ದುಬೈ: ಮುಂದಿನ ತಿಂಗಳು ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಮತ್ತು ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಿ ಸಂದರ್ಭದಲ್ಲಿ ಅತ್ಯಂತ ಬಿಗಿ ಭದ್ರತೆಯ ವ್ಯವಸ್ಥೆ ಮಾಡಲಾಗುವುದು ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ತಿಳಿಸಿದೆ.
ಲಂಡನ್, ಬರ್ಮಿಂಗ್ಹ್ಯಾಮ್ ಮತ್ತು ಕಾರ್ಡಿಫ್ನಲ್ಲಿ ಈ ಟೂರ್ನಿಯ ಪಂದ್ಯಗಳು ನಡೆಯಲಿವೆ. ಮ್ಯಾಂಚೆಸ್ಟರ್ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯ ನಂತರ ಭದ್ರತೆಗೆ ಒತ್ತು ನೀಡಲು ಐಸಿಸಿ ಮುಂದಾಗಿದೆ.
‘ಟೂರ್ನಿಯ ಭದ್ರತಾ ನಿರ್ದೇಶಕರ ಸಲಹೆ ಪಡೆದುಕೊಳ್ಳಲಾಗಿದ್ದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಮತ್ತು ಸಂಬಂಧಪಟ್ಟ ಇತರ ಸಂಸ್ಥೆಗಳ ಜೊತೆ ನಿರಂತರ ಮಾತುಕತೆ ನಡೆಯುತ್ತಿದೆ’ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.