ತಿಂಗಳಲ್ಲಿ 40ಕ್ಕೂ ಹೆಚ್ಚು ಜೇನುಗೂಡು ತೆರವು

ಬುಧವಾರ, ಏಪ್ರಿಲ್ 24, 2019
32 °C

ತಿಂಗಳಲ್ಲಿ 40ಕ್ಕೂ ಹೆಚ್ಚು ಜೇನುಗೂಡು ತೆರವು

Published:
Updated:
Prajavani

ಬೆಂಗಳೂರು: ಚುನಾವಣೆಯ ಕರ್ತವ್ಯ ನಿರ್ವಹಣೆ ಮಾಡುವುದರಲ್ಲೇ ತಲ್ಲೀನವಾಗಿರುವ ಪಾಲಿಕೆಗೆ ಈಗ ಜೇನುನೊಣಗಳ ಕಾಟವೂ ಎದುರಾಗಿದೆ.

ಬೇಸಿಗೆ ಪ್ರಖರವಾಗುತ್ತಿದ್ದಂತೆ ಜೇನ್ನೊಣಗಳ ವಲಸೆ ಪರ್ವವೂ ಆರಂಭವಾಗಿದ್ದು, ಎತ್ತರದ ಕಟ್ಟಡಗಳಲ್ಲಿ ಜೇನುನೊಣಗಳು ಗೂಡು ಕಟ್ಟುತ್ತಿವೆ. ಅವುಗಳನ್ನು ತೆರವುಗೊಳಿಸವಂತೆ ಕೋರಿ ಪಾಲಿಕೆಯ ಸಹಾಯವಾಣಿಗೆ ಕರೆಗಳು ಬರುತ್ತಿದ್ದು, ಪಾಲಿಕೆಯ ವನ್ಯಜೀವಿ ಸಂರಕ್ಷಕರ ತಂಡವು ತಿಂಗಳಿನಲ್ಲಿ 40ಕ್ಕೂ ಅಧಿಕ ಜೇನುಗೂಡುಗಳನ್ನು ತೆರವುಗೊಳಿಸಿದೆ.

‘ರಾಜರಾಜೇಶ್ವರಿ ನಗರದ ಸಿದ್ದಯ್ಯ ಪಾರ್ಕ್‌, ಅಂಬೇಡ್ಕರ್‌ ಬೀದಿಯ ಬಹು ಮಹಡಿ ಕಟ್ಟಡ, ಶಾಸಕರ ಭವನ, ಇಂದಿರಾನಗರದ ಐ.ಟಿ ಕಂಪನಿಗಳ ಕಚೇರಿ, ಜಯನಗರದ ರಣಧೀರ ಪಾರ್ಕ್‌ ಸೇರಿದಂತೆ 40ಕ್ಕೂ ಅಧಿಕ ಕಡೆ ಜೇನುಗೂಡುಗಳನ್ನು ತೆರವುಗೊಳಿಸಿದ್ದೇವೆ. ವೈಯಾಲಿಕಾವಲ್‌ನಲ್ಲಿ ಮೂರು ಕಡೆ ಗೂಡು ತೆಗೆಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ’ ಎಂದು ಪಾಲಿಕೆಯ ವನ್ಯಜೀವಿ ಸಂರಕ್ಷಣಾ ತಂಡದ ಪ್ರಸನ್ನ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಫೆಬ್ರುವರಿಯಿಂದ ಏಪ್ರಿಲ್‌ ನಡುವೆ ಜೇನುಗಳ ವಲಸೆ ಹೆಚ್ಚು. ಗಿಡಮರಗಳು ಹೂಬಿಡುವ ಈ ಅವಧಿಯಲ್ಲಿ ಅವುಗಳಿಗೆ ಯಥೇಚ್ಛ ಮಕರಂದ ಲಭ್ಯ. ಅವುಗಳ ಸಂತತಿಯೂ ಹೆಚ್ಚುತ್ತದೆ. ಜೇನು ಬಳಗಗಳು ವಿಭಜನೆ ಹೊಂದುತ್ತವೆ. ಹೊಸ ಬಳಗಗಳು ಹೊಸ ಜಾಗವನ್ನು ಅರಸುತ್ತವೆ. ಎತ್ತರದ ಕಟ್ಟಡಗಳಲ್ಲಿ ಸೂಕ್ತ ಜಾಗ ಸಿಕ್ಕರೆ ಅಲ್ಲಿ ಗೂಡು ಕಟ್ಟುತ್ತವೆ.

‘ಅನೇಕರು ಗೂಡು ತೆರವು ಗೊಳಿಸಲು ಕೀಟ ನಿಯಂತ್ರಣ ತಂಡ ದವರನ್ನು ಕರೆಸುತ್ತಾರೆ. ಅವರು ಯಾವುದೇ ಕನಿಕರವಿಲ್ಲದೇ ಕೀಟ ನಾಶಕ ಸಿಂಪಡಿಸಿ ಜೇನ್ನೊಣಗಳನ್ನು ಕೊಲ್ಲುತ್ತಾರೆ. ನೊಣಗಳ ಗೂಡನ್ನು ಮಾತ್ರ ತೆರವು ಮಾಡಿದರೆ, ಅವು ಬೇರೆ ಸೂಕ್ತ ಜಾಗವನ್ನು ಹುಡುಕಿ ಗೂಡು ಕಟ್ಟಿಕೊಳ್ಳುತ್ತವೆ. ನೊಣಗಳನ್ನು ಸಂರಕ್ಷಿಸುವ ಉದ್ದೇಶದಿಂದ ನಾವೇ ಮುಂದಾಗಿ ಜೇನುಗೂಡನ್ನು ತೆರವುಗೊಳಿಸುತ್ತಿದ್ದೇವೆ’ ಎಂದು ಪ್ರಸನ್ನ ತಿಳಿಸಿದರು.

‘ಗೂಡು ತೆಗೆಸಲು ನಾವು ಬನ್ನೇರುಘಟ್ಟದಿಂದ ಪರಿಣಿತರನ್ನು ಕರೆಸುತ್ತೇವೆ. ಬುಡಕಟ್ಟು ಜನಾಂಗಕ್ಕೆ ಸೇರಿದ ಪಾಂಡುರಂಗ ಶೆಟ್ಟಿ ಹಾಗೂ ದೇವರಾಜ್‌ ಎಂಬವರು ಕೆಲವು ಸೊಪ್ಪುಗಳನ್ನು ತಂದು ಸ್ವಲ್ಪವೇ ಹೊಗೆ ಹಾಕಿ ಜತನದಿಂದ ಜೇನುಗೂಡನ್ನು ತೆಗೆಯುತ್ತಾರೆ. ಅವರು ನೊಣಗಳನ್ನು ಕೊಲ್ಲುವುದಿಲ್ಲ. ನಗರಕ್ಕೆ ಬಂದು ಹೋಗುವ ಖರ್ಚಿಗಾಗಿ ಅವರಿಗೆ ₹ 1,500 ನೀಡಬೇಕಾಗುತ್ತದೆ. ತೆರವು ಕಾರ್ಯಾಚರಣೆಯಲ್ಲಿ ಅವರಿಗೆ ನಾನು ಮತ್ತು ವನ್ಯಜೀವಿ ಕಾರ್ಯಕರ್ತ ಸಚಿನ್‌ಗೌಡ ನೆರವಾಗುತ್ತೇವೆ’ ಎಂದು ಹೇಳಿದರು.

‘ಪ್ರಕೃತಿಯಲ್ಲಿ ಬಹುಪಾಲು ಪರಾಗ ಸ್ಪರ್ಶಕ್ರಿಯೆ ನಡೆಯುವುದೇ ಜೇನುನೊಣಗಳಿಂದ. ಕೃಷಿ ಇಳು ವರಿಯಲ್ಲೂ ಇವುಗಳ ಕೊಡುಗೆ ಮಹ ತ್ವದ್ದು. ಹಾಗಾಗಿ ಇವುಗಳನ್ನು ರೈತರ ಮಿತ್ರ ಎಂದೇ ಕರೆಯುತ್ತಾರೆ. ಆಹಾರದ ಉತ್ಪಾದನೆಯ ಹಿಂದೆ ಅವುಗಳ ಶ್ರಮವೂ ಅಡಗಿದೆ. ಹಾಗಾಗಿ ಅವುಗಳ ಸಂತತಿಯನ್ನು ನಾಶಪಡಿಸುವುದೂ ಒಂದೇ, ನಾವು ಆತ್ಮಹತ್ಯೆ ಮಾಡುವುದು ಒಂದೇ’ ಎಂದು ಅವರು ಅಭಿಪ್ರಾಯಪಟ್ಟರು.

ಭಯ ಪಡದಿರಿ: ‘ಕಟ್ಟಡದಲ್ಲಿ ಜೇನು ಗೂಡು ಕಟ್ಟಿದರೂ ಜನ ಆತಂಕ ಪಡುವ ಅಗತ್ಯ ಇಲ್ಲ. ತೊಂದರೆ ಆಗದ ಹೊರತು ಅವು ಯಾರಿಗೂ ಕಚ್ಚುವುದಿಲ್ಲ. ಆದರೆ ಜೇನುಗೂಡಿನ ಬಳಿ ಬೆಂಕಿ ಹಚ್ಚುವುದು, ಹೊಗೆ ಹಾಕು ವುದು, ಗೂಡನ್ನು ಸ್ಪರ್ಶಿಸುವುದು ಮಾಡಿದರೆ ಸೈನಿಕ ಜೇನುಹುಳಗಳು ದಾಳಿ ನಡೆಸುತ್ತವೆ. ಜೇನಿನ ಬಗ್ಗೆ ಭಯವಿದ್ದರೆ ಕೀಟನಾಶಕ ಹಾಕಿ ಅವುಗಳನ್ನು ಕೊಲ್ಲಬೇಡಿ. ಗೂಡನ್ನು ತೆಗೆ ಯಿಸಿದರೆ ಅವು ತಾವಾಗಿಯೇ ಬೇರೆ ಜಾಗ ಹುಡುಕಿಕೊಳ್ಳುತ್ತವೆ’ ಎಂದರು.

**

ಪಕ್ಷೇತರ ಅಭ್ಯರ್ಥಿಗೆ ಕಚ್ಚಿದ ಜೇನ್ನೊಣ

ಪಾಲಿಕೆಯ ಹೊಸ (ಆನೆಕ್ಸ್‌–3) ಕಟ್ಟಡದ ಎರಡನೇ ಮಹಡಿಯಲ್ಲಿ ಜೇನುಗೂಡು ಕಟ್ಟಿತ್ತು. ಇದೇ ಕಟ್ಟಡದಲ್ಲಿ ಚುನಾವಣಾಧಿಕಾರಿಯ ಕಚೇರಿಯೂ ಇದೆ. ನಾಮಪತ್ರ ಸಲ್ಲಿಸಲು ಬಂದಿದ್ದ ಪಕ್ಷೇತರ ಅಭ್ಯರ್ಥಿಯೊಬ್ಬರಿಗೆ ಬುಧವಾರ ಜೇನ್ನೊಣಗಳು ಕಚ್ಚಿದ್ದವು. ಎರಡು ದಿನಗಳ ಹಿಂದೆ ವ್ಯಕ್ತಿಯೊಬ್ಬರು ಫೋನ್‌ನಲ್ಲಿ ಮಾತನಾಡುತ್ತಾ ಜೇನು ಗೂಡಿನತ್ತ ಹೋಗಿದ್ದರು. ಅವರಿಗೂ ನೊಣಗಳು ಕಚ್ಚಿದ್ದವು. ಬಳಿಕ ಪಾಲಿಕೆ ಅಧಿಕಾರಿಗಳು ಈ ಗೂಡನ್ನು ತೆಗೆಸುವಂತೆ ವನ್ಯಜೀವಿ ಸಂರಕ್ಷಕರ ತಂಡವನ್ನು ಕೋರಿದ್ದರು. ಬುಧವಾರ ಸಂಜೆ ಈ ಜೇನುಗೂಡನ್ನು ತೆರವುಗೊಳಿಸಲಾಯಿತು.

**
ಸಿದ್ದಯ್ಯ ಪಾರ್ಕ್‌ನಲ್ಲಿ ಮಕ್ಕಳ ಮೇಲೆ ದಾಳಿ

‘ಉದ್ಯಾನಗಳ ಬಳಿ ಜೇನ್ನೊಣಗಳಿಗೆ ಯಥೇಚ್ಛ ಆಹಾರ ಹಾಗೂ ನೀರು ಲಭ್ಯ. ಹಾಗಾಗಿ ಇಂತಹ ಕಡೆ ಜೇನು ಗೂಡು ಕಟ್ಟುವುದು ಜಾಸ್ತಿ. ರಾಜರಾಜೇಶ್ವರಿನಗರದ ಸಿದ್ದಯ್ಯ ಪಾರ್ಕ್‌ನಲ್ಲಿ ಆಟಿಕೆಯೊಂದರಲ್ಲಿ ಗೂಡುಕಟ್ಟಿದ್ದ ಜೇನ್ನೊಣಗಳು ಸಮೀಪದಲ್ಲಿ ಆಡುತ್ತಿದ್ದ ನಾಲ್ವರು ಮಕ್ಕಳ ಮೇಲೆ ದಾಳಿ ನಡೆಸಿದ್ದವು. ಹಾಗಾಗಿ ಅದನ್ನು ತೆಗೆಸಿದ್ದೇವೆ’ ಎಂದು ಪ್ರಸನ್ನ ಕುಮಾರ್‌ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !