ಪಿತ್ತಕೋಶದಲ್ಲೂ ಕಲ್ಲುಗಳೆ?

7

ಪಿತ್ತಕೋಶದಲ್ಲೂ ಕಲ್ಲುಗಳೆ?

Published:
Updated:
3d illustration of Human body Gallbladder anatomyಪಿತ್ತಕೋಶದಲ್ಲಿ ಕಲ್ಲು

ತಂಗಿಯ ಹೊಟ್ಟೆನೋವು ಹಾಗೂ ಹುಳಿತೇಗಿನ ಸಮಸ್ಯೆಯನ್ನು ನಾನು ಗ್ಯಾಸ್ಟ್ರಿಕ್ ಸಮಸ್ಯೆ ಎಂದೇ ಪರಿಗಣಿಸಿ ಅದಕ್ಕಾಗಿ ಒಂದಿಷ್ಟು ಮಾತ್ರೆಗಳನ್ನು ಕೊಟ್ಟಿದ್ದೆ. ಆದರೆ ಆ ಮಾತ್ರೆಗಳಿಂದ ಆಕೆಯ ಸಮಸ್ಯೆ ಸಂಪೂರ್ಣ ಶಮನವಾಗದಿದ್ದಾಗ ಆಕೆ ಶಸ್ತ್ರಚಿಕಿತ್ಸಾತಜ್ಞರ ಸಲಹೆ ಪಡೆದಿದ್ದಳು.

ಅವರ ಸೂಚನೆಯಂತೆ ಉದರದರ್ಶಕ (ಎಂಡೋಸ್ಕೋಪಿ) ಪರೀಕ್ಷೆ ಹಾಗೂ ಹೊಟ್ಟೆಯ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಪರೀಕ್ಷೆ ಮಾಡಿಸಿದ್ದಳು. ಸ್ಕ್ಯಾನಿಂಗ್ ಪರೀಕ್ಷೆಯ ವರದಿಯಲ್ಲಿ ಅವಳ ಪಿತ್ತಕೋಶದಲ್ಲಿ ಕಲ್ಲುಗಳಿವೆ ಎಂದು ಬಂದಿದ್ದು, ಅದೇ ಹೊಟ್ಟೆನೋವಿಗೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು. 

ಹೌದು, ಮೂತ್ರಪಿಂಡ ಹಾಗೂ ಮೂತ್ರನಾಳಗಳಲ್ಲಿ ಕಂಡುಬರುವಂತೆ ಪಿತ್ತಕೋಶದಲ್ಲಿಯೂ ಕಲ್ಲುಗಳು ಆಗಬಹುದು. ಪಿತ್ತಜನಕಾಂಗವು ಉತ್ಪತ್ತಿ ಮಾಡುವ ಪಿತ್ತರಸವನ್ನು ಶೇಖರಿಸಿ ಇಡುವುದೇ ಪಿತ್ತಕೋಶದ ಮುಖ್ಯ ಕೆಲಸ. ಪಿತ್ತರಸವು ಕೊಬ್ಬಿನಾಂಶದ ವಸ್ತುಗಳ ಜೀರ್ಣಕ್ರಿಯೆಯಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ.

ವ್ಯಕ್ತಿಯು ಸೇವಿಸಿದ ಆಹಾರವು ಸಣ್ಣಕರುಳನ್ನು ತಲುಪಿದಾಗ ಪಿತ್ತಕೋಶವು ಪಿತ್ತರಸವನ್ನು ಬಿಡುಗಡೆ ಮಾಡುತ್ತದೆ. ಅಲ್ಲಿಂದ ಹೊರಟ ಪಿತ್ತರಸವು ನಾಳಗಳ ಮೂಲಕ ಕರುಳನ್ನು ತಲುಪಿ, ಅಲ್ಲಿ ಕೊಬ್ಬಿನಾಂಶದ ಪೌಷ್ಟಿಕಾಂಶಗಳು ಪಚನವಾಗಲು ಸಹಕರಿಸುತ್ತದೆ.

ಕಲ್ಲುಗಳು ಆಗುವುದಾದರೂ ಹೇಗೆ?

ಪಿತ್ತಕೋಶದ ಕಲ್ಲುಗಳಲ್ಲಿ ಮುಖ್ಯವಾಗಿ ಮೂರು ಬಗೆ: ಕೊಲೆಸ್ಟ್ರಾಲ್‌ ಅಂಶದ ಕಲ್ಲುಗಳು: ಪಿತ್ತಜನಕಾಂಗವು ಉತ್ಪತ್ತಿ ಮಾಡುವ ಪಿತ್ತರಸದಲ್ಲಿ ಕೊಲೆಸ್ಟೆರಾಲ್ ಅಂಶವು ಹೆಚ್ಚಾಗಿದ್ದಾಗ ಅದು ಅಲ್ಲಿ ಹರಳುಗಟ್ಟಿ ಸಣ್ಣ ಕಲ್ಲುಗಳಂತೆ ಮಾರ್ಪಾಡಾಗಬಹುದು.

ಬಿಲಿರುಬಿನ್ ಅಂಶದ ಕಲ್ಲುಗಳು: ಕೆಂಪು ರಕ್ತಕಣಗಳು ತಮ್ಮ ಜೀವಿತಾವಧಿಯ ನಂತರ ಶರೀರದಲ್ಲಿ ನಾಶ ಹೊಂದಿದಾಗ ಉತ್ಪತ್ತಿಯಾಗುವ ಬಿಲಿರುಬಿನ್ ಎಂಬ ಒಂದು ಬಗೆಯ ವಸ್ತುವು ಹೆಚ್ಚಾದಾಗ ಅದು ಕಲ್ಲುಗಳಾಗಿ ಮಾರ್ಪಾಡಾಗಬಹುದು. ಇದು ಕೆಲವು ಬಗೆಯ ಜನ್ಮಜಾತ ರಕ್ತಹೀನತೆಯ ಸಮಸ್ಯೆಯಿಂದ ಬಳಲುವವರಲ್ಲಿ ಕಂಡುಬರಬಹುದು.

ಮಿಶ್ರ ಕಲ್ಲುಗಳು: ಮೇಲೆ ಹೇಳಿದ ಎರಡೂ ಅಂಶಗಳು ಸೇರಿ ಆಗುವ ಕಲ್ಲುಗಳು.

ಅಪಾಯಕರ ಅಂಶಗಳು ಯಾವುವು?

ಈ ಸಮಸ್ಯೆಗೆ ವ್ಯಕ್ತಿಯ ದೇಹಪ್ರಕೃತಿಯು ಒಂದಿಷ್ಟು ಅಪಾಯಕರ ಅಂಶಗಳನ್ನು ತಂದೊಡ್ಡಿದರೆ, ವ್ಯಕ್ತಿಯ ಜೀವನಶೈಲಿಯೂ ಕೆಲವು ಅಪಾಯಕರ ಅಂಶಗಳಿಗೆ ಕಾರಣವಾಗಬಹುದು.

ಆನುವಂಶೀಯತೆ

ಈ ಸಮಸ್ಯೆಯು ಹೆಚ್ಚಾಗಿ ಕಾಡುವುದು ಮಹಿಳೆಯರನ್ನು, ಅದರಲ್ಲಿಯೂ ನಲವತ್ತರ ಆಸುಪಾಸಿನ ವಯೋಮಾನದವರನ್ನು

* ಈಸ್ಟ್ರೋಜನ್ ಅಂಶವಿರುವ ಮಾತ್ರೆಗಳ ಸೇವನೆ

* ಅಧಿಕ ದೇಹ ತೂಕ, ಬೊಜ್ಜು

* ಮಧುಮೇಹದಿಂದ ಬಳಲುವವರಲ್ಲಿ

* ಜಡಜೀವನ ಶೈಲಿ

* ಅತಿಯಾದ ಕೊಬ್ಬಿನಾಂಶವಿರುವ ಆಹಾರದ ಸೇವನೆ

* ಪಿತ್ತಜನಕಾಂಗದ ಕಾಯಿಲೆಗಳು

* ಗರ್ಭಾವಸ್ಥೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದು

* ಸ್ವಲ್ಪವೇ ಸಮಯದಲ್ಲಿ ಅತಿಯಾದ ತೂಕ ಇಳಿಸಿಕೊಳ್ಳುವವರಲ್ಲಿ.

ಗುಣಲಕ್ಷಣಗಳೇನು?

* ಬಲಭಾಗದ ಮೇಲಿನ ಹೊಟ್ಟೆಯಲ್ಲಿ ತೀವ್ರತರವಾದ ಹಿಂಡಿದಂತಹ ನೋವು

* ಒಮ್ಮೊಮ್ಮೆ ಈ ನೋವು ಬಲ ಭುಜಕ್ಕೂ ವರ್ಗಾಯಿಸಲ್ಪಡಬಹುದು.

* ಆ ನೋವಿನ ಜೊತೆಯಲ್ಲಿಯೇ ವಾಕರಿಕೆ ಬಂದಂತಾಗುವುದು, ವಾಂತಿಯಾಗುವುದು

* ಸಾಮಾನ್ಯವಾಗಿ ಕೊಬ್ಬಿನಾಂಶದ ಆಹಾರದ ಸೇವನೆಯ ಬಳಿಕ ಹೊಟ್ಟೆ ನೋವು ಹೆಚ್ಚಾಗಿ ಕಾಣಿಸಿಕೊಳ್ಳುವುದು

ಪತ್ತೆ ಹೇಗೆ?

* ಹೊಟ್ಟೆಯ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಪರೀಕ್ಷೆ

* ಹೊಟ್ಟೆಯ ಸಿ. ಟಿ. ಸ್ಕ್ಯಾನ್ ಪರೀಕ್ಷೆ

* ಇ. ಆರ್. ಸಿ. ಪಿ. ಪರೀಕ್ಷೆ. (ಎಂಡೋಸ್ಕೋಪಿಕ್ ರೆಟ್ರೋಗ್ರೇಡ್ ಕೊಲ್ಯಾಂಜಿಯೋ ಪ್ಯಾಂಕ್ರಿಯಾಟೋಗ್ರ್ಯಾಫಿ) ಮುಂತಾದವು

ಚಿಕಿತ್ಸೆ ಏನು?

ಶೇ 80ರಷ್ಟು ಪಿತ್ತಕೋಶದ ಕಲ್ಲುಗಳು ಸಾಮಾನ್ಯವಾಗಿ ಯಾವುದೇ ಬಗೆಯ ತೊಂದರೆಯನ್ನು ಉಂಟುಮಾಡುವುದಿಲ್ಲ. ಹಾಗಾಗಿಯೇ ಅವುಗಳನ್ನು ‘ನಿಶ್ಶಬ್ದ ಕಲ್ಲುಗಳು’ ಎನ್ನುತ್ತಾರೆ.

ನೋವು ಪದೇ ಪದೇ ಬಂದು ವ್ಯಕ್ತಿಯ ದೈನಂದಿನ ಜೀವನಕ್ಕೆ ತೊಂದರೆಯಾಗುತ್ತಿದ್ದರೆ ಕೆಲವು ನೋವು ನಿವಾರಕ ಮಾತ್ರೆಗಳನ್ನೂ ಹಾಗೂ ಸಣ್ಣ ಗಾತ್ರದ ಕಲ್ಲುಗಳು ಅಲ್ಲಿಯೇ ಕರಗುವಂತಹ ಔಷಧಗಳನ್ನೂ ಶಸ್ತ್ರಚಿಕಿತ್ಸಾತಜ್ಞರು ಸೂಚಿಸಬಹುದು.

ಆದರೆ ಕೆಲವು ಸಂದರ್ಭಗಳಲ್ಲಿ ಅವುಗಳಿಂದ ಉಂಟಾಗುವ ತೀವ್ರತರವಾದ ನೋವು ಅಥವಾ ಕಲ್ಲುಗಳಿಂದ ಉಂಟಾಗಬಹುದಾದ ಪಿತ್ತಕೋಶದ ಉರಿಯೂತ ಅಥವಾ ಪಿತ್ತಕೋಶದ ನಾಳಗಳಲ್ಲಿ ಕಲ್ಲುಗಳಿಂದ ಆಗಬಹುದಾದ ಅಡಚಣೆ ಮೊದಲಾದ ಕಾರಣಗಳಿಗಾಗಿ ಶಸ್ತ್ರಚಿಕಿತ್ಸೆಯ ಸಹಾಯದಿಂದ ಪಿತ್ತಕೋಶವನ್ನು ತೆಗೆಯಬೇಕಾಗುತ್ತದೆ.

(ಡಾ. ವಿನಯ ಶ್ರೀನಿವಾಸ್‌)

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !