ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟಿಸಿ ಮೇಲೆ ದುಪ್ಪಟ್ಟು ತೆರಿಗೆ ಹೊರೆ: ಟೋಟಲೈಜೇಟರ್ ಹಿತಕ್ಕೆ ಭಾರಿ ಧಕ್ಕೆ.............

Last Updated 28 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೊಕ್ಕಸದ ಆದಾಯ ಹೆಚ್ಚಿಸುವ ಆತುರದಲ್ಲಿ ರಾಜ್ಯ ಸರ್ಕಾರವು ಬೆಂಗಳೂರು ಟರ್ಫ್ ಕ್ಲಬ್ (ಬಿಟಿಸಿ) ಮೇಲೆ ಹೆಚ್ಚಿಸಿರುವ ತೆರಿಗೆ ಹೊರೆಯಿಂದ ‘ಟೋಟಲೈಜೇಟರ್’ (‘ಟೋಟ್’; ಬಿಟಿಸಿ ನಡೆಸುವ ಬೆಟ್ಟಿಂಗ್) ಹಿತಕ್ಕೆ ಧಕ್ಕೆಯಾಗಿದ್ದು, ಇದರಿಂದ ಕುದುರೆ ರೇಸ್ ಮೇಲೆ ಹಣ ತೊಡಗಿಸುವ ಪಂಟರ್‌ಗಳು ತಮ್ಮ ಲಾಭಾಂಶಕ್ಕೂ ‘ಕೊಕ್ಕೆ ಬೀಳಲಿದೆ’ ಎಂದು ಆತಂಕಗೊಂಡಿದ್ದಾರೆ.
ಟೋಟಲೈಜೇಟರ್ ಹಿತ ಕಾಪಾಡುವ ಬದಲು, ಸರ್ಕಾರವು ತೆರಿಗೆ ವಂಚಿಸುವಂಥ ಕಾನೂನು ಬಾಹಿರ ಬೆಟ್ಟಿಂಗ್ ಕಡೆಗೆ ಪಂಟರ್‌ಗಳು ಮುಖಮಾಡುವುದಕ್ಕೆ ಅವಕಾಶ ನೀಡುವ ನಿರ್ಧಾರ ಕೈಗೊಂಡಿದ್ದು ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ.


ಗಣಕೀಕೃತಗೊಂಡಿರುವ ಬಿಟಿಸಿಯ ಟೋಟ್ ಮೇಲಿನ ತೆರಿಗೆಯನ್ನು ಶೇ.4ರಿಂದ ಶೇ.8ಕ್ಕೆ ಏರಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಜೆಟ್ ಮಂಡನೆಯು ತೆರಿಗೆ ವಂಚಿಸುವಂಥ ಬೆಟ್ಟಿಂಗ್ ಹೆಚ್ಚುವ ಸಾಧ್ಯತೆಯನ್ನು ಅಧಿಕಗೊಳಿಸಿದೆ.ಬಿಟಿಸಿ ಟೋಟಲೈಜೇಟರ್ ಮೇಲೆ ದುಪ್ಪಟ್ಟು ತೆರಿಗೆ ಪ್ರಹಾರ ಮಾಡಿದ್ದು ಸಹಜವಾಗಿಯೇ ಟೀಕೆಗೆ ಕಾರಣವಾಗಿದೆ. ಸಣ್ಣ ಪ್ರಮಾಣದಲ್ಲಿ ಬೆಟ್ಟಿಂಗ್ ಮಾಡುವವರಿಂದ ಹಿಡಿದು ಭಾರಿ ಮೊತ್ತದ ಬೆಟ್ ಕಟ್ಟುವ ಪಂಟರ್‌ಗಳೆಲ್ಲಾ ತಮಗೆ ‘ಟೋಟ್’ನಿಂದ ಬರುವ ಆದಾಯ ಕಡಿಮೆ ಆಗುತ್ತದೆಂದು ಮನಗಂಡಿದ್ದಾರೆ.


ಇದೇ ಭಯದಲ್ಲಿ ಹೆಚ್ಚು ಲಾಭದ ಆಮಿಷ ನೀಡುವ ಬೆಟ್ಟಿಂಗ್‌ನತ್ತ ನಡೆಯುವ ಅಪಾಯದ ಕತ್ತಿಯೂ ನೆತ್ತಿಯ ಮೇಲೆ ತೂಗುತ್ತಿದೆ. ಇದರಿಂದ ಬಿಟಿಸಿಗೆ ಮಾತ್ರವಲ್ಲ; ಸರ್ಕಾರದ ತೆರಿಗೆ ಆದಾಯಕ್ಕೂ ಪೆಟ್ಟು ಬೀಳುವ ಸಂಭವವಿದೆ. ಆದ್ದರಿಂದ ಫೆಬ್ರುವರಿ 24ರಂದು ಮುಖ್ಯಮಂತ್ರಿಗಳು ಮಂಡಿಸಿದ ಬಜೆಟ್‌ನಲ್ಲಿ ಬಿಟಿಸಿ ಕಡೆಗೆ ಬೀಸಿರುವ ಕತ್ತಿಯು ಸರ್ಕಾರದ ತೆರಿಗೆ ಆದಾಯಕ್ಕೇ ತಿರುಗೇಟು ಆದರೂ ಅಚ್ಚರಿಯಿಲ್ಲ.


ಟೋಟಲೈಜೇಟರ್ ಎನ್ನುವುದು ‘ಚಿನ್ನದ ಮೊಟ್ಟೆ ನೀಡುವ ಕೋಳಿ’ ಇದ್ದಂತೆ. ಆದರೆ ಅದರಿಂದ ಎಲ್ಲ ಮೊಟ್ಟೆಯನ್ನು ಒಮ್ಮೆಲೇ ಪಡೆಯಲು ಯತ್ನಿಸುವಂಥ ವ್ಯಕ್ತಿಯ ಕಥೆಯ ವ್ಯಥೆಯಂತೆ ಸರ್ಕಾರದ ಸ್ಥಿತಿ ಆಗುವ ಸಾಧ್ಯತೆಯೇ ಹೆಚ್ಚು. ‘ಟೋಟ್’ ಇದು ಪಂಟರ್‌ಗಳ ಹಿತವನ್ನು ಕಾಪಾಡುವಂಥ ಬೆಟ್ಟಿಂಗ್ ವ್ಯವಸ್ಥೆ. ಇದರಿಂದ ಸರ್ಕಾರಕ್ಕೆ ಸರಿಯಾದ ತೆರಿಗೆ ಸಂದಾಯವಾಗುತ್ತದೆ. ಇಲ್ಲಿ ತೆರಿಗೆ ವಂಚನೆಗೆ ಅವಕಾಶವೂ ಇಲ್ಲ. ಆದರೆ ಇದೇ ವ್ಯವಸ್ಥೆಯ ಮೇಲೆ ತೆರಿಗೆ ಹೆಚ್ಚಿಸಿದರೆ, ಪಂಟರ್‌ಗಳಿಗೆ ಬಿಟಿಸಿ ಕೂಡ ಲಾಭಾಂಶವನ್ನು ಅನಿವಾರ್ಯವಾಗಿ ಕಡಿಮೆ ಮಾಡಬೇಕಾಗುತ್ತದೆ.
 

ಅಂಥ ಪರಿಸ್ಥಿತಿಯನ್ನು ತಪ್ಪಿಸಲು ಮುಖ್ಯಮಂತ್ರಿಗಳು ತೆರಿಗೆ ಹೆಚ್ಚಳದ ಕುರಿತು ಬಜೆಟ್‌ನಲ್ಲಿ ಮಂಡಿಸಿರುವ ಅಂಶವನ್ನು ಮರುಪರಿಶೀಲನೆ ಮಾಡುವುದು ಅಗತ್ಯವಾಗಿದೆ. ಟೋಟ್ ಮೇಲೆ ವಿಶ್ವಾಸವಿಟ್ಟು ಅಲ್ಲಿಯೇ ಬೆಟ್ ಕಟ್ಟುವ ಪಂಟರ್‌ಗಳು ತೆರಿಗೆ ಹೊರೆ ಇಳಿಸುವಂತೆ ರಾಜ್ಯ ಸರ್ಕಾರಕ್ಕೆ ಮೊರೆ ಇಟ್ಟಿದ್ದಾರೆ. ತೆರಿಗೆ ಹೊರೆ ಕಡಿಮೆಯಾದರೆ ಬಿಟಿಸಿ ಕೂಡ ಸೌಲಭ್ಯಗಳ ಅಭಿವೃದ್ಧಿ ಹಾಗೂ ಟರ್ಫ್ ಕ್ಲಬ್ ನಿರ್ವಣೆಯ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸಲು ಕೂಡ ಅನುಕೂಲ ಆಗುತ್ತದೆ. ತೆರಿಗೆ ಹೆಚ್ಚಿದಂತೆ ಅದರ ಪರಿಣಾಮವು ಪಂಟರ್‌ಗಳಿಂದ ಹಿಡಿದು ಬಿಟಿಸಿ ಸಿಬ್ಬಂದಿವರೆಗೆ ಎಲ್ಲರ ಮೇಲೂ ಆಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ತೆರಿಗೆ ವಂಚಿಸುವಂಥ ಬೆಟ್ಟಿಂಗ್ ದಂಧೆ ಇನ್ನಷ್ಟು ಚುರುಕಾಗುವಂತೆ ಮಾಡುತ್ತದೆ.


ಇಲ್ಲಿಯವರೆಗೆ ಬಿಟಿಸಿ ಮೂಲಕ ವಾರ್ಷಿಕವಾಗಿ ಸುಮಾರು ರೂ. 52 ಕೋಟಿ ತೆರಿಗೆ ಸಂದಾಯವಾಗುತ್ತಾ ಬಂದಿದೆ. ಇದನ್ನು ರೂ. 104 ಕೋಟಿಗೆ ಹೆಚ್ಚಿಸುವ ಆತುರದಲ್ಲಿ ತೆರಿಗೆಯನ್ನು ಶೇ.4ರಿಂದ ಎರಡು ಪಟ್ಟು ಮಾಡಲಾಗಿದೆ. ಆದರೆ ಮೈಸೂರು ರೇಸ್ ಕ್ಲಬ್‌ನಲ್ಲಿ ಹಿಂದಿನ ಶೇ.4ರ ತೆರಿಗೆಯನ್ನು ಮುಂದುವರಿಸಲಾಗಿದೆ. ಆದರೆ ಮೈಸೂರು ಸೇರಿದಂತೆ ಬೇರೆ ನಗರಗಳಲ್ಲಿ ನಡೆಯುವ ರೇಸ್‌ಗಳ ಮೇಲೆ ಬಿಟಿಸಿಯ ‘ಟೋಟ್’ನಲ್ಲಿ ನಡೆಯುವ ಬೆಟ್ಟಿಂಗ್ ಮೇಲಿನ ತೆರಿಗೆ ಶೇ. 8 ಆಗಿರುತ್ತದೆ.

ಈ ಹೊರೆಯನ್ನು ನಿಭಾಯಿಸಲು ಬಿಟಿಸಿ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ಟೋಟಲೈಜೇಟರ್ ಕಮೀಷನ್ ಅನ್ನು ಶೇ.10ರಿಂದ 12ಕ್ಕೆ ಏರಿಸುವ ಚಿಂತನೆ ಮಾಡುತ್ತಿದೆ. ಇದರಿಂದ ಸಹಜವಾಗಿಯೇ ‘ಟೋಟ್’ನಲ್ಲಿ ಬೆಟ್ ಮಾಡುವ ಪಂಟರ್‌ಗಳಿಗೆ ಲಾಭ ಕಡಿಮೆ ಆಗುತ್ತದೆ.ಕಳೆದ ವರ್ಷ ಬಿಟಿಸಿ 1300 ಕೋಟಿ ರೂ ವಹಿವಾಟು ನಡೆಸಿದೆ.

 ಪಂಟರ್ ಯಾರು?: ಬೆಟ್ಟಿಂಗ್ ಮಾಡುವ ಎಲ್ಲರನ್ನೂ ಪಂಟರ್ ಎಂದು ಕರೆಯಲಾಗುತ್ತದೆ. ಕುದುರೆ ರೇಸ್ ಮೇಲೆ ಮಾತ್ರವಲ್ಲ ಯಾವುದೇ ಕ್ರೀಡೆಯ ಮೇಲೆ ಹಣವನ್ನು ಪಣಕ್ಕೆ ಇಡುವವರು ಪಂಟರ್. ಟೋಟ್ ಕಮೀಷನ್ ಹೆಚ್ಚಾದಲ್ಲಿ ಅದರ ಪರಿಣಾಮ ಆದಾಯದ ಮೇಲೆಯೂ ಆಗಲಿದೆ. ಆಗ ಸಹಜವಾಗಿಯೇ ಸರ್ಕಾರಕ್ಕೆ ತೆರಿಗೆಯೂ ಕಡಿಮೆ ಆಗಬಹುದು. ಆದ್ದರಿಂದ ಬಜೆಟ್‌ನಲ್ಲಿ ಮಂಡಿಸಿರುವ ತೆರಿಗೆ ಹೆಚ್ಚಳಕ್ಕೆ ಅನುಮೋದನೆ ನೀಡುವ ಮುನ್ನ ಇದರಿಂದಾಗುವ ವ್ಯತಿರಿಕ್ತ ಪರಿಣಾಮಗಳ ಕುರಿತು ಸರ್ಕಾರ ಯೋಚನೆ ಮಾಡಲೇಬೇಕು.

* ರೇಸಿಂಗ್‌ನಲ್ಲಿ ಹಣ ತೊಡಗಿಸುವವರನ್ನು ಎರಡು ಗುಂಪುಗಳಾಗಿ ಗುರುತಿಸಬಹುದು. ಕುದುರೆ ಮಾಲೀಕರು ಹಾಗೂ ಪಂಟರ್‌ಗಳು. ಆದರೆ ಆದಾಯದಲ್ಲಿ ಪಾಲುಗಾರರಾಗುವುದು ನಾಲ್ವರು. ಕುದುರೆ ಮಾಲೀಕರು, ಪಂಟರ್‌ಗಳು, ಸರ್ಕಾರ ಹಾಗೂ ರೇಸಿಂಗ್ ನಡೆಸುವ ಕ್ಲಬ್.

* ಸರ್ಕಾರವು ಎರಡು ಕಡೆಯಿಂದ ತೆರಿಗೆ ಪಡೆಯುತ್ತದೆ. ಟೋಟಲೈಜೇಟರ್ ತೆರಿಗೆ ಹಾಗೂ ಬುಕ್ಕಿಗಳಿಂದ ಬೆಟ್ಟಿಂಗ್ ತೆರಿಗೆ. ಆದರೆ ಸರ್ಕಾರಕ್ಕೆ ಹೆಚ್ಚಿನ ಆದಾಯ ಇರುವುದು ಟೋಟಲೈಜೇಟರ್ ತೆರಿಗೆ ಮೂಲಕ.

* ಶೇ.4ರ ‘ಟೋಟ್’ ತೆರಿಗೆ ಇಲ್ಲಿಯವರೆಗೆ ಜಾರಿಯಲ್ಲಿತ್ತು. ಕಳೆದ ವರ್ಷ ಬಿಟಿಸಿ ರೂ. 1300 ಕೋಟಿ ವ್ಯವಹಾರ ನಡೆಸಿದೆ (ಬೇರೆ ನಗರಗಳಲ್ಲಿನ ಕ್ಲಬ್‌ಗಳ ವ್ಯವಹಾರಕ್ಕೆ ಹೋಲಿಸಿದಲ್ಲಿ ಭಾರಿ ಹೆಚ್ಚು). ಅದರಲ್ಲಿ ಕಮೀಷನ್ ರೂಪದಲ್ಲಿ 130 ಕೋಟಿ ಬಿಟಿಸಿ ಪಡೆದುಕೊಂಡಿದೆ.

* 130 ಕೋಟಿ ಕಮೀಷನ್‌ನಲ್ಲಿ ಸರ್ಕಾರಕ್ಕೆ ಶೇ.4ರ ಟೋಟ್ ತೆರಿಗೆಯಾಗಿ ರೂ. 52 ಕೋಟಿ ಸಂದಾಯ ಮಾಡಿದೆ. ತೆರಿಗೆ ಕಳೆದು ಬಾಕಿ ಉಳಿದಿದ್ದು ರೂ. 78 ಕೋಟಿ.

* ಉಳಿದ ಈ ಮೊತ್ತದಲ್ಲಿ ರೂ. 25 ಕೋಟಿ ಸ್ಟೇಕ್ ಮೊತ್ತ. ಬಾಕಿ ರೂ. 53 ಕೋಟಿಯಲ್ಲಿ ಸ್ಟೇಬಲ್ಸ್ ಹಾಗೂ ಟ್ರ್ಯಾಕ್ ನಿರ್ವಹಣೆ. ನಿರ್ಮಾಣ, ನವೀಕರಣ, ನಿತ್ಯ ನಿರ್ವಹಣೆ ಹಾಗೂ ಸಿಬ್ಬಂದಿ ಸಂಬಳ ವೆಚ್ಚವನ್ನು ಭರಿಸಬೇಕು. ಜೊತೆಗೆ ಇದೇ ಮೊತ್ತದಲ್ಲಿ ವಿವಿಧ ನಗರಗಳ ರೇಸ್ ಕ್ಲಬ್‌ಗಳಿಗೆ ಗೌರವ ಧನವನ್ನು ಕೂಡ ಸಂದಾಯ ಮಾಡಬೇಕು.

* ಇಷ್ಟೆಲ್ಲಾ ವೆಚ್ಚವನ್ನು ನಿಭಾಯಿಸುವುದೇ ಈಗ ಕಷ್ಟವಾಗಿದೆ. ತೆರಿಗೆ ಹೆಚ್ಚಳದಿಂದ ಬಿಟಿಸಿ ಆರ್ಥಿಕ ಸಮಸ್ಯೆ ಇನ್ನಷ್ಟು ಅಧಿಕವಾಗುವ ಅಪಾಯವಿದೆ. ರೂ. 104 ಕೋಟಿ ತೆರಿಗೆ ನೀಡಲು ಅನಿವಾರ್ಯವಾಗಿ ಟೋಟ್ ಕಮೀಷನ್ ಮೊತ್ತವನ್ನು ಬಿಟಿಸಿ ಹೆಚ್ಚಿಸಲೇಬೇಕು. ಆಗ ಪಂಟರ್‌ಗಳ ಲಾಭಾಂಶವು ಕಡಿಮೆ ಆಗುತ್ತದೆ.

* ತೆರಿಗೆ ಹೆಚ್ಚುವುದರಿಂದ ಹೊರ ರಾಜ್ಯಗಳ ಬುಕ್ಕಿಗಳು ಬಿಟಿಸಿ ಟೋಟ್ ಮೂಲಕ ಬೆಟ್ ಮಾಡಲು ಆಸಕ್ತಿ ತೋರದಿರಬಹುದು. ಅಷ್ಟೇ ಅಲ್ಲ ಸ್ಥಳೀಯ ಪಂಟರ್‌ಗಳು ಹೆಚ್ಚಿನ ಲಾಭದಆಮಿಷವೊಡ್ಡುವ ಕಾನೂನು ಬಾಹಿರವಾದ ಹಾಗೂ ತೆರಿಗೆ ವಂಚಿಸುವಂಥ ಬೆಟ್ಟಿಂಗ್ ಕಡೆಗೆ ಗಮನ ಹರಿಸಬಹುದು. ಇದರಿಂದ ಸಹಜವಾಗಿ ಸರ್ಕಾರಕ್ಕೆ ತೆರಿಗೆ ವಂಚನೆ ಆಗುವ ಅಪಾಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT