ಬೆಂಗಳೂರು: ಕರ್ನಾಟಕದ ಮಸ್ತಫಾ ರಾಜ ಹಾಗೂ ಜಾಸನ್ ಡೇವಿಡ್ ಇಲ್ಲಿ ನಡೆಯುತ್ತಿರುವ ಎಐಟಿಎ ವತಿಯ 12 ವರ್ಷದೊಳಗಿನವರ ಚಾಂಪಿಯನ್ಷಿಪ್ ಸೀರಿಸ್ ಟೆನಿಸ್ ಟೂರ್ನಿಯಲ್ಲಿ ಬುಧವಾರ ಸೆಮಿಫೈನಲ್ ತಲುಪಿದ್ದಾರೆ.
ಬಾಲಕರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ಫೈನಲ್ ಪೈಪೋಟಿಯಲ್ಲಿ ಮೂರನೇ ಶ್ರೇಯಾಂಕದ ಮುಸ್ತಫಾ 6–1, 6–2ರಲ್ಲಿ ರುವಿಕ್ ರಜನಿ ಅವರನ್ನು ಮಣಿಸಿದರು.
ಎರಡನೇ ಶ್ರೇಯಾಂಕದ ಜಾಸನ್ 6–3, 6–0ರಲ್ಲಿ ಅನುಷ್ ಆನಂದ್ ವಿರುದ್ಧ ಜಯಭೇರಿ ದಾಖಲಿಸಿದರು.
ಬಾಲಕರ ವಿಭಾಗದ ಇತರ ಪಂದ್ಯಗಳಲ್ಲಿ ಕೇಶವ್ ಗೋಯಲ್ 6–2, 2–6, 7–6ರಲ್ಲಿ ಎಂಟನೇ ಶ್ರೇಯಾಂಕದ ವಿ.ರಿಷಿ ವಿರುದ್ಧವೂ, ಭುವನ್ ಪ್ರಕಾಶ್ 6–1, 7–5ರಲ್ಲಿ ಅನೂಪ್ ಕೇಶವಮೂರ್ತಿ ಎದುರೂ ಗೆದ್ದರು.
ಡಬಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಕೇಶವ್ ಗೋಯಲ್ ಹಾಗೂ ಅರ್ಣವ್ ಜೋಡಿ 6–4, 6–2ರಲ್ಲಿ ರುವಿಕ್ ಹಾಗೂ ಚರಣ್ ಜೋಡಿಯನ್ನು ಮಣಿಸಿ ಫೈನಲ್ ತಲುಪಿದೆ. ಇನ್ನೊಂದು ಪಂದ್ಯದಲ್ಲಿ ಮುಸ್ತಫಾ ಹಾಗೂ ಜಾಸನ್ ಜೋಡಿ 6–1, 6–3ರಲ್ಲಿ ರಿಷಿ ಹಾಗೂ ಭುವನ್ ಮೇಲೆ ಜಯಗಳಿಸಿದೆ.
ಸೋಹಾಗೆ ಜಯ: ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲಿ ಅಗ್ರಗಣ್ಯ ಆಟಗಾರ್ತಿ ಸೋಹಾ ಸಿಂಗ್ 6–1, 6–2ರಲ್ಲಿ ಅದಿತಿ ಭಟ್ ಎದುರು ಜಯಗಳಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಇತರ ಪಂದ್ಯಗಳಲ್ಲಿ ಕೌಶಿಕಿ 6–4, 4–6, 6–1ರಲ್ಲಿ ವನ್ಯಾ ಶ್ರೀವಾಸ್ತವಾ ಮೇಲೂ, ಚಾರ್ಮಿ ಗೋಪಿನಾಥ್ 6–2, 6–0ರಲ್ಲಿ ಸಂಜನಿ ವಿರುದ್ಧವೂ, ಹರ್ಷಿಣಿ 6–1, 6–0ರಲ್ಲಿ ಸ್ಮೃತಿ ಎದುರೂ ಗೆದ್ದರು.