ಭಾನುವಾರ, ಆಗಸ್ಟ್ 25, 2019
23 °C

ಟೆನಿಸ್‌: ನಡಾಲ್‌–ಮೆಡ್ವೆದೇವ್‌ ಫೈನಲ್ ಪೈಪೋಟಿ

Published:
Updated:
Prajavani

ಮಾಂಟ್ರಿಯಲ್‌, ಕೆನಡಾ: ಸ್ಪೇನ್‌ನ ರಫೆಲ್‌ ನಡಾಲ್‌ ಮತ್ತು ರಷ್ಯಾದ ಡೇನಿಲ್‌ ಮೆಡ್ವೆದೇವ್‌ ಅವರು ಮಾಂಟ್ರಿಯಲ್‌ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ.

ಶನಿವಾರ ರಾತ್ರಿ ನಿಗದಿಯಾಗಿದ್ದ ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸೆಮಿಫೈನಲ್‌ನಲ್ಲಿ ಅಗ್ರಶ್ರೇಯಾಂಕದ ಆಟಗಾರ ನಡಾಲ್‌, ಫ್ರಾನ್ಸ್‌ನ ಗಾಯೆಲ್‌ ಮೊಂಫಿಲ್ಸ್‌ ಎದುರು ಆಡಬೇಕಿತ್ತು. ಗಾಯದ ಕಾರಣ ಮೊಂಫಿಲ್ಸ್‌ ಪಂದ್ಯದಿಂದ ಹಿಂದೆ ಸರಿದರು. ಹೀಗಾಗಿ ‘ರಫಾ’ಗೆ ವಾಕ್‌ ಓವರ್ ಲಭಿಸಿತು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ನಡಾಲ್‌, ಹೋದ ವರ್ಷ ಪ್ರಶಸ್ತಿ ಜಯಿಸಿದ್ದರು.

ನಾಲ್ಕರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಎಂಟನೇ ಶ್ರೇಯಾಂಕದ ಆಟಗಾರ ಡೇನಿಲ್‌ 6–1, 7–6 ನೇರ ಸೆಟ್‌ಗಳಿಂದ ಆರನೇ ಶ್ರೇಯಾಂಕದ ಆಟಗಾರ ಕರೆನ್‌ ಕಚನೊವ್‌ಗೆ ಆಘಾತ ನೀಡಿದರು.

ಸೆಂಟರ್‌ ಕೋರ್ಟ್‌ನಲ್ಲಿ ಭಾನುವಾರ ನಡೆದ ಮಹಿಳಾ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್‌ 1–6, 6–3, 6–3ರಲ್ಲಿ ಮೇರಿ ಬೌಜಕೋವಾ ಎದುರು ಗೆದ್ದರು.

ಪ್ರಶಸ್ತಿ ಸುತ್ತಿನಲ್ಲಿ ಸೆರೆನಾಗೆ ಕೆನಡಾದ ಬಿಯಾಂಕ ಆ್ಯಂಡ್ರೀಸ್ಕು ಸವಾಲು ಎದುರಾಗಲಿದೆ.

ಇನ್ನೊಂದು ಪಂದ್ಯದಲ್ಲಿ ಬಿಯಾಂಕ 6–4, 7–6ರಲ್ಲಿ ಅಮೆರಿಕದ ಸೋಫಿಯಾ ಕೆನಿನ್‌ ಅವರನ್ನು ಸೋಲಿಸಿದ್ದರು.

ಬೋಪಣ್ಣ–ಡೆನಿಶ್‌ಗೆ ನಿರಾಸೆ: ಪುರುಷರ ಡಬಲ್ಸ್‌ ವಿಭಾಗದಲ್ಲಿ ಕಣದಲ್ಲಿದ್ದ ಭಾರತದ ರೋಹನ್‌ ಬೋಪಣ್ಣ ಮತ್ತು ಕೆನಡಾದ ಡೆನಿಶ್‌ ಶಪೊವಲೊವ್‌ ಸೆಮಿಫೈನಲ್‌ನಲ್ಲಿ ಎಡವಿದರು.

ನೆದರ್ಲೆಂಡ್ಸ್‌ನ ವೆಸ್ಲಿ ಕೋಲ್‌ಹಾಫ್‌ ಮತ್ತು ರಾಬಿನ್‌ ಹಾಸ್‌ 7–6, 7–6ರಲ್ಲಿ ಬೋಪಣ್ಣ ಮತ್ತು ಶಪೊವಲೊವ್‌ ಅವರನ್ನು ಮಣಿಸಿದರು.

Post Comments (+)