ಓಟಕ್ಕೆ ಸಹಕಾರಿ ಹನುಮಾನಾಸನ

ಶುಕ್ರವಾರ, ಏಪ್ರಿಲ್ 19, 2019
31 °C

ಓಟಕ್ಕೆ ಸಹಕಾರಿ ಹನುಮಾನಾಸನ

Published:
Updated:
Prajavani

ಹನುಮಂತ, ಆಂಜನೇಯನು ಅಂಗಸಾಧಕರು ಮತ್ತು ಗರಡಿಯಾಳುಗಳ ಭಕ್ತಿಯ ಆರಾಧಕ. ಶ್ರೀರಾಮನಿಗೆ ಸೀತಾದೇವಿಯನ್ನು ಹುಡುಕಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿ ಪರಾಕ್ರಮ ಮೆರೆದ ಹಾಗೂ ಮೂರ್ಛೆಗೊಳಗಾಗಿದ್ದ ಲಕ್ಷ್ಮಣನ ಪುನರುಜ್ಜೀವನಕ್ಕೆ 'ಸಂಜೀವಕರಣಿ' ಮೂಲಿಕೆಗಾಗಿ ಹಿಮಪರ್ವತದಲ್ಲಿದ್ದ ಸಂಜೀವನ ಪರ್ವತವನ್ನೇ ಹೊತ್ತು ತಂದ ಕೀರ್ತಿ ಹನುಮಂತನದು.

ಈ ಮೂಲಕ ರಾಮಾಯಣದಲ್ಲಿ ರಾಮನ ಪರಮ ಭಕ್ತನಾಗಿ, ಲಕ್ಷ್ಮಣನ ಜೀವರಕ್ಷಕನಾಗಿ ಮೆಚ್ಚುಗೆ ಪಡೆದ ವೀರ ಹನುಮಂತನು ಸಮುದ್ರವನ್ನು ಲಂಘಿಸುವಾಗ, ಸಂಜೀವನ ಪರ್ವತವನ್ನು ಹೊತ್ತು ತರುವಾಗ ಅನುಸರಿಸಿದ ಭಂಗಿಯನ್ನು ಈ ಆಸನ ಹೋಲುತ್ತದೆ. ಆದ್ದರಿಂದ, ಇದಕ್ಕೆ ಹನುಮಾಸನ/ಹನುಮಾನಾಸನ ಎಂದು ಹೆಸರಿಸಲಾಗಿದೆ.

ಅಭ್ಯಾಸಕ್ರಮ

ನೆಲದ ಮೇಲೆ ಮಂಡಿಯೂರಿ ಕುಳಿತುಕೊಳ್ಳಿ. ಅಂಗೈಗಳನ್ನು ಸೊಂಟದ ಪಕ್ಕ ಒಂದು ಅಡಿ ಅಂತರದಲ್ಲಿ ನೆಲಕ್ಕೂರಿಡಿ.
ಬಳಿಕ, ಮಂಡಿಗಳನ್ನು ಮೇಲಕ್ಕೆತ್ತಿ ಬಲಗಾಲನ್ನು ಮುಂದಕ್ಕೂ, ಎಡಗಾಲನ್ನು ಹಿಂದಕ್ಕೆ ನೀಳವಾಗಿ ಚಾಚಿಡಿ. ಕೈಗಳ ಮೇಲೆ ದೇಹದ ಭಾರವನ್ನು ಹಾಕಿ ನಿಧಾನವಾಗಿ ಕಾಲುಗಳನ್ನು ಸ್ವಲ್ಪ ಸ್ವಲ್ಪ ವಿಸ್ತರಿಸುತ್ತಾ ನೆಲಕ್ಕೆ ಕೂರಿಸಿ(ಮುಂದಿದ್ದ ಕಾಲಿನ ಕೆಳತೊಡೆ, ಮೀನಖಂಡ ನೆಲಕ್ಕೊರಗಿದ್ದು, ಅಂಗಾಲು ಕೆಳಮೊಗವಾಗಿಯೂ, ಹಿಂದಿರುವ ಕಾಲಿನ ಮೇಲ್ದೊಡೆ ಮತ್ತು ಮಂಡಿ ನೆಲಕ್ಕೊರಗಿದ್ದು, ಅಂಗಾಲು ಮೇಲ್ಮೊಗವಾಗಿಯೂ ಇರುತ್ತದೆ. ಬೆರಳುಗಳನ್ನು ಚೂಪಾಗಿರಿಸಬೇಕು).

ತೊಡೆ, ತೊಡೆಯ ಸಂದುಗಳಿಗೆ ಶ್ರಮ ಎನಿಸದೆ ದೇಹ ಅನಾಯಾಸವಾಗಿ ನೆಲಕ್ಕೊರಗಿದೆ ಎಂದು ಖಚಿತವಾದ ಬಳಿಕ ಬೆನ್ನನ್ನು ನೇರವಾಗಿಸಿ, ಕೈಗಳ ನೆರವನ್ನು ತೆಗೆದು ಎದೆಯ ಮುಂದೆ ನಮಸ್ಕಾರ ಸ್ಥಿತಿಯಲ್ಲಿರಿಸಿ. ಒಂದೆರೆಡು ಸರಳ ಉಸಿರಾಟ ನಡೆಸಿ. ಮುಂದುವರಿದು, ನಮಸ್ಕಾರ ಸ್ಥಿತಿಯಲ್ಲಿನ ಕೈಗಳನ್ನು ಹಾಗೆಯೇ ತಲೆಯ ಮೇಲ್ಭಾಗಕ್ಕೆ ನೀಳವಾಗಿ ಚಾಚಿ, ಎದೆಯನ್ನು ಹಿಗ್ಗಿಸಿಟ್ಟು, ಸರಳ ಉಸಿರಾಟ ನಡೆಸಿ.
ಅಂತಿಮ ಸ್ಥಿತಿಯಲ್ಲಿ ಸರಳ ಉಸಿರಾಟ ನಡೆಸುತ್ತಾ 10ರಿಂದ 15 ಸೆಕೆಂಡು ನೆಲೆಸಿ.

ಅವರೋಹಣ ಮಾಡುವಾಗ ಕೈಗಳ ಮೇಲೆ ಭಾರ ಹಾಕಿ ಕಾಲುಗಳನ್ನು ಮೇಲಕ್ಕೆತ್ತಿ ಮಡಿಚಿ ಮಂಡಿಯೂರಿ ಕುಳಿತು ವಿರಮಿಸಿ. ಬಳಿಕ, ವಿರುದ್ಧ ದಿಕ್ಕಿನಲ್ಲಿ ಅಭ್ಯಾಸ ನಡೆಸಿ.

ಸೂಚನೆ: ಹನುಮಾಸನ ನೋಡಲು ಸುಂದರವಾಗಿ ಕಂಡರೂ ಅಭ್ಯಾಸ ಕಷ್ಟಕರವಾದುದು. ಅತ್ಯಂತ ಜಾಗರೂಕತೆಯಿಂದ ಅಭ್ಯಾಸಿಸಿ. ದೇಹಕ್ಕೆ ಕಾಲುಗಳೇ ಆಧಾರ. ಆದ್ದರಿಂದ, ಹೆಚ್ಚು ಒತ್ತಡ ಹಾಕಿ ತೊಂದರೆ ತಂದುಕೊಳ್ಳಬೇಡಿ. ಅನಗತ್ಯ ಒತ್ತಡ ಹಾಕಿ ಅಭ್ಯಾಸಿಸಿದರೆ ತೊಡೆ, ತೊಡೆಯ ಹಿಂಬದಿಯ ಹಾಗೂ ಸಂದುಗಳ ನರಗಳು ತೊಡಕಿ, ತೊಂದರೆ ಎದುರಾಗುವ ಸಾಧ್ಯತೆ ಇದೆ. ನಿತ್ಯ ಎಷ್ಟು ಸಾಧ್ಯವೊ ಅಷ್ಟು ಮಾತ್ರ ಕಾಲುಗಳನ್ನು ವಿಸ್ತರಿಸಿ. ಶ್ರಮ ಎನಿಸಿದ ತಕ್ಷಣ ಕೈಗಳ ಮೇಲೆ ಭಾರ ಹಾಕಿ ಒಂದೆರೆಡು ಇಂಚಿನಷ್ಟು ಮೇಲೇಳಿ. ಅಲ್ಲಿ ಸಾಧ್ಯವಾದಷ್ಟು ಕಾಲ ನೆಲೆಸಿ ವಿರಮಿಸಿ. ನಿರಂತರ, ಪುನರಾವರ್ತನೆ ಅಭ್ಯಾಸ ನಡೆಸಿದರೆ ಸುಲಭವಾಗುತ್ತದೆ.

ಫಲಗಳು

* ಕಾಲುಗಳ ನ್ಯೂನತೆ ಸರಿಪಡಿಸುತ್ತದೆ.

* ಸೊಂಟ ನೋವು ನಿವಾರಿಸುತ್ತದೆ

* ಕಾಲುಗಳ ಸ್ನಾಯುಗಳು ಚೈತನ್ಯ ಪಡೆದು ಉತ್ತಮ ಸ್ಥಿತಿಯಲ್ಲಿ ನೆಲೆಗೊಳ್ಳುತ್ತವೆ.

* ಓಟ ಸ್ಪರ್ಧಾಳುಗಳಿಗೆ ವೇಗ ಹೆಚ್ಚಳಕ್ಕೆ ನೆರವಾಗುತ್ತದೆ.

* ತೊಡೆಗಳ ಸ್ನಾಯುಗಳು ಉತ್ತಮ ರೂಪ ಪಡೆದು ಹೆಚ್ಚು ವಿಶ್ರಾಂತಿಯನ್ನು ಹೊಂದಿ ಶಕ್ತಿಯುತವಾಗುತ್ತವೆ.

* ಮಾನಸಿಕವಾಗಿ ಸದೃಡಗೊಳಿಸುತ್ತದೆ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !