ಡಬ್ಲ್ಯುಎಫ್‌ಐ ಅಧ್ಯಕ್ಷರ ವಿರುದ್ಧದ ಆರೋಪ: ಸಮಿತಿಗೆ ಮೇರಿ ಕೋಮ್ ನೇತೃತ್ವ

ನವದೆಹಲಿ (ಪಿಟಿಐ): ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ಮೇಲಿನ ಆರೋಪಗಳ ತನಿಖೆಗೆ ಕ್ರೀಡಾ ಸಚಿವಾಲಯ ನೇಮಿಸಿರುವ ಐವರು ಸದಸ್ಯರ ಮೇಲುಸ್ತುವಾರಿ ಸಮಿತಿಯನ್ನು ಮಹಿಳಾ ಬಾಕ್ಸರ್ ಎಂ.ಸಿ.ಮೇರಿ ಕೋಮ್ ಮುನ್ನಡೆಸಲಿದ್ದಾರೆ.
ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಯೋಗೇಶ್ವರ ದತ್, ಬ್ಯಾಡ್ಮಿಂಟನ್ ಆಟಗಾರ್ತಿ ಮತ್ತು ಮಿಷನ್ ಒಲಿಂಪಿಕ್ ಸೆಲ್ ಸದಸ್ಯರಾದ ತೃಪ್ತಿ ಮುರ್ಗುಂಡೆ, ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ (ಟಾಪ್ಸ್) ಮಾಜಿ ಸಿಇಒ ರಾಜಗೋಪಾಲನ್ ಮತ್ತು ಭಾರತ ಕ್ರೀಡಾ ಪ್ರಾಧಿಕಾರದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಧಿಕಾ ಶ್ರೀಮನ್ ಅವರು ಸಮಿತಿಯ ಇತರ ಸದಸ್ಯರು.
ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಸಮಿತಿಯ ಸದಸ್ಯರ ಹೆಸರನ್ನು ಸೋಮವಾರ ಪ್ರಕಟಿಸಿದರು. ಮೇಲುಸ್ತುವಾರಿ ಸಮಿತಿ ರಚಿಸುವ ಭರವಸೆಯನ್ನು ಅವರು ಶನಿವಾರ ನೀಡಿದ್ದರು. ಇದರಿಂದ ಕುಸ್ತಿಪಟುಗಳು ಮೂರು ದಿನಗಳ ಪ್ರತಿಭಟನೆಯನ್ನು ಕೊನೆಗೊಳಿಸಿದ್ದರು.
‘ಡಬ್ಲ್ಯುಎಫ್‌ಐ ಅಧ್ಯಕ್ಷರು ಫೆಡರೇಷನ್‌ನ ಎಲ್ಲ ಚಟುವಟಿಕೆಗಳಿಂದ ದೂರವುಳಿಯಲಿದ್ದಾರೆ. ಫೆಡರೇಷನ್‌ನ ದೈನಂದಿನ ಆಡಳಿತವನ್ನು ಮೇಲುಸ್ತುವಾರಿ ಸಮಿತಿ ನೋಡಿಕೊಳ್ಳಲಿದೆ. ಡಬ್ಲ್ಯುಎಫ್‌ಐ ಮತ್ತು ಅದರ ಅಧ್ಯಕ್ಷ ಮೇಲಿನ ಗಂಭೀರ ಆರೋಪಗಳ ಬಗ್ಗೆ ತನಿಖೆಯನ್ನೂ ನಡೆಸಲಿದೆ’ ಎಂದು ಠಾಕೂರ್ ಹೇಳಿದರು.
‘ಆರೋಪಗಳ ತನಿಖೆಗೆ ಸಮಿತಿಗೆ ಒಂದು ತಿಂಗಳ ಗಡುವು ನೀಡಲಾಗಿದೆ. ಸಮಗ್ರ ತನಿಖೆಯ ಬಳಿಕ ವರದಿ ಒಪ್ಪಿಸಲಿದೆ’ ಎಂದು ಮಾಹಿತಿ ನೀಡಿದರು.
ಮೇರಿ ಕೋಮ್ ಮತ್ತು ಯೋಗೇಶ್ವರ್ ಅವರು ಆರೋಪಗಳ ಕುರಿತ ತನಿಖೆಗೆ ಭಾರತ ಒಲಿಂಪಿಕ್ ಸಂಸ್ಥೆ ನೇಮಿಸಿದ್ದ ಏಳು ಸದಸ್ಯರ ಸಮಿತಿಯಲ್ಲೂ ಇದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.