ಶುಕ್ರವಾರ, ಅಕ್ಟೋಬರ್ 18, 2019
27 °C

ದತ್ತಪೀಠ ಹಿಂದೂಗಳಿಗೆ ಒಪ್ಪಿಸಿ: ಕೊಪ್ಪದಲ್ಲಿ ಪ್ರಮೋದ್ ಮುತಾಲಿಕ್ ಆಗ್ರಹ

Published:
Updated:
Prajavani

ಕೊಪ್ಪ: ‘ರಾಮ ಮಂದಿರ ನಿರ್ಮಾಣ ನಮ್ಮ ಬೇಡಿಕೆ ಅಲ್ಲ, ವಿನಂತಿಯೂ ಅಲ್ಲ, ಅದು ನಮ್ಮ ಹಕ್ಕು’ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ‍್ಯಕ್ಷ ಪ್ರಮೋದ್ ಮುತಾಲಿಕ್ ಪ್ರತಿಪಾದಿಸಿದರು.

ಪಟ್ಟಣದಲ್ಲಿ ಶ್ರೀರಾಮ ಸೇನೆ ತಾಲ್ಲೂಕು ಘಟಕದ ವತಿಯಿಂದ ಶುಕ್ರವಾರ ನಡೆದ ದತ್ತ ಮಾಲಾಧಾರಿಗಳ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಶಿಯಾ ಮುಸ್ಲಿಮರು, ಹಿಂದೂಗಳ ಪರವಿದ್ದೇವೆ ಎಂದು ಹೇಳಿದ್ದಾರೆ. ಆದರೆ, ಸುನ್ನಿ ಮುಸಲ್ಮಾನರು ಒಪ್ಪಿಕೊಂಡಿಲ್ಲ. ಈ ದೇಶದಲ್ಲಿ ಹಿಂದೂ –ಮುಸ್ಲಿಂ ಬಾಂಧವ್ಯ ಚೆನ್ನಾಗಿ ಇರಬೇಕೆಂದರೆ, ಅವರೂ ಒಪ್ಪಿಕೊಳ್ಳಬೇಕು. 20 ವರ್ಷ
ಗಳಿಂದ ದತ್ತ ಪೀಠಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ. ಹಿಂದೂ ಹೋರಾಟದ ಮೂಲಕ ಬಂದಂತಹ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ದತ್ತ ಪೀಠವನ್ನು ನಮಗೆ ಒಪ್ಪಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಹೇಳಿದರು.

ರಾಜ್ಯ ಸಹ ಸಂಚಾಲಕ ಮಹೇಶ್ ಕುಮಾರ್ ಕಟ್ಟಿನಮನೆ ಮಾತನಾಡಿದರು. ಮಕ್ಕಳ ತಜ್ಞ ಡಾ. ರವೀಶ್ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ವೀರಭದ್ರೇಶ್ವರ ದೇವಸ್ಥಾನದಿಂದ ಮುಖ್ಯ ಬಸ್ ನಿಲ್ದಾಣದ ವರೆಗೆ ದತ್ತ ಮಾಲಾಧಾರಿಗಳು ಶೋಭಾಯಾತ್ರೆ ನಡೆಸಿದರು.

Post Comments (+)