ಗುರುವಾರ , ಸೆಪ್ಟೆಂಬರ್ 23, 2021
25 °C
ಥಾಮಸ್‌ ಮತ್ತು ಊಬರ್ ಕಪ್ ಬ್ಯಾಡ್ಮಿಂಟನ್ ಟೂರ್ನಿಗೆ ತಂಡಗಳು: ಸಿಂಧು ವಿಶ್ರಾಂತಿ

ಸೈನಾ, ಪ್ರಣೀತ್ ನಾಯಕತ್ವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮತ್ತು ಬಿ. ಸಾಯಿಪ್ರಣೀತ್ ಅವರು ಮುಂದಿನ ತಿಂಗಳು ಡೆನ್ಮಾರ್ಕ್‌ನಲ್ಲಿ ನಡೆಯಲಿರುವ ಥಾಮಸ್ ಮತ್ತು ಊಬರ್ ಕಪ್ ಬ್ಯಾಡ್ಮಿಂಟನ್ ಫೈನಲ್ಸ್‌ನಲ್ಲಿ ಕ್ರಮವಾಗಿ ಭಾರತದ ಮಹಿಳಾ ಮತ್ತು ಪುರುಷ ತಂಡಗಳನ್ನು ಮುನ್ನಡೆಸಲಿದ್ದಾರೆ.

ಎರಡು ಒಲಿಂಪಿಕ್ಸ್‌ಗಳಲ್ಲಿ ಪದಕ ಜಯಿಸಿರುವ ಪಿ.ವಿ. ಸಿಂಧು ವಿಶ್ರಾಂತಿಯಲ್ಲಿದ್ದು ಈ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿಲ್ಲ.   ಅ. 9ರಿಂದ 17ರವರೆಗೆ ಥಾಮಸ್ ಮತ್ತು ಊಬರ್ ಕಪ್ ಟೂರ್ನಿ ನಡೆಯುವುದು.

ಮಹಿಳೆಯರ ತಂಡದಲ್ಲಿ ಹತ್ತು ಆಟಗಾರ್ತಿಯರು ಇದ್ದಾರೆ.  ಸೈನಾ ನೆಹ್ವಾಲ್, ಮಾಳವಿಕಾ ಬನ್ಸೋದ್, ಅದಿತಿ ಭಟ್ ಮತ್ತು ತಸ್ನೀಮ್ ಮೀರ್ ಸಿಂಗಲ್ಸ್‌ನಲ್ಲಿದ್ದಾರೆ. ಡಬಲ್ಸ್‌ನಲ್ಲಿ ತನಿಶಾ ಕ್ರೆಸ್ಟೊ ಮತ್ತು ಋತುಪರ್ಣಾ ಪಂಡಾ ಆಡಲಿದ್ದಾರೆ.

ಪುರುಷರ ತಂಡದಲ್ಲಿ ಹತ್ತು ಆಟಗಾರರಿದ್ದಾರೆ. ಅದರಲ್ಲಿ ನಾಲ್ವರು ಸಿಂಗಲ್ಸ್‌ ಆಟಗಾರರೂ ಸೇರಿದ್ದಾರೆ. ಪ್ರಣೀತ್, ಕೆ. ಶ್ರೀಕಾಂತ್, ಕಿರಣ್ ಜಾರ್ಜ್, ಸಮೀರ್ ವರ್ಮಾ ಸಿಂಗಲ್ಸ್‌ ಆಡಲಿದ್ದಾರೆ. ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಜೋಡಿಯು ಡಬಲ್ಸ್‌ನಲ್ಲಿ ಆಡುವುದು.

ಥಾಮಸ್ ಕಪ್ ಟೂರ್ನಿಯಲ್ಲಿ ಭಾರತದ ಪುರುಷರ ತಂಡವು ಸಿ ಗುಂಪಿನಲ್ಲಿ ಕಣಕ್ಕಿಳಿಯಲಿದೆ. ಹಾಲಿ ಚಾಂಪಿಯನ್ ಚೀನಾ, ನೆದರ್ಲೆಂಡ್ಸ್‌ ಮತ್ತು ತಹಿತಿ ತಂಡಗಳಿವೆ.  ಊಬರ್ ಕಪ್‌ನಲ್ಲಿ ಸೈನಾ ಬಳಗವು ಬಿ ಗುಂಪಿನಲ್ಲಿ ಆಡಲಿದೆ. ಥಾಯ್ಲೆಂಡ್, ಸ್ಪೇನ್ ಮತ್ತು ಸ್ಕಾಟ್ಲೆಂಡ್ ತಂಡಗಳನ್ನು ಎದುರಿಸಲಿದೆ. 

ಸುದೀರ್‌ಮನ್ ಕಪ್‌ಗೆ ತಂಡ

ಸೆಪ್ಟೆಂಬರ್ 26 ರಿಂದ ಅ.3ರವರೆಗೆ ಫಿನ್ಲೆಂಡ್‌ನಲ್ಲಿ ನಡೆಯಲಿರುವ ಸುದೀರ್‌ಮನ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಆಡುವ 12 ಆಟಗಾರರ ತಂಡವನ್ನೂ  ಈ ಸಂದರ್ಭದಲ್ಲಿ ಹೆಸರಿಸಲಾಗಿದೆ. 

ಈ ತಂಡದಲ್ಲಿ ಧ್ರುವ ಕಪಿಲಾ, ಎಂ.ಆರ್. ಅರ್ಜುನ್, ಶ್ರೀಕಾಂತ್, ಪ್ರಣೀತ್, ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಇದ್ದಾರೆ. ಮಹಿಳೆಯರ ತಂಡದಲ್ಲಿ ತನಿಶಾ–ಋತುಪರ್ಣಾ, ಅಶ್ವಿನಿ ಪೊನ್ನಪ್ಪ ಮತ್ತು ಎನ್. ಸಿಕ್ಕಿ ರೆಡ್ಡಿ ಇದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.