ಪ್ರೈಮ್ ವಾಲಿಬಾಲ್ ಲೀಗ್ ಚಾಂಪಿಯನ್‌ಷಿಪ್: ಬೆಂಗಳೂರು– ಕೋಲ್ಕತ್ತ ಸೆಣಸು

ಬೆಂಗಳೂರು: ಪ್ರೈಮ್ ವಾಲಿಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಎರಡನೇ ಆವೃತ್ತಿಯ ಟೂರ್ನಿಗೆ ಶನಿವಾರ ಇಲ್ಲಿ ಚಾಲನೆ ಲಭಿಸಲಿದ್ದು, ಎಂಟು ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.
ಈ ಬಾರಿ ಮೂರು ನಗರಗಳಲ್ಲಿ ಪಂದ್ಯಗಳು ಆಯೋಜನೆಯಾಗಿದ್ದು, ಬೆಂಗಳೂರು ಲೆಗ್‌ನ ಪಂದ್ಯಗಳು ಫೆ.4 ರಿಂದ 12ರ ವರೆಗೆ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜನೆಯಾಗಿವೆ.
ಶನಿವಾರ ಸಂಜೆ 7ಕ್ಕೆ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಟಾರ್ಪಿಡೋಸ್ ಮತ್ತು ಕೋಲ್ಕತ್ತ ಥಂಡರ್‌ಬೋಲ್ಟ್ಸ್ ತಂಡಗಳು ಎದುರಾಗಲಿವೆ.
ಮುಂಬೈ ಮಿಟಿಯೋರ್ಸ್, ಕ್ಯಾಲಿಕಟ್ ಹೀರೋಸ್, ಅಹಮ ದಾಬಾದ್ ಡಿಫೆಂಡರ್ಸ್, ಹೈದರಾ ಬಾದ್ ಬ್ಲ್ಯಾಕ್‌ಹಾಕ್ಸ್, ಕೊಚ್ಚಿ ಬ್ಲೂ ಸ್ಪೈಕರ್ಸ್ ಮತ್ತು ಚೆನ್ನೈ ಬ್ಲಿಟ್ಜ್ ಲೀಗ್‌ನಲ್ಲಿ ಪಾಲ್ಗೊಂಡಿರುವ ಇತರ ತಂಡಗಳಾಗಿವೆ.
ಬೆಂಗಳೂರಿನಲ್ಲಿ ಒಟ್ಟು 10 ಪಂದ್ಯಗಳು ಆಯೋಜನೆಯಾಗಿವೆ. ಎರಡನೇ ಲೆಗ್‌ನ ಪಂದ್ಯಗಳು ಹೈದರಾಬಾದ್‌ನಲ್ಲಿ ಫೆ.15 ರಿಂದ 21ರ ವರೆಗೆ ನಡೆಯಲಿವೆ. ಮೂರನೇ ಹಾಗೂ ಕೊನೆಯ ಲೆಗ್‌ನ ಪಂದ್ಯಗಳು ಮತ್ತು ನಾಕೌಟ್ ಹೋರಾಟ ಕೊಚ್ಚಿಯಲ್ಲಿ ಫೆ.24 ರಿಂದ ಮಾರ್ಚ್5ರ ವರೆಗೆ ಆಯೋಜನೆಯಾಗಿವೆ.
28 ಲೀಗ್, ಎರಡು ಸೆಮಿಫೈನಲ್ ಮತ್ತು ಫೈನಲ್ ಸೇರಿದಂತೆ ಒಟ್ಟು 31 ಪಂದ್ಯಗಳು ನಡೆಯಲಿವೆ. ಮೊದಲ ಆವೃತ್ತಿಯ ಟೂರ್ನಿಯಲ್ಲಿ ಕೋಲ್ಕತ್ತ ಥಂಡರ್‌ಬೋಲ್ಟ್ಸ್ ಚಾಂಪಿಯನ್ ಆಗಿತ್ತು. ಅಶ್ವಲ್ ರೈ ನೇತೃತ್ವದ ತಂಡ ಈ ಬಾರಿಯೂ ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದೆ.
ಟ್ರೋಫಿ ಅನಾವರಣ: ಲೀಗ್‌ನ ಟ್ರೋಫಿ ಅನಾವರಣ ಕಾರ್ಯಕ್ರಮ ಶುಕ್ರವಾರ ನಡೆಯಿತು. ಎಲ್ಲ ಎಂಟೂ ತಂಡಗಳು ನಾಯಕರು ಪಾಲ್ಗೊಂಡರು.
ಈ ವೇಳೆ ಮಾತನಾಡಿದ ಲೀಗ್‌ನ ಸಿಇಒ ಜಾಯ್ ಭಟ್ಟಾಚಾರ್ಯ, ‘ಲೀಗ್‌ನ ಎರಡನೇ ಆವೃತ್ತಿಯ ಪಂದ್ಯಗಳು ಮೂರು ನಗರಗಳಲ್ಲಿ ನಡೆಯಲಿದ್ದು, ವಾಲಿಬಾಲ್ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಂದ್ಯಗಳ ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.