ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರತ್ ಭಾರತ ತಂಡದ ಬೌಲಿಂಗ್ ಕೋಚ್‌

ರಾಯಲ್‌ ಚಾಲೆಂಜರ್ಸ್ ಹುದ್ದೆಗೆ ರಾಜೀನಾಮೆ ನೀಡಲಿರುವ ಅರುಣ್‌
Last Updated 18 ಜುಲೈ 2017, 19:30 IST
ಅಕ್ಷರ ಗಾತ್ರ

ಮುಂಬೈ: ಭಾರತ ಕ್ರಿಕೆಟ್‌ ತಂಡದ ಬೌಲಿಂಗ್ ಕೋಚ್ ಹುದ್ದೆಗೆ ಸಂಬಂಧಿಸಿದ ಗೊಂದಲಕ್ಕೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೆರೆ ಎಳೆದಿದೆ.

ಮುಖ್ಯ ಕೋಚ್‌ ರವಿಶಾಸ್ತ್ರಿ ಅವರ ಒತ್ತಾಯಕ್ಕೆ ಮಣಿದ ಮಂಡಳಿ ಭರತ್‌ ಅರುಣ್ ಅವರನ್ನು ಬೌಲಿಂಗ್ ಕೋಚ್ ಸ್ಥಾನಕ್ಕೆ ನೇಮಕ ಮಾಡಿದೆ.

ಭರತ್‌ ಅವರು ರವಿಶಾಸ್ತ್ರಿ ಅವರೊಂದಿಗೆ 19 ವರ್ಷದೊಳಗಿನವರ ಕ್ರಿಕೆಟ್ ಆಡಿದ್ದು ಈಗಲೂ ಅವರ ಉತ್ತಮ ಒಡನಾಡಿಯಾಗಿದ್ದಾರೆ.

ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ, ಕಾರ್ಯದರ್ಶಿ ಅಮಿತಾಭ್‌ ಚೌಧರಿ ಹಾಗೂ ಆಡಳಿತಾಧಿಕಾರಿಗಳ ಸಮಿತಿಯವರನ್ನು ರವಿಶಾಸ್ತ್ರಿ ಮಂಗಳವಾರ ಭೇಟಿ ಮಾಡಿದರು.

ಇದಾಗಿ ಸ್ವಲ್ಪ ಸಮಯದಲ್ಲೇ ನೇಮಕದ ವಿಷಯವನ್ನು ಚೌಧರಿ ಬಹಿರಂಗಗೊಳಿಸಿದರು. ಸಂಜಯ್‌ ಬಂಗಾರ್ ಅವರನ್ನು ಸಹಾಯಕ ಕೋಚ್‌ ಆಗಿ ಮತ್ತು ಆರ್‌.ಶ್ರೀಧರ್‌ ಅವರನ್ನು ಫೀಲ್ಡಿಂಗ್‌ ಕೋಚ್‌ಗಳಾಗಿ ಮುಂದುವರಿಸುವುದಕ್ಕೂ ಬಿಸಿಸಿಐ ನಿರ್ಧರಿಸಿದೆ. ಪ್ಯಾಟ್ರಿಕ್ ಫರ್ಹಾಟ್  ಅವರು ಫಿಜಿಯೊ ಆಗಿ ಮುಂದುವರಿಯುವರು ಎಂದು ಅವರು ತಿಳಿಸಿದರು. ಇವರೆಲ್ಲರ ಜೊತೆಗೆ ಎರಡು ವರ್ಷಗಳ ಒಪ್ಪಂದ ಮಾಡಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ರವಿಶಾಸ್ತ್ರಿ ‘ಇಷ್ಟು ದಿನ ನಾನು ಇಂಗ್ಲೆಂಡ್‌ನಲ್ಲಿ ವಿಂಬಲ್ಡನ್ ಟೆನಿಸ್ ವೀಕ್ಷಿಸುತ್ತಿದ್ದೆ. ಅಲ್ಲಿದ್ದಾಗಲೇ ಭಾರತ ಕ್ರಿಕೆಟ್ ತಂಡಕ್ಕೆ ತರಬೇತಿ ನೀಡುವ ನನ್ನ ಬಳಗ ಹೇಗಿರಬೇಕು ಎಂಬುದರ ಬಗ್ಗೆ ಲೆಕ್ಕಹಾಕುತ್ತಿದ್ದೆ. ಇಂಥ ಲೆಕ್ಕಾಚಾರದ ಫಲವೇ ಈ ನೇಮಕಾತಿ’ ಎಂದು ಹೇಳಿದರು.

ರವಿಶಾಸ್ತ್ರಿ ಭಾರತ ತಂಡದ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ಭರತ್ ಅರುಣ್‌ ತಂಡದ ಬೌಲಿಂಗ್ ಕೋಚ್ ಆಗಿದ್ದರು. ಶಾಸ್ತ್ರಿ ಆಸ್ಥಾನದಿಂದ ಕೆಳಗಿಳಿದಾಗ ಭರತ್‌ ಕೂಡ ಹುದ್ದೆ ತೊರೆದಿದ್ದರು.

ಕಳೆದ ವಾರ ಕೋಚ್‌ಗಳ ನೇಮಕ ಮಾಡಿದ ಸಂದರ್ಭದಲ್ಲಿ ಜಹೀರ್ ಖಾನ್ ಅವರನ್ನು ಬೌಲಿಂಗ್ ಕೋಚ್‌ ಎಂದು ಬಿಸಿಸಿಐ ಘೋಷಿಸಿತ್ತು. ಆದರೆ ನಂತರ ಸ್ಪಷ್ಟನೆ ನೀಡಿ ಜಹೀರ್ ಖಾನ್ ಕೇವಲ ವಿದೇಶದಲ್ಲಿ ನಡೆಯುವ ಪಂದ್ಯಗಳಿಗೆ ಬೌಲಿಂಗ್ ಸಲಹೆಗಾರರಾಗಿರುವರು ಎಂದು ಹೇಳಿತ್ತು. ರಾಹುಲ್ ದ್ರಾವಿಡ್ ಅವರನ್ನು ವಿದೇಶದಲ್ಲಿ ನಡೆಯುವ ಪಂದ್ಯಗಳಿಗೆ ಬ್ಯಾಟಿಂಗ್ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಇನ್ನೂ ಕೂಡ ಅವರು ಕಾರ್ಯನಿರ್ವಹಿಸಬೇಕಾದ ವಿಧಾನದ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಿಲ್ಲ.

ಈ ಕುರಿತು ಪ್ರತಿಕ್ರಿಯಿಸಿದ ರವಿಶಾಸ್ತ್ರಿ ‘ನಾನು ಅವರಿಬ್ಬರ ಜೊತೆ ಮಾತನಾಡಿದ್ದೇನೆ. ಅವರಿಂದ ತಂಡಕ್ಕೆ ಉತ್ತಮ ಸಲಹೆಗಳು ಸಿಗುವ ಭರವಸೆ
ಇದೆ’ ಎಂದರು.

‘ದ್ರಾವಿಡ್ ಮತ್ತು ಜಹೀರ್‌ ಅವರ ನೇಮಕ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ. ಮುಖ್ಯ ಕೋಚ್‌ ನೇಮಕಗೊಂಡ ನಂತರ ತಮ್ಮ ಜೊತೆಗೆ ಯಾರು ಇರಬೇಕು ಎಂಬುದನ್ನು ಅವರೇ ನಿರ್ಣಯಿಸುತ್ತಾರೆ. ಹೀಗಾಗಿ ಈಗ ಬೌಲಿಂಗ್‌ ಕೋಚ್, ಸಹಾಯಕ ಕೋಚ್‌ ಮತ್ತಿತರರನ್ನು ನೇಮಕ ಮಾಡಲಾಗಿದೆ. ದ್ರಾವಿಡ್‌ ಮತ್ತು ಜಹೀರ್ ಸಲಹೆಗಾರರಾಗಿರುತ್ತಾರೆ’ ಎಂದು ಚೌಧರಿ ಪುನರುಚ್ಚರಿಸಿದರು.

ಭರತ್ ಅರುಣ್‌ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್‌ನ ಸಹಾಯಕ ಕೋಚ್ ಆಗಿದ್ದಾರೆ. ಭಾರತ ತಂಡದ ಬೌಲಿಂಗ್ ಕೋಚ್‌ ಆಗಿ ನೇಮಕಗೊಂಡ ಕಾರಣ ಈ ಹುದ್ದೆಗೆ ಅವರು ರಾಜಿನಾಮೆ ನೀಡುವ ಸಾಧ್ಯತೆ ಇದೆ.

ಸಂಜಯ್ ಬಂಗಾರ್‌

ಭರತ್‌ಗೆ ಗೌರವ ಸಲ್ಲಿಸಿದ ಉಮೇಶ್‌ ಯಾದವ್‌

‘ಭರತ್ ಅರುಣ್‌ ಅವರ ತರಬೇತಿಯಿಂದಾಗಿ ಕಳೆದ ಸಾಲಿನಲ್ಲಿ ನನ್ನ ಬೌಲಿಂಗ್‌ ಸಾಕಷ್ಟು ಪ್ರಗತಿ ಕಂಡಿತ್ತು’ ಎಂದು ವೇಗಿ ಉಮೇಶ್‌ ಯಾದವ್
ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿಸಂಸ್ಥೆಯ ಜೊತೆ ಮಾತನಾಡಿದ ಅವರು ‘ಕಳೆದ ಬಾರಿ ನನ್ನ ಬೌಲಿಂಗ್‌ನಲ್ಲಿ ಪೂರಕ ಬದಲಾವಣೆಗಳು ಆಗಿದ್ದವು. ಇದಕ್ಕೆ ಭರತ್ ಅವರು ನೀಡಿದ ಸಲಹೆಗಳೇ ಕಾರಣ’ ಎಂದರು.

‘ತಂಡದಲ್ಲಿದ್ದು ಆಡಲು ಅವಕಾಶ ಸಿಗದೇ ಇದ್ದಾಗಲೆಲ್ಲ ಭರತ್‌ ನನಗೆ ಬೌಲಿಂಗ್‌ ತಂತ್ರಗಳನ್ನು ಹೇಳಿಕೊಟ್ಟಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ಮೌನಕ್ಕೆ ಜಾರಿದ ಸೆಹ್ವಾಗ್‌
ಭಾರತ ತಂಡದ ಕೋಚ್‌ ಹುದ್ದೆಯ ಆಕಾಂಕ್ಷಿಯಾಗಿದ್ದ ಸ್ಫೋಟಕ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹ್ವಾಗ್‌ ಈಗ ಮೌನಕ್ಕೆ ಜಾರಿದ್ದಾರೆ. ಭಾರತ ತಂಡಕ್ಕೆ ಪ್ರತ್ಯೇಕ ಬ್ಯಾಟಿಂಗ್ ಮತ್ತು ಬೌಲಿಂಗ್ ಕೋಚ್ ಬೇಕು ಎಂಬುದರ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ಪತ್ರಕರ್ತರು ಕೇಳಿದಾಗ ‘ನಾನು ಪೋಷಕನಾಗಿರುವ ‘ಉಮ್ಮೀದ್‌ ಇಂಡಿಯಾ’ ಎಂಬ ಕಾರ್ಯಕ್ರಮದ ಬಗ್ಗೆ ಬೇಕಿದ್ದರೆ ಕೇಳಿ, ಉತ್ತರಿಸುತ್ತೇನೆ’ ಎಂದಷ್ಟೇ ಹೇಳಿ ಜಾರಿಕೊಂಡರು.

ಅಥ್ಲೀಟ್‌ಗಳು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಮಾತನಾಡಿದ ಸೆಹ್ವಾಗ್‌,  ‘ದೇಶದಲ್ಲಿ ಕ್ರಿಕೆಟ್ ಆಟಗಾರರಿಗೆ ಎಲ್ಲ ಸೌಲಭ್ಯಗಳೂ ಸಿಗುತ್ತವೆ, ದೆಹಲಿಯಲ್ಲೇ ಸಾವಿರಕ್ಕೂ ಹೆಚ್ಚು ಅಕಾಡೆಮಿಗಳಿವೆ. ಅಥ್ಲೀಟ್‌ಗಳಿಗೆ ಹೋಲಿಸಿದರೆ ನಾವು ಅನುಭವಿಸುವ ಕಷ್ಟ ಏನೇನೂ ಅಲ್ಲ’ ಎಂದರು.

ಭರತ್ ಅರುಣ್ ಸಾಧನೆ
ಹೆಸರು : ಭರತ್ ಅರುಣ್
ವಯಸ್ಸು : 54
ಆಡಿದ ತಂಡಗಳು : ಭಾರತ, ತಮಿಳುನಾಡು
ಶೈಲಿ : ಬಲಗೈ ಬ್ಯಾಟಿಂಗ್ ಮತ್ತು ಮಧ್ಯಮವೇಗಿ
ಅವಧಿ : 1982 ರಿಂದ 1990

* ಆಡಳಿತಾಧಿಕಾರಿಗಳ ಸಮಿತಿಯವರನ್ನು ಭೇಟಿ ಮಾಡಿದ ರವಿಶಾಸ್ತ್ರಿ

* ಸಹಾಯಕ ಕೋಚ್ ಆಗಿ ಸಂಜಯ್‌ ಬಂಗಾರ್ ಮರುನೇಮಕ

* ಆರ್‌.ಶ್ರೀಧರ್‌ ಫೀಲ್ಡಿಂಗ್‌ ಕೋಚ್‌ ನೇಮಕ: ಚೌಧರಿ ವಿವರಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT