ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ ಲೀಗ್‌: ಯೋಧಾ, ವಾರಿಯರ್ಸ್‌ಗೆ ಜಯ

ಪ್ರೊ ಕಬಡ್ಡಿ ಲೀಗ್‌: ಸುರೇಂದರ್ ಗಿಲ್, ಪ್ರದೀಪ್ ನರ್ವಾಲ್, ಮಣಿಂದರ್ ಸಿಂಗ್ ‘ಸೂಪರ್’ ಆಟ
Last Updated 17 ಜನವರಿ 2022, 18:18 IST
ಅಕ್ಷರ ಗಾತ್ರ

ಬೆಂಗಳೂರು: ರೇಡಿಂಗ್ ಜೋಡಿ ಸುರೇಂದರ್ ಗಿಲ್ ಮತ್ತು ಪ್ರದೀಪ್ ನರ್ವಾಲ್ ಅವರ ‘ಸೂಪರ್’ ಆಟದ ನೆರವಿನಿಂದ ಯು.ಪಿ.ಯೋಧಾ ತಂಡ ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿತು. ಸೋಮವಾರ ರಾತ್ರಿ ನಡೆದ ಹಣಾಹಣಿಯಲ್ಲಿ ಪುಣೇರಿ ಪಲ್ಟನ್ ತಂಡವನ್ನು ಯೋಧಾ 50–40ರಲ್ಲಿ ಮಣಿಸಿತು.

ವೈಟ್‌ಫೀಲ್ಡ್‌ನ ಶೆರಟಾನ್ ಗ್ರ್ಯಾಂಡ್‌ ಹೋಟೆಲ್‌ನಲ್ಲಿ ನಿರ್ಮಿಸಿರುವ ಮ್ಯಾಟ್‌ನಲ್ಲಿ ಸುರೇಂದರ್ ಗಿಲ್ ಮತ್ತು ಪ್ರದೀಪ್ ನರ್ವಾಲ್ ಮಿಂಚಿದರು. ಇಬ್ಬರೂ ಕ್ರಮವಾಗಿ 21 ಮತ್ತು 10 ಪಾಯಿಂಟ್ ಕಲೆ ಹಾಕಿದರು. ಪುಣೇರಿ ಪಲ್ಟನ್‌ ತಂಡಕ್ಕಾಗಿ ಅಸ್ಲಾಂ ಇನಾಮದಾರ್ ಮತ್ತು ಮೋಹಿತ್ ಗೋಯತ್ ಸೂಪರ್ ಟೆನ್ ಸಾಧನೆ ಮಾಡಿದರು. ಆದರೆ ಟ್ಯಾಕ್ಲಿಂಗ್‌ನಲ್ಲಿ ಆದ ವೈಫಲ್ಯಗಳಿಂದಾಗಿ ತಂಡ ಸೋಲಿನ ಬಲೆಯಲ್ಲಿ ಸಿಲುಕಿತು.

ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳೂ ಧಾರಾಳ ಪಾಯಿಂಟ್‌ಗಳನ್ನು ಕಲೆ ಹಾಕಿದವು. ಮೂರು ಪಾಯಿಂಟ್‌ಗಳೊಂದಿಗೆ ಪ್ರದೀಪ್ ನರ್ವಾಲ್‌ ಮೊದಲ ರೇಡ್‌ನಲ್ಲೇ ಮಿಂಚಿದರು. ಅಸ್ಲಾಂ ಮತ್ತು ಮೋಹಿತ್‌ ಅವರ ಸಾಧನೆಯಿಂದಾಗಿ ಯು.ಪಿ.ಯೋಧಾ ಆಲೌಟಾಯಿತು. ಮೊದಲಾರ್ಧ 20–20ರಲ್ಲಿ ಸಮ ಆಯಿತು. ಆದರೆ ದ್ವಿತೀಯಾರ್ಧದಲ್ಲಿ ಯೋಧಾ ಭರ್ಜರಿ ಆಟವಾಡಿ 30 ಪಾಯಿಂಟ್ ಕಲೆ ಹಾಕಿತು.

ತೆಲುಗು ಟೈಟನ್ಸ್‌ಗೆ ಮತ್ತೆ ನಿರಾಶೆ

ತೆಲುಗು ಟೈಟನ್ಸ್ ಮತ್ತೊಮ್ಮೆ ನಿರಾಶೆ ಕಂಡಿತು. ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಟೈಟನ್ಸ್‌ ವಿರುದ್ಧ ಬೆಂಗಾಲ್ ವಾರಿಯರ್ಸ್ 28–27ರಲ್ಲಿ ಜಯ ಸಾಧಿಸಿತು. ಬೆಂಗಾಲ್ ಪರ ಮಣಿಂದರ್ ಸಿಂಗ್ 10, ಟೈಟನ್ಸ್‌ಗಾಗಿ ರಜನೀಶ್ 11 ಪಾಯಿಂಟ್ ಕಲೆ ಹಾಕಿದರು.

ಎರಡನೇ ಹಂತ 20ರಿಂದ

ಟೂರ್ನಿಯ ಎರಡನೇ ಹಂತದ ಪಂದ್ಯಗಳು ಇದೇ 20ರಂದು ಆರಂಭವಾಗಲಿವೆ ಎಂದು ಆಯೋಜಕರಾದ ಮಶಾಲ್ ಸ್ಪೋರ್ಟ್ಸ್ ಸಂಸ್ಥೆಯವರು ಸೋಮವಾರ ತಿಳಿಸಿದ್ದಾರೆ. ಈ ಹಂತದಲ್ಲಿ ಒಟ್ಟು 33 ಪಂದ್ಯಗಳು ನಡೆಯಲಿದ್ದು ಮೊದಲ ಹಣಾಹಣಿಯಲ್ಲಿ ತಮಿಳ್ ತಲೈವಾಸ್ ಮತ್ತು ಗುಜರಾತ್ ಜೈಂಟ್ಸ್ ಮುಖಾಮುಖಿಯಾಗಲಿವೆ. ಅದೇ ದಿನ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ಪಟ್ನಾ ಪೈರೇಟ್ಸ್‌ ಸೆಣಸಲಿವೆ. ಫೆಬ್ರವರಿ ನಾಲ್ಕರಂದು ಕೊನೆಯ ಪಂದ್ಯ.

ಕೊನೆಯ ಹಂತದಲ್ಲಿ ಮತ್ತೆ 33 ಪಂದ್ಯಗಳು ನಡೆಯಲಿವೆ. ಅಲ್ಲಿಗೆ ರೌಂಡ್ ರಾಬಿನ್ ಹಂತದ ಎಲ್ಲ 132 ಪಂದ್ಯಗಳು ಮುಕ್ತಾಯಗೊಳ್ಳಲಿವೆ. ನಂತರ ಪ್ಲೇ ಆಫ್‌ ಹಾಗೂ ಫೈನಲ್ ಇರುತ್ತದೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT