದ್ದಾರೆ.

ಇಲ್ಲಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜೂಡೊ ತರಬೇತುದಾರರಾಗಿರುವ ಅಶೋಕ್ ಮಲ್ಲೇಶಿ ಅವರ ಬಳಿ ಸದ್ಯ 30 ಮಕ್ಕಳು ತರಬೇತಿ ಪಡೆಯುತ್ತಿದ್ದಾರೆ.

ಇದರಲ್ಲಿ ಎಂಟು ಬಾಲಕಿಯರು, 22 ಬಾಲಕರು ಇದ್ದಾರೆ. ಬಹುತೇಕ ಮಕ್ಕಳು ಬಡ ಕುಟುಂಬ ಮತ್ತು ಕೊಳೆಗೇರಿ ಪ್ರದೇಶದವರು. ಆದರೆ, ಅವರಲ್ಲಿ ಪ್ರತಿಭೆಗೆ ಕೊರತೆ ಇಲ್ಲ ಎಂಬುದನ್ನು ಸಾಬೀತು ಮಾಡುತ್ತಿದ್ದಾರೆ.

ಅಶೋಕ್ ಅವರ ಬಳಿ ತರಬೇತಿ ಪಡೆದಿರುವ ಗುಲ್ಬರ್ಗಾ ವಿವಿಯ ವಿದ್ಯಾರ್ಥಿಗಳಾದ ಸುರೇಶ ಮತ್ತು ಮಂಜುನಾಥ್ ಅವರು ಡಿ.27ರಂದು ಅಮೃತಸರದಲ್ಲಿ ನಡೆಯಲಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಜೂಡೊ ಚಾಂಪಿಯನ್‌ಷಿಪ್‌ಗೆ ಆಯ್ಕೆ ಆಗಿದ್ದಾರೆ. ಫೆಬ್ರುವರಿಯಲ್ಲಿ ನಡೆಯಲಿರುವ ನ್ಯಾಷನಲ್ ಗೇಮ್ಸ್‌ನಲ್ಲಿ ಜೂಡೊ ಚಾಂಪಿಯನ್‌ಷಿಪ್‌ಗೆ ರಾಜ್ಯ ತಂಡದ ಆಯ್ಕೆಗೆ ನಡೆದ ಟ್ರಯಲ್ಸ್‌ನಲ್ಲಿ ದೇವಶ್ರೀ ಆಯ್ಕೆಯಾಗಿದ್ದು, ಅಭ್ಯಾಸ ನಡೆಸುತ್ತಿದ್ದಾರೆ.

‘ಪಿಯುಸಿಯಲ್ಲಿದ್ದಾಗ ಕುಸ್ತಿ ಆಡುತ್ತಿದ್ದೆ. ಕ್ರೀಡಾಕೂಟವೊಂದರಲ್ಲಿ ನನ್ನ ಆಟವನ್ನು ನೋಡಿದ ಅಶೋಕ್ ಅವರು ಜೂಡೊ ಕಲಿಯುವಂತೆ ಸೂಚಿಸಿದರು. ಒಂದೂವರೆ ವರ್ಷದಿಂದ ತರಬೇತಿ ಪಡೆಯುತ್ತಿದ್ದೇನೆ. ನಮ್ಮದು ಕೃಷಿ ಕುಟುಂಬ. ಆರಂಭದಲ್ಲಿ ಅವರಿಗೆ ಇದು ಇಷ್ಟ ಇರಲಿಲ್ಲ. ಆಟದ ಕುರಿತು ಹೇಳಿದಾಗ ಮತ್ತು ನನ್ನ ಸಾಧನೆಯನ್ನು ನೋಡಿ ಅವರೂ ಪ್ರೋತ್ಸಾಹ ನೀಡುತ್ತಿದ್ದಾರೆ’ ಎನ್ನುತ್ತಾರೆ ಚಿಂಚೋಳಿ ತಾಲ್ಲೂಕಿನ ರಾಯಕೋಡದ ಸುರೇಶ್. ಅವರು ಕಲಬುರ್ಗಿಯ ಗುರುಪಾದೇಶ್ವರ ಕಾಲೇಜಿನಲ್ಲಿ ಬಿ.ಎಸ್ಸಿ ಓದುತ್ತಿದ್ದಾರೆ.

ಕಲಬುರ್ಗಿಯ ಕೊಳೆಗೇರಿ ಪ್ರದೇಶ ಗುಲ್ಲಾಬಾಡಿಯ ಸಾಯಿನಾಥ್‌ ಕೋಲಾರದಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ (25 ಕೆ.ಜಿ ವಿಭಾಗ) ಬೆಳ್ಳಿ ಪದಕ ಜಯಿಸಿದ್ದಾನೆ.

‘ನನ್ನ ತಂದೆ ಪೇಂಟರ್. ಕೆಲಸದ ನಡುವೆ ಅವರಿಗೆ ನನ್ನ ಬಗ್ಗೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುವುದಿಲ್ಲ. ತಾಯಿ ನನಗೆ ಸದಾ ಪ್ರೋತ್ಸಾಹ ನೀಡುತ್ತಾರೆ. ಶಾಲೆಗೆ ಹೋಗದಿದ್ದರೂ ತರಬೇತಿ ತಪ್ಪಿಸಿಕೊಳ್ಳುವುದಿಲ್ಲ. ಈ ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡಬೇಕೆಂದಿದ್ದೇನೆ’ ಎನ್ನುತ್ತಾನೆ ಆರನೇ ತರಗತಿ ಓದುತ್ತಿರುವ ಸಾಯಿನಾಥ್.

ಎರಡು ವರ್ಷಗಳಿಂದ ತರಬೇತಿ ನೀಡಲಾಗುತ್ತಿದೆ. ಆರಂಭದಲ್ಲಿ ಮೂರ್ನಾಲ್ಕು ಮಕ್ಕಳು ಮಾತ್ರ ಬರುತ್ತಿದ್ದರು. ಈ ಕ್ರೀಡೆಯ ಮಹತ್ವ ಮತ್ತು ಅದರಿಂದಾಗುವ ಪ್ರಯೋಜನಗಳ ಕುರಿತು ತಿಳಿಸಿದಾಗ ಪೋಷಕರು ಈಗಿಗ ಮಕ್ಕಳನ್ನು ಕಳಿಸುತ್ತಿದ್ದಾರೆ ಎಂದು ಅಶೋಕ್ ಹೇಳಿದರು.

ಜೂಡೊ ಮತ್ತು ಕುರಾಶ್‌ಗೆ ಹೆಚ್ಚು ವ್ಯತ್ಯಾಸ ಇಲ್ಲ. ಹೀಗಾಗಿ ಮಕ್ಕಳಿಗೆ ಜೂಡೊ ಮತ್ತು ಕುರಾಶ್ ಎರಡರ ತರಬೇತಿಯನ್ನೂ ನೀಡುತ್ತೇನೆ. ಕಲಬುರ್ಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಜೂಡೊ ಅಂಕಣ ಮಂಜೂರಾಗಿದೆ. ಆದಷ್ಟು ಬೇಗ ಅಂಕಣ ನಿರ್ಮಿಸಿ, ಮೂಲಸೌಕರ್ಯ ಕಲ್ಪಿಸಿದರೆ ಇಲ್ಲಿನ ಮಕ್ಕಳು ಇನ್ನೂ ಹೆಚ್ಚಿನ ಸಾಧನೆ ಮಾಡುತ್ತಾರೆ ಎಂಬ ವಿಶ್ವಾಸ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT