ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಡೆ ಗ್ರ್ಯಾಂಡ್‌ ಸ್ವಿಸ್‌ ಚೆಸ್‌ ಟೂರ್ನಿ: ಭಾರತೀಯ ಆಟಗಾರರಿಗೆ ಮಿಶ್ರಫಲ

Last Updated 29 ಅಕ್ಟೋಬರ್ 2021, 9:08 IST
ಅಕ್ಷರ ಗಾತ್ರ

ರಿಗಾ (ಲಾತ್ವಿಯಾ): ಭಾರತದ ಆಟಗಾರರು, ಫಿಡೆ ಗ್ರ್ಯಾಂಡ್‌ ಸ್ವಿಸ್‌ ಚೆಸ್‌ ಟೂರ್ನಿಯ ಎರಡನೇ ಸುತ್ತಿನಲ್ಲಿ ಮಿಶ್ರಫಲ ಅನುಭವಿಸಿದರು. ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ತಲಾ ಇಬ್ಬರು ಜಯಗಳಿಸುವಲ್ಲಿ ಯಶಸ್ವಿಯಾದರು.

ಅನುಭವಿ ಗ್ರ್ಯಾಂಡ್‌ಮಾಸ್ಟರ್‌ ಕೃಷ್ಣನ್‌ ಶಶಿಕಿರಣ್‌ ಗುರುವಾರ ನಡೆದ ಪಂದ್ಯದಲ್ಲಿ ಉಜ್ಬೇಕಿಸ್ತಾನದ ಶಂಸುದ್ದೀನ್‌ ವಖಿಡೋವ್‌ ವಿರುದ್ಧ ಜಯಗಳಿಸಿದರೆ, ಯುವ ಪ್ರತಿಭೆ ಆರ್‌.ಪ್ರಗ್ನಾನಂದ 55 ನಡೆಗಳನ್ನು ಕಂಡ ದೀರ್ಘ ಪಂದ್ಯದಲ್ಲಿ ಸ್ವದೇಶದ ಬಿ.ಅಧಿಬನ್‌ ವಿರುದ್ಧ ಗೆಲುವನ್ನು ದಾಖಲಿಸಿದರು.

ಎರಡನೇ ಸುತ್ತಿನ ನಂತರ ಪ್ರಗ್ನಾನಂದ ಮತ್ತು ಶಶಿಕಿರಣ್‌ ತಲಾ 1.5 ಪಾಯಿಂಟ್ಸ್‌ ಸಂಗ್ರಹಿಸಿದ್ದಾರೆ. ಪ್ರತಿಭಾವಂತ ಅಲಿರೇಝಾ ಫಿರೌಜಾ (ಫ್ರಾನ್ಸ್) ಸೇರಿದಂತೆ ಮೂವರು ಆಟಗಾರರು ಗರಿಅಗ್ರಸ್ಥಾನದಲ್ಲಿದ್ದಾರೆ.

ಆದರೆ, ಕಣದಲ್ಲಿರುವ ಭಾರತೀಯ ಆಟಗಾರರ ಪೈಕಿ ಗರಿಷ್ಠ ರ‍್ಯಾಂಕ್‌ ಹೊಂದಿರುವ ಪಿ.ಹರಿಕೃಷ್ಣ ಅವರು ರಷ್ಯಾದ ಅಲೆಕ್ಸಿ ಡ್ರೀವ್‌ ಅವರಿಗೆ ಮಣಿದರು. ಮೊದಲ ಸುತ್ತಿನಲ್ಲಿ ಅವರು ವ್ಲಾಡಿಸ್ಲಾವ್‌ ಕೊವಲೆವ್‌ ಎದುರು ಪರಾಭವ ಕಂಡಿದ್ದರು.

ಭರವಸೆಯ ಆಟಗಾರ ನಿಹಾಲ್‌ ಸರಿನ್‌, ವಿಶ್ವದ ಎರಡನೇ ನಂಬರ್‌ ಆಟಗಾರ ಫ್ಯಾಬಿಯಾನೊ ಕರುವಾನ ಎದುರು ಅರ್ಧ ಪಾಯಿಂಟ್‌ ಖಾತೆಗಿಳಿಸುವಲ್ಲಿ ಯಶಸ್ವಿಯಾದರು. 17 ವರ್ಷದ ಸರಿನ್‌ ಟಾಪ್‌ ಬೋರ್ಡ್‌ ಪಂದ್ಯದ ಆರಂಭದಲ್ಲಿ ಸ್ವಲ್ಪ ಹಿನ್ನಡೆಯಲ್ಲಿದ್ದರು. ಆದರೆ ಚೇತರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ‘ಪಂದ್ಯದಲ್ಲಿ ಸೋಲು ತಪ್ಪಿಸಿಕೊಳ್ಳುವ ಅವಕಾಶ ಶೇ 20ರಷ್ಟೇ ಇತ್ತು ಎಂದು ಭಾವಿಸಿದ್ದೆ’ ಎಂದು ಸರಿನ್‌ ಪ್ರತಿಕ್ರಿಯಿಸಿದರು. ಮೊದಲ ಸುತ್ತಿನಲ್ಲಿ ಅವರು ಕಿರಿಲ್‌ ಜಾರ್ಜಿಯೆವ್‌ ವಿರುದ್ಧ ಜಯ ದಾಖಲಿಸಿದ್ದರು.

ಮತ್ತೊಬ್ಬ ಹದಿಹರೆಯದ ಆಟಗಾರ ಡಿ.ಗುಕೇಶ್‌ ಸಹ ಎರಡು ಸುತ್ತುಗಳಿಂದ 1.5 ಅಂಕ ಸಂಗ್ರಹಿಸಿದ್ದಾರೆ. ಅವರು ಮೊದಲ ಸುತ್ತಿನಲ್ಲಿ ಅಂಟೇನೈನಾ ರೊಕ್ತೊಮಹರೊ ವಿರುದ್ಧ ಜಯಗಳಿಸಿದರು. ಎರಡನೇ ಸುತ್ತಿನಲ್ಲಿ ಇರಾನ್‌ನ ಪರ್ಹಾಮ್‌ ಮೊಗಸುಡ್ಲೊ ಜೊತೆ ಪಾಯಿಂಟ್‌ ಹಂಚಿಕೊಂಡರು.

ಮಹಿಳೆಯರ ವಿಭಾಗದಲ್ಲಿ ಭಾರತದ ಡಿ.ಹರಿಕಾ, ಸ್ವದೇಶದ ದಿವ್ಯಾ ದೇಶಮುಖ್‌ ಜೊತೆ ಎರಡನೇ ಸುತ್ತಿನಲ್ಲಿ ಡ್ರಾ ಮಾಡಿಕೊಂಡರು. ಪದ್ಮಿನಿ ರಾವುತ್‌ ಎರಡನೇ ಸುತ್ತಿನಲ್ಲಿ ಸ್ವೀಡನ್‌ನ ಪಿಯಾ ಕ್ರಾಮ್ಲಿಂಗ್‌ ಎದುರು ಜಯ ದಾಖಲಿಸಿದರು. ಎರಡನೇ ಸುತ್ತಿನಲ್ಲಿ ಯಶಸ್ಸು ಗಳಿಸಿದ ಭಾರತದ ಏಕೈಕ ಆಟಗಾರ್ತಿ ಎನಿಸಿದರು. ಮೊದಲ ಸುತ್ತಿನಲ್ಲಿ ಅವರು ಚೀನಾದ ಝು ಜಿನರ್‌ ಅವರಿಗೆ ಮಣಿದಿದ್ದರು.

ಪ್ರಗ್ನಾನಂದ ಅವರ ಸೋದರಿ ಆರ್‌.ವೈಶಾಲಿ, ಜಾರ್ಜಿಯಾದ ನಿನೊ ಬಟ್ಸಿಯಾಶ್ವಿಲಿ ಎದುರು ಸೋಲನುಭವಿಸಿದರು. ಟೂರ್ನಿಯಲ್ಲಿ ಭಾರತದ ಐವರು ಆಟಗಾರ್ತಿಯರು ಭಾಗವಹಿಸುತ್ತಿದ್ದಾರೆ.

2021–23ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅರ್ಹತೆ ಪಡೆಯಲು ಈ ಟೂರ್ನಿ ದಾರಿಯಾಗಿದೆ. ಮೊದಲ ಎರಡು ಸ್ಥಾನ ಪಡೆದವರು, 2022ರ ಕ್ಯಾಂಡಿಡೇಟ್ಸ್‌ ಟೂರ್ನಿಯಲ್ಲಿ ಆಡುವ ಅರ್ಹತೆ ಪಡೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT