ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಮಲೇಷ್ಯಾ ಸವಾಲು

ಸುದೀರ್‌ಮನ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿ: ಸೈನಾ, ಸಿಂಧು ಆಕರ್ಷಣೆ
Last Updated 20 ಮೇ 2019, 17:38 IST
ಅಕ್ಷರ ಗಾತ್ರ

ನ್ಯಾನಿಂಗ್‌, ಚೀನಾ: ಸುದೀರ್‌ಮನ್ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಭಾರತ ತಂಡವು ಈ ಹಾದಿಯಲ್ಲಿ ಅಗ್ನಿ ಪರೀಕ್ಷೆ ಎದುರಿಸಲು ಸಜ್ಜಾಗಿದೆ.

ಮಂಗಳವಾರ ನಡೆಯುವ ಹಣಾಹಣಿಯಲ್ಲಿ ಭಾರತ ತಂಡ ಮಲೇಷ್ಯಾ ಸವಾಲು ಎದುರಿಸಲಿದ್ದು, ಸುಲಭ ಗೆಲುವಿನ ವಿಶ್ವಾಸದಲ್ಲಿದೆ.

ಭಾರತವು ಟೂರ್ನಿಯಲ್ಲಿ ಒಮ್ಮೆಯೂ ಪ್ರಶಸ್ತಿ ಜಯಿಸಿಲ್ಲ. 2011 ಮತ್ತು 2017ರಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದೇ ತಂಡದ ಉತ್ತಮ ಸಾಧನೆ ಎನಿಸಿದೆ.

ಮಲೇಷ್ಯಾ ತಂಡವು 2009ರಲ್ಲಿ ಸೆಮಿಫೈನಲ್‌ ಪ್ರವೇಶಿಸಿತ್ತು. ಭಾನುವಾರ ನಡೆದಿದ್ದ ಹೋರಾಟದಲ್ಲಿ 0–5ರಿಂದ ಹತ್ತು ಬಾರಿಯ ಚಾಂಪಿಯನ್‌ ಚೀನಾ ಎದುರು ಸೋತಿತ್ತು. ಹೀಗಾಗಿ ಭಾರತದ ಎದುರಿನ ಪಂದ್ಯ ಈ ತಂಡದ ಪಾಲಿಗೆ ‘ಮಾಡು ಇಲ್ಲವೇ ಮಡಿ’ ಹೋರಾಟವಾಗಿದೆ.

ಟೂರ್ನಿಯಲ್ಲಿ ಎಂಟನೇ ಶ್ರೇಯಾಂಕ ಹೊಂದಿರುವ ಭಾರತ ತಂಡದಲ್ಲಿ ಪ್ರತಿಭಾನ್ವಿತ ಸ್ಪರ್ಧಿಗಳಿದ್ದಾರೆ. ಸೈನಾ ನೆಹ್ವಾಲ್‌ ಮತ್ತು ಪಿ.ವಿ.ಸಿಂಧು ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ತಂಡದ ಆಧಾರಸ್ಥಂಭಗಳಾಗಿದ್ದಾರೆ. ಇವರು ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಕ್ರಮವಾಗಿ ಒಂಬತ್ತು ಮತ್ತು ಐದನೇ ಸ್ಥಾನಗಳಲ್ಲಿದ್ದಾರೆ.

ಕಿದಂಬಿ ಶ್ರೀಕಾಂತ್‌, ಸಮೀರ್‌ ವರ್ಮಾ ಅವರ ಮೇಲೂ ಭರವಸೆ ಇಡಬಹುದಾಗಿದೆ. ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ, ಅಶ್ವಿನಿ ಪೊನ್ನಪ್ಪ ಅವರೂ ಮಿಂಚುವ ಹುಮ್ಮಸ್ಸಿನಲ್ಲಿದ್ದಾರೆ.

ಪ್ರಮುಖ ಆಟಗಾರ ಲೀ ಚೊಂಗ್ ವೀ ಅನುಪಸ್ಥಿತಿಯಲ್ಲಿ ಮಲೇಷ್ಯಾ ತಂಡವು ಸಂಪೂರ್ಣವಾಗಿ ಸೊರಗಿದಂತಿದೆ. ಚೀನಾ ಎದುರು ತಂಡ ಆಡಿದ ರೀತಿ ಇದಕ್ಕೆ ನಿದರ್ಶನದಂತಿತ್ತು.

ಗೊಹ್‌ ಜಿನ್‌ ವೀ ಮತ್ತು ಸೋನಿಯಾ ಚೆಹ್‌ ಅವರು ಮಹಿಳಾ ಸಿಂಗಲ್ಸ್‌ನಲ್ಲಿ ತಂಡದ ಬೆನ್ನೆಲುಬಾಗಿದ್ದಾರೆ. ಚೀನಾ ಎದುರು ನೀರಸ ಆಟ ಆಡಿದ್ದ ಇವರು ಭಾರತದ ಎದುರು ಲಯ ಕಂಡುಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಕಣಕ್ಕಿಳಿಯುವ ಲೀ ಜೀ ಜಿಯಾ ಮೇಲೂ ಹೆಚ್ಚಿನ ಜವಾಬ್ದಾರಿ ಇದೆ. ಡಬಲ್ಸ್‌ನಲ್ಲಿ ಈ ತಂಡವು ಪರಿಣಾಮಕಾರಿಯಾಗಿ ಆಡಬೇಕಿದೆ. ಆ್ಯರನ್‌ ಚಿಯಾ ಮತ್ತು ಸೊಹ್‌ ವೂಯಿ ಯಿಕ್‌, ಒಂಗ್‌ ಯೀವ್‌ ಸಿನ್‌ ಮತ್ತು ಟಿಯೊ ಈ ಯಿನ್‌ ಅವರು ಪುರುಷರ ಡಬಲ್ಸ್‌ನಲ್ಲಿ ಆಡಲಿದ್ದಾರೆ. ಚೌ ಮೀ ಕೌನ್‌ ಮತ್ತು ಲೀ ಮೆಂಗ್ ಯೀನ್‌ ಅವರು ಮಹಿಳಾ ಡಬಲ್ಸ್‌ನಲ್ಲಿ ಅಂಗಳಕ್ಕಿಳಿಯಲಿದ್ದಾರೆ. ಇವರು ಭಾರತದ ಸ್ಪರ್ಧಿಗಳ ಸವಾಲನ್ನು ಹೇಗೆ ಎದುರಿಸುತ್ತಾರೆ ಎಂಬುದು ಸದ್ಯದ ಕುತೂಹಲ.

ಭಾರತ ತಂಡವು ಹೋದ ವರ್ಷ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಮಲೇಷ್ಯಾ ತಂಡವನ್ನು ಮಣಿಸಿ ಚಿನ್ನದ ಪದಕ ಜಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT