ಬುಧವಾರ, ಸೆಪ್ಟೆಂಬರ್ 18, 2019
28 °C
ಮುಖ್ಯ ಸುತ್ತಿನಲ್ಲಿ ಆಡಲು ಅರ್ಹತೆ

ಅಮೆರಿಕ ಓಪನ್‌ ಟೂರ್ನಿ: ನಗಾಲ್‌ಗೆ ಫೆಡರರ್‌ ಎದುರಾಳಿ

Published:
Updated:
Prajavani

ನ್ಯೂಯಾರ್ಕ್‌: ಭಾರತದ ಸುಮಿತ್‌ ನಗಾಲ್ ಮೊದಲ ಬಾರಿ ಗ್ರ್ಯಾನ್‌ಸ್ಲಾಮ್‌ ಟೂರ್ನಿಯ ಪ್ರಧಾನ ಸುತ್ತಿನಲ್ಲಿ ಆಡುವ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಅದೂ ಟೆನಿಸ್‌ ದಂತಕತೆ ರೋಜರ್‌ ಫೆಡರರ್‌ ವಿರುದ್ಧ. ಸೋಮವಾರ ಅಮೆರಿಕ ಓಪನ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ಸೋಮವಾರ ನಗಾಲ್‌, ಸಾರ್ವಕಾಲಿಕ ಶ್ರೇಷ್ಠ ಆಟಗಾರನ ಎದುರು ಹಣಾಹಣಿ ನಡೆಸಲಿರುವರು.

ಶುಕ್ರವಾರ ಅರ್ಹತಾ ಸುತ್ತಿನ ಕೊನೆಯ ಪಂದ್ಯದಲ್ಲಿ ಅವರು ಬ್ರೆಜಿಲ್‌ನ ಜೋವಾ ಮೆನೆಜೆಸ್‌ ವಿರುದ್ಧ ಗೆದ್ದರು. ಮೊದಲ ಸೆಟ್‌ ಸೋತರೂ ಎದೆಗುಂದದ ಅವರು, 5–7, 6–4, 6–3ರಿಂದ ಜಯದ ನಗೆ ಬೀರಿದರು. ಇದರೊಂದಿಗೆ ನಗಾಲ್‌ ಈ ದಶಕದಲ್ಲಿ ಗ್ರ್ಯಾನ್‌ಸ್ಲಾಮ್‌ ಟೂರ್ನಿಯೊಂದರ ಸಿಂಗಲ್ಸ್ ಮುಖ್ಯ ಸುತ್ತಿನಲ್ಲಿ ಆಡುವ ಅವಕಾಶ ಪಡೆದ ಭಾರತ ಐದನೇ ಆಟಗಾರ ಎನಿಸಿಕೊಂಡರು.

ಸೋಮದೇವ್‌ ದೇವವರ್ಮನ್‌, ಯೂಕಿ ಭಾಂಬ್ರಿ, ಸಾಕೇತ್‌ ಮೈನೇನಿ ಹಾಗೂ ಪ್ರಜ್ಞೇಶ್‌ ಗುಣೇಶ್ವರನ್‌ 2010ರಿಂದ ಇದುವರೆಗೆ ಪ್ರಮುಖ ಟೂರ್ನಿಗಳ ಸಿಂಗಲ್ಸ್ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು.

‘ಅರ್ಥರ್‌ ಆ್ಯಷ್‌ ಮೈದಾನಲ್ಲಿ ರೋಜರ್‌ ಫೆಡರರ್‌ ಅವರನ್ನು ಎದುರಿಸುವುದು ದೊಡ್ಡ ಅವಕಾಶ. ರೋಜರ್‌ ವಿರುದ್ಧ ಒಂದಲ್ಲ ಒಂದು ದಿನ ಆಡುತ್ತೇನೆಂಬ ವಿಶ್ವಾಸವಿತ್ತು. ಅವರು ಟೆನಿಸ್‌ನ ದೇವರು. ಪಂದ್ಯಕ್ಕಾಗಿ ಎದುರು ನೋಡುತ್ತಿದ್ದೇನೆ’ ಎಂದು ನಗಾಲ್‌ ಹೇಳಿದ್ದಾರೆ.

21 ವರ್ಷಗಳ ಬಳಿಕ ಗ್ರ್ಯಾನ್‌ಸ್ಲಾಮ್‌ ಟೂರ್ನಿಯೊಂದರ ಮುಖ್ಯ ಸುತ್ತಿನಲ್ಲಿ ಭಾರತದ ಇಬ್ಬರು ಆಟಗಾರರು(ಪ್ರಜ್ಞೇಶ್‌ ಗುಣೇಶ್ವರನ್‌ ಇನ್ನೊಬ್ಬ ಆಟಗಾರ) ಕಣಕ್ಕಿಳಿಯುತ್ತಿದ್ದಾರೆ. 1998ರಲ್ಲಿ ಲಿಯಾಂಡರ್‌ ಪೇಸ್‌ ಹಾಗೂ ಮಹೇಶ್‌ ಭೂಪತಿ ಅವರು ವಿಂಬಲ್ಡನ್‌ ಟೂರ್ನಿಯಲ್ಲಿ ಸ್ಪರ್ಧಿಸಿದ್ದರು. 

ಪ್ರಜ್ಞೇಶ್‌ ಅವರು ರಷ್ಯಾದ ಡೇನಿಯಲ್‌ ಮೆಡ್ವಡೆವ್‌ ವಿರುದ್ಧ ಮೊದಲ ಪಂದ್ಯ ಆಡುವರು.

Post Comments (+)