ಸೋಮವಾರ, ಫೆಬ್ರವರಿ 24, 2020
19 °C
ಫೈನಲ್‌ಗೆ ಲಗ್ಗೆ ಇಟ್ಟ ಪೇಸ್‌–ಎಬ್ಡೆನ್‌

ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿ: ಲಿಯಾಂಡರ್‌ ವಂಡರ್‌

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಳಕು ಸರಿದು ಕತ್ತಲೆ ಕವಿಯುತ್ತಿದ್ದ ಹೊತ್ತಿನಲ್ಲಿ ಹಕ್ಕಿಗಳೆಲ್ಲಾ ನಿಧಾನವಾಗಿ ಗೂಡು ಸೇರುತ್ತಿದ್ದವು. ಅದೇ ಸಮಯದಲ್ಲಿ ಕಬ್ಬನ್‌ ಉದ್ಯಾನದಲ್ಲಿರುವ ಕೆಎಸ್‌ಎಲ್‌ಟಿಎ ಅಂಗಳದಲ್ಲಿ ಟೆನಿಸ್‌ ಪ್ರಿಯರ ಕಲರವ ಶುರುವಾಗಿತ್ತು.

‘ಸೆಂಟರ್‌ ಕೋರ್ಟ್‌’ನ ಸುತ್ತ ಸೇರಿದ್ದವರದ್ದೆಲ್ಲಾ ಒಂದೇ ಬಯಕೆ. ಲಿಯಾಂಡರ್‌ ಪೇಸ್‌ ಗೆಲ್ಲಬೇಕೆಂಬುದು. ಅಭಿಮಾನಿಗಳ ಈ ಬಯಕೆಯನ್ನು ಭಾರತದ ಟೆನಿಸ್‌ ದಿಗ್ಗಜ ಶುಕ್ರವಾರವೂ ಈಡೇರಿಸಿದರು.

ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೊತೆಗೂಡಿ ಆಡುತ್ತಿರುವ ಲಿಯಾಂಡರ್‌ ‘ಟೈ ಬ್ರೇಕರ್‌’ನಲ್ಲಿ ಮತ್ತೊಮ್ಮೆ ‘ಪವಾಡ’ ಮಾಡಿದರು.

ಸೆಮಿಫೈನಲ್‌ನಲ್ಲಿ ಪೇಸ್‌ ಮತ್ತು ಮ್ಯಾಥ್ಯೂ 6–4, 3–6, 10–7ರಿಂದ ಇಸ್ರೇಲ್‌ನ ಜೊನಾಥನ್‌ ಎರ್ಲಿಚ್‌ ಮತ್ತು ಬೆಲಾರಸ್‌ನ ಆ್ಯಂಡ್ರೆ ವಸಿಲೆವ್‌ಸ್ಕಿಗೆ ಆಘಾತ ನೀಡಿ ಫೈನಲ್‌ಗೆ ಲಗ್ಗೆ ಇಟ್ಟರು.

1 ಗಂಟೆ 20 ನಿಮಿಷಗಳ ಈ ಹೋರಾಟದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾದ ಜೋಡಿ ಮೋಡಿ ಮಾಡಿತು.

ಪಂದ್ಯದ ಮೊದಲ ಗೇಮ್‌ನಲ್ಲೇ ಎರ್ಲಿಚ್‌ ಮತ್ತು ಆ್ಯಂಡ್ರೆ ಸರ್ವ್‌ ಕಳೆದುಕೊಂಡರು. ಡ್ಯೂಸ್‌ ಪಾಯಿಂಟ್‌  (40–40) ಕಲೆಹಾಕುವ ಭರದಲ್ಲಿ ಎರ್ಲಿಚ್‌ ಮಾಡಿದ ತಪ್ಪು ಇಸ್ರೇಲ್‌ ಮತ್ತು ಬೆಲಾರಸ್‌ ಜೋಡಿಗೆ ಮುಳುವಾಯಿತು.

ನಂತರ ಪ್ರಾಬಲ್ಯ ಮೆರೆದ ಪೇಸ್‌ ಮತ್ತು ಎಬ್ಡೆನ್‌ ಸುಲಭವಾಗಿ ಸೆಟ್‌ ಗೆದ್ದು ಅಭಿಮಾನಿಗಳ ಸಂಭ್ರಮ ಇಮ್ಮಡಿಸುವಂತೆ ಮಾಡಿದರು.

ಟೂರ್ನಿಯಲ್ಲಿ ಎರಡನೇ ಶ್ರೇಯಾಂಕ ಹೊಂದಿದ್ದ ಎರ್ಲಿಚ್‌ ಮತ್ತು ಆ್ಯಂಡ್ರೆ, ಎರಡನೇ ಸೆಟ್‌ನಲ್ಲಿ ಪುಟಿದೆದ್ದರು. 4ನೇ ಗೇಮ್‌ನಲ್ಲಿ ಮ್ಯಾಥ್ಯೂ ಎರಡು ಬಾರಿ ‘ಡಬಲ್‌ ಫಾಲ್ಟ್‌’ ಮಾಡಿ ಸರ್ವ್‌ ಕೈಚೆಲ್ಲಿದರು. ಹೀಗಾಗಿ ಎದುರಾಳಿಗಳು 3–1 ಮುನ್ನಡೆ ಪಡೆದು ಸೆಟ್‌ ಮೇಲಿನ ಹಿಡಿತ ಬಿಗಿ ಮಾಡಿಕೊಂಡರು. ಮರು ಗೇಮ್‌ನಲ್ಲಿ ಆ್ಯಂಡ್ರೆ ಅವರ ಸರ್ವ್‌ ಮುರಿದು ಹಿನ್ನಡೆ ತಗ್ಗಿಸಿಕೊಳ್ಳುವ ಅವಕಾಶವನ್ನು ಪೇಸ್‌ ಮತ್ತು ಮ್ಯಾಥ್ಯೂ ಕೈಚೆಲ್ಲಿದರು. ಹೀಗಾಗಿ ಗ್ಯಾಲರಿಯಲ್ಲಿ ಮೌನ ಮನೆಮಾಡಿತು.

ಏಳು ಮತ್ತು ಒಂಬತ್ತನೇ ಗೇಮ್‌ಗಳಲ್ಲಿ ಸರ್ವ್‌ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾದ ಇಸ್ರೇಲ್‌ ಮತ್ತು ಬೆಲಾರಸ್‌ ಜೋಡಿ 34 ನಿಮಿಷಗಳಲ್ಲಿ ಸೆಟ್‌ ಗೆದ್ದು 1–1 ಸಮಬಲ ಸಾಧಿಸಿತು.

‘ಟೈ ಬ್ರೇಕರ್‌’ನಲ್ಲಿ ಎರಡು ಜೋಡಿಗಳೂ ಜಿದ್ದಾಜಿದ್ದಿನಿಂದ ಸೆಣಸಿದವು. ಹೀಗಾಗಿ 2–2, 4–4, 5–5 ಸಮಬಲ ಕಂಡುಬಂತು. ಈ ಹಂತದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾದ ಜೋಡಿ ಚಮತ್ಕಾರ ಮಾಡಿತು. ಸತತ ಮೂರು ಪಾಯಿಂಟ್ಸ್‌ ಕಲೆಹಾಕಿ 8–5 ಮುನ್ನಡೆ ಪಡೆಯಿತು. ಎನ್ರಿಚ್‌ ಅವರು ಸತತ ಎರಡು ಪಾಯಿಂಟ್ಸ್‌ ಗಳಿಸಿ ಹಿನ್ನಡೆಯನ್ನು 7–8ಕ್ಕೆ ತಗ್ಗಿಸಿದಾಗ ಅಭಿಮಾನಿಗಳ ಎದೆಬಡಿತ ಜೋರಾಗಿತ್ತು. ಒತ್ತಡದ ಪರಿಸ್ಥಿತಿಯಲ್ಲೂ ಚಾಕಚಕ್ಯತೆಯಿಂದ ಸರ್ವ್‌ ಮಾಡಿದ ಪೇಸ್‌ ಸತತ ಎರಡು ಪಾಯಿಂಟ್ಸ್‌ ಗಳಿಸಿದಾಗ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು