ಸಾನಿಯಾ ಮೇನಿಯಾ..

7

ಸಾನಿಯಾ ಮೇನಿಯಾ..

Published:
Updated:
Prajavani

ಟೆನಿಸ್‌ ಆಟದಲ್ಲಿ ವಿಶಿಷ್ಟ ಛಾಪು ಮೂಡಿಸಿ, ಹಲವು ಮಹಿಳಾ ಕ್ರೀಡಾಪಟುಗಳಿಗೆ ಸ್ಫೂರ್ತಿಯಾದವರು ಸಾನಿಯಾ ಮಿರ್ಜಾ. ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರೂ ಸಾಧನೆ ಮಾಡಬೇಕೆಂಬ ಅವರ ಆಶಯ ಇನ್ನೂ ಕುಗ್ಗಿಲ್ಲ. ಈ ವರ್ಷಾಂತ್ಯಕ್ಕೆ ಮತ್ತೆ ಅಂಗಳಕ್ಕೆ ಮರುಳುವುದಾಗಿ ತಿಳಿಸಿರುವ ಅವರು ತಮ್ಮ ಕ್ರೀಡಾಭಿರುಚಿ, ಫಿಟ್‌ನೆಸ್‌ ಕಾಳಜಿ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

l ಕರ್ನಾಟಕದೊಂದಿಗೆ ನಿಮ್ಮ ಒಡನಾಟ ಹೇಗಿದೆ?

ಬೆಂಗಳೂರಿಗೆ ಭೇಟಿ ನೀಡಿದಾಗಲೆಲ್ಲಾ ತವರೂರಿಗೆ ಬಂದಂತೆ ಅನಿಸುತ್ತದೆ. ಬೇರೆ ಪ್ರದೇಶಕ್ಕೆ ಬಂದಿದ್ದೀನೆ ಎಂಬ ಭಾವನೆ ಎಂದೂ ಕಾಡಿಲ್ಲ. ಚಿಕ್ಕಂದಿನಿಂದಲೂ ಈ ನಗರದೊಂದಿಗೆ ಒಡನಾಟವಿದೆ. ನಮ್ಮ ಹಲವು ಹತ್ತಿರದ ಸಂಬಂಧಿಕರು ಇಲ್ಲಿದ್ದಾರೆ. ರೋಹನ್‌ ಬೋಪಣ್ಣ ಮತ್ತು ಅವರ ಪತ್ನಿ ಜತೆಗೆ ಉತ್ತಮ ಬಾಂಧವ್ಯವಿದೆ. ಇಲ್ಲಿನ ವಾತಾವರಣ ಹೆಚ್ಚು ಇಷ್ಟವಾಗುತ್ತದೆ.

lಮತ್ತೆ ಟೆನಿಸ್‌ ರಾಕೆಟ್‌ ಹಿಡಿಯಬೇಕೆಂಬ ಬಯಕೆ ಇದೆ ಎಂದು ಹೇಳಿದ್ದೀರಿ. ತಯಾರಿ ಹೇಗಿದೆ?

ಆಟಕ್ಕೆ ಮರಳಬೇಕೆಂದರೆ ಫಿಟ್‌ನೆಸ್‌ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಮಗು ಜನಿಸಿ ಕೇವಲ ಎರಡು ತಿಂಗಳಾಗಿದೆ. ಅವನ ಆರೋಗ್ಯದ ಬಗ್ಗೆಯೂ ಗಮನ ಕೊಡಬೇಕು. ನನ್ನ ಆರೋಗ್ಯವನ್ನೂ ನೋಡಿಕೊಳ್ಳಬೇಕು. ಈ ನಡುವೆಯೂ ನಿತ್ಯ ಎರಡು–ಮೂರು ಗಂಟೆ ವ್ಯಾಯಾಮ ಮಾಡುತ್ತಿದ್ದೇನೆ. ಜಿಮ್‌ನಲ್ಲಿ ಬೆವರು ಹರಿಸುತ್ತಿದ್ದೇನೆ. ಈಗಿರುವ ಪರಿಸ್ಥಿತಿಯಲ್ಲಂತೂ ಆಟಕ್ಕೆ ಮರಳುವುದು ಕಷ್ಟ. ಇಂತಹ ದಿನದಂದೇ ಆಟಕ್ಕೆ ಮರಳಬೇಕು ಎಂಬ ಯೋಜನೆಗಳನ್ನು ರೂಪಿಸಿಲ್ಲ, ಯೋಚನೆಯೂ ಮಾಡಿಲ್ಲ. 2019ರ ಅಂತ್ಯ ಅಥವಾ 2020ರಲ್ಲಿ ಖಂಡಿತ ಅಂಗಳಕ್ಕೆ ಇಳಿಯುತ್ತೇನೆ.

lದಶಕಕ್ಕೂ ಹೆಚ್ಚು ಕಾಲ ಆಟದಲ್ಲಿ ನಿರತರಾಗಿದ್ದಾಗ ನಿಮ್ಮ ಜೀವನ ಶೈಲಿ ಹೇಗಿತ್ತು?

ಆಗೆಲ್ಲಾ ಎಷ್ಟು ಸಾಧ್ಯವೊ, ಅಷ್ಟು ಫಿಟ್‌ನೆಸ್‌ಗೆ ಹೆಚ್ಚು ಗಮನ ಕೊಡುತ್ತಿದ್ದೆ. ವಿವಿಧ ತರಬೇತಿಗಳನ್ನು ಪಡೆಯುತ್ತಿದ್ದೆ. ನಿತ್ಯ 6 ಗಂಟೆ ವ್ಯಾಯಾಮಕ್ಕಾಗಿ ಮೀಸಲಿಡುತ್ತಿದ್ದೆ. ದಿನದ ಬಹುತೇಕ ಸಮಯ ಆಟದಲ್ಲಿ ನಿರತಳಾಗಿರುತ್ತಿದ್ದೆ. ಮಧ್ಯೆ ಇತರೆ ಆಟಗಳಲ್ಲಿಯೂ ತೊಡಗಿಸಿಕೊಳ್ಳುತ್ತಿದ್ದೆ. ಹಿಲ್‌ ಟ್ರೈನಿಂಗ್‌ ಕೂಡ ಪಡೆಯುತ್ತಿದ್ದೆ. ಬೇರೆ ದೇಶಗಳಿಗೆ ಹೋದಾಗ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಬೇಕಿತ್ತು. ಒಟ್ಟಿನಲ್ಲಿ ಆಗ ನನ್ನ ಜೀವನ ಶೈಲಿಯೆಲ್ಲಾ ಆಟ, ತರಬೇತಿ ಎಂಬಂತೆ ಇತ್ತು. ಸಾಧಿಸಬೇಕೆಂಬ ಹಂಬಲ, ಛಲ ಇದ್ದರಷ್ಟೇ ಮಾತ್ರ ಆಟದಲ್ಲಿ ಅರ್ಪಣಾ ಮನೋಭಾವ ಮೂಡಲು ಸಾಧ್ಯ.

lಆಟದಲ್ಲಿ ತಲ್ಲೀನರಾಗಿದ್ದ ನಿಮಗೆ, ಟೆನಿಸ್‌ ರೆಕೆಟ್ ಬಿಟ್ಟು ಇರಬೇಕಾದ ಪರಿಸ್ಥಿತಿ ಬಂದಾಗ ಹೇಗೆ ಅನಿಸಿತು?

ಎಲ್ಲರ ಜೀವನದಲ್ಲೂ ಬದಲಾವಣೆ ಅನಿವಾರ್ಯ, ನಾನು ಅದಕ್ಕೆ ಹೊರತೇನಲ್ಲ. ಜೀವನದಲ್ಲಿ ಎಂತಹ ಪರಿಸ್ಥಿತಿ ಬಂದರೂ, ಎಂತಹ ಸನ್ನಿವೇಶಗಳನ್ನು ಎದುರಿಸಬೇಕಾಗಿ ಬಂದರೂ ಧೃತಿಗೆಡದೇ ಧೃಡವಾಗಿರಬೇಕು ಎಂಬುದು ನನ್ನ ಭಾವನೆ. ಎಲ್ಲದಕ್ಕೂ ಹೊಂದಿಕೊಳ್ಳುವ ಸ್ವಭಾವ ಮುಖ್ಯ. ನಾನು ಕೂಡ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವುದನ್ನು ಕಲಿತೆ. ಮುಖ್ಯವಾಗಿ ಈ ಅವಧಿಯಲ್ಲಿ ಟೆನಿಸ್ ನೋಡಬೇಕೆಂದರೂ ಬೇಸರವಾಗುತ್ತಿತ್ತು, ಕಿರಿಕಿರಿ ಎನಿಸುತ್ತಿತ್ತು. ಸಾಧ್ಯವಾದಷ್ಟು ಟೆನಿಸ್‌ ಆಲೋಚನೆಗಳಿಂದ ದೂರವಿರಲು ಪ್ರಯತ್ನಿಸುತ್ತಿದೆ. ಫುಟ್‌ಬಾಲ್‌, ಕ್ರಿಕೆಟ್‌ ನೋಡುತ್ತಿದ್ದೆ. ಕ್ರೀಡಾಭಿಮಾನಿಗಳ ಚಪ್ಪಾಳೆ, ಟೆನಿಸ್‌ ಅಂಗಳ, ಸ್ಪರ್ಧಿಗಳ ಆಟ ಎಲ್ಲವನ್ನೂ ಬಿಟ್ಟು ಇರಬೇಕೆಂದರೆ ತುಂಬಾ ಕಷ್ಟ ಎನಿಸುತ್ತಿತ್ತು.

l ಮಗುವನ್ನು ಹೆತ್ತ ನಂತರ ನಿಮ್ಮ ಜೀವನ ಶೈಲಿ ಹೇಗಿದೆ?

ಟೆನಿಸ್‌ನಿಂದ ದೂರ ಇರಬೇಕಾಯಿತು ಎಂಬ ಬೇಸರಕ್ಕಿಂತ, ತಾಯ್ತನದ ಸಂತಸವನ್ನು ಹೆಚ್ಚು ಅನುಭವಿಸುತ್ತಿದ್ದೇನೆ. ರಾತ್ರಿ ನಿದ್ರೆಯಿಂದ ದೂರ ಉಳಿಯಬೇಕಾಗುತ್ತೆ. ನನ್ನ ಅದೃಷ್ಟವೆಂಬಂತೆ ಹೆಚ್ಚು ಕಾಡಿಸದ ಮಗುವನ್ನು ಪಡೆದಿದ್ದೇನೆ. ಅವನು ಅಳುವುದು ಅಪರೂಪ. ಮನೆಯವರೂ ಸಹಾಯ ಮಾಡುತ್ತಿದ್ದಾರೆ. ನಮ್ಮ ತಾಯಿ ಹೆಚ್ಚು ಕಾಳಜಿ ವಹಿಸಿ ನೋಡಿಕೊಳ್ಳುತ್ತಾರೆ. ಹೀಗಾಗಿ ಸಮಸ್ಯೆ ಅಂತ ಅನಿಸುತ್ತಿಲ್ಲ.

lಮಹಿಳೆಯರು ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಲು ಅವಕಾಶಗಳು ಹೇಗಿವೆ?

ನಮ್ಮ ದೇಶದಲ್ಲಿ 10 ವರ್ಷಗಳ ಹಿಂದೆ, ಕ್ರಿಕೆಟ್ ಒಂದೇ ಮುಖ್ಯ ಆಟ, ಈಗ ಹಾಗಿಲ್ಲ. ವಿವಿಧ ಆಟಗಳು ಗಮನ ಸೆಳೆಯುತ್ತಿವೆ. ಒಂದು ಕಾಲದಲ್ಲಿ ಆಟಗಾರ್ತಿಯರೆಂದರೆ, ಪಿ.ಟಿ. ಉಷಾ, ಕರ್ಣಂ ಮಲ್ಲೇಶ್ವರಿ ಅವರ ಹೆಸರುಗಳೇ ಕೇಳಿಸುತ್ತಿದ್ದವು. ಈಗ  ಪಿ.ವಿ. ಸಿಂಧು, ಸೈನಾ ನೆಹ್ವಾಲ್‌, ದೀಪಾ ಕರ್ಮಾಕರ್‌, ಮೇರಿ ಕೋಮ್‌, ಸಾಕ್ಷಿ ಮಾಲಿಕ್‌ ಹೀಗೆ ಹಲವು ಸಾಧಕರು ಕಣ್ಣ ಮುಂದೆ ಇದ್ದಾರೆ. ಇಂತಹ ಸಾಧಕರ ಪಟ್ಟಿ ಇನ್ನೂ ದೊಡ್ಡದಾಗುತ್ತೆ. ಖಂಡಿತ ಮಹಿಳೆಯರಿಗೆ ಕ್ರೀಡಾ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ.

lನಿಮ್ಮನ್ನೇ ಸ್ಫೂರ್ತಿಯಾಗಿ ತೆಗೆದುಕೊಳ್ಳುವ ಹೊಸ ಆಟಗಾರರಿಗೆ ಏನು ಸಲಹೆ ನೀಡುತ್ತೀರಿ?

ನಾನು ಕೂಡ ಹಲವು ಆಟಗಾರರ ಸ್ಫೂರ್ತಿಯಿಂದಲೇ ಸಾಧನೆ ಮಾಡಿದ್ದೇನೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದರೆ, ಅರ್ಪಣಾ ಮನೋಭಾವ ಮುಖ್ಯ. ಜತೆಗೆ ಫಿಟ್‌ನೆಸ್‌ಗೆ ಹೆಚ್ಚು ಒತ್ತು ಕೊಡಬೇಕು. ಶ್ರಮ ಪಡುವುದಕ್ಕೆ ಹಿಂಜರಿಯಬಾರದು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !