ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣಿ ರಾಂಪಾಲ್‌ ಆಟದಲ್ಲಿ ಅರಳಿದ ಜಯ

ಹಾಕಿ: ದಕ್ಷಿಣ ಆಫ್ರಿಕಾವನ್ನು ಸೋಲಿಸಿದ ವನಿತೆಯರು
Last Updated 10 ಏಪ್ರಿಲ್ 2018, 19:43 IST
ಅಕ್ಷರ ಗಾತ್ರ

ಗೋಲ್ಡ್‌ ಕೋಸ್ಟ್‌: ನಾಯಕಿ ರಾಣಿ ರಾಂಪಾಲ್‌ ಕೈಚಳಕದಲ್ಲಿ ಅರಳಿದ ಏಕೈಕ ಗೋಲಿನ ಬಲದಿಂದ ಭಾರತದ ಮಹಿಳೆಯರ ಹಾಕಿ ತಂಡ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಸೆಮಿಫೈನಲ್‌ ಪ್ರವೇಶಿಸಿದೆ.

ಗೋಲ್ಡ್‌ ಕೋಸ್ಟ್‌ ಹಾಕಿ ಕೇಂದ್ರದಲ್ಲಿ ಮಂಗಳವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ರಾಣಿ ಬಳಗ 1–0 ಗೋಲಿನಿಂದ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿತು.

ಮೂರು ಪಂದ್ಯಗಳಿಂದ ಆರು ಪಾಯಿಂಟ್ಸ್‌ ಸಂಗ್ರಹಿಸಿದ್ದ ಭಾರತದ ವನಿತೆಯರು ದಕ್ಷಿಣ ಆಫ್ರಿಕಾ ಎದುರು ಡ್ರಾ ಸಾಧಿಸಿದರೂ ನಾಲ್ಕರ ಘಟ್ಟ ಪ್ರವೇಶಿಸುತ್ತಿದ್ದರು.

ಮೊದಲ ಕ್ವಾರ್ಟರ್‌ನ ಶುರುವಿನಿಂದಲೇ ಉಭಯ ತಂಡಗಳ ಆಟಗಾರ್ತಿಯರು ಜಿದ್ದಾಜಿದ್ದಿನ ಪೈಪೋಟಿ ನಡೆಸಿ ಗೋಲು ಗಳಿಸುವ ಅವಕಾಶಗಳನ್ನು ಸೃಷ್ಟಿಸಿಕೊಂಡಿದ್ದರು. 10ನೇ ನಿಮಿಷದಲ್ಲಿ ದಕ್ಷಿಣ ಆಫ್ರಿಕಾ ಪೆನಾಲ್ಟಿ ಕಾರ್ನರ್‌ ಪಡೆಯಿತು. ಈ ಅವಕಾಶದಲ್ಲಿ ಚೆಂಡನ್ನು ಗುರಿ ಮುಟ್ಟಿಸಲು ಜೇಡ್‌ ಮೇಯ್ನ್‌ ಅವರಿಗೆ ಆಗಲಿಲ್ಲ.

12ನೇ ನಿಮಿಷದಲ್ಲಿ ಸಿಕ್ಕ ಅವಕಾಶವನ್ನು ಭಾರತದ ವಂದನಾ ಕಟಾರಿಯಾ ಕೈಚೆಲ್ಲಿದರು. ಇದರ ಬೆನ್ನಲ್ಲೆ ರಾಣಿ ರಾಂಪಾಲ್‌, ಗೋಲು ದಾಖಲಿಸುವ ಅವಕಾಶ ಪಡೆದಿದ್ದರು.ರಾಣಿ ಬಾರಿಸಿದ ಚೆಂಡನ್ನು ದಕ್ಷಿಣ ಆಫ್ರಿಕಾದ ಗೋಲ್‌ಕೀಪರ್‌ ಫುಮೆಲೆಲಾ ಮಬಾಂಡೆ ತಡೆದರು.

13ನೇ ನಿಮಿಷದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಮತ್ತೊಂದು ಪೆನಾಲ್ಟಿ ಕಾರ್ನರ್‌ ಸಿಕ್ಕಿತ್ತು. ಈ ತಂಡದ ಲಿಸಾ ಮೇರಿ ಬಾರಿಸಿದ ಚೆಂಡನ್ನು ಭಾರತದ ಗೋಲ್‌ ಕೀಪರ್‌ ಸವಿತಾ ಅಮೋಘ ರೀತಿಯಲ್ಲಿ ತಡೆದರು.

ನಾಲ್ಕನೆ ಕ್ವಾರ್ಟರ್‌ನಲ್ಲಿ ಭಾರತದ ಆಟ ರಂಗೇರಿತು. ನವನೀತ್‌ ಕೌರ್‌ ಬಾರಿಸಿದ ಚೆಂಡ‌ನ್ನು ತಡೆದ   ವಂದನಾ ಕಟಾರಿಯಾ ಅದನ್ನು ಎದುರಾಳಿ ಆವರಣದ ಸನಿಹ ನಿಂತಿದ್ದ ರಾಣಿ ಅವರತ್ತ ತಳ್ಳಿದರು. ತಮ್ಮತ್ತ ಬಂದ ಚೆಂಡನ್ನು ರಾಣಿ ಚುರುಕಾಗಿ ಗುರಿಸೇರಿಸಿ ಭಾರತದ ಸಂಭ್ರಮಕ್ಕೆ ಕಾರಣರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT