ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌.ಎ.ಆರ್‌: ಬದಲಾಗಲಿದೆ ಮಾನದಂಡ

Last Updated 18 ಮಾರ್ಚ್ 2019, 20:12 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕಟ್ಟಡಗಳ ಫ್ಲೋರ್‌ ಏರಿಯಾ ರೇಷಿಯೋ (ಎಫ್‌.ಎ.ಆರ್‌) ನಿರ್ಧರಿಸುವ ಮಾನದಂಡಗಳನ್ನು ಬದಲಾಯಿಸುವ ಪ್ರಯತ್ನ ಸದ್ದಿಲ್ಲದೆ ನಡೆದಿದೆ.

2031ರ ಪರಿಷ್ಕೃತ ಮಹಾ ಯೋಜನೆಯಲ್ಲಿ (ಆರ್‌ಎಂಪಿ) ಎಫ್‌ಎಆರ್‌ ನಿರ್ಧರಿಸುವ ಅಂಶಗಳಿಗೆ ತಿದ್ದುಪಡಿ ತರಲು ಬಿಡಿಎ ಉದ್ದೇಶಿಸಿತ್ತು. ಆದರೆ, 2031ರ ಆರ್‌ಎಂಪಿ ಜಾರಿ ವಿಳಂಬವಾಗುತ್ತಿದೆ. ಹಾಗಾಗಿ 2015ರ ಪರಿಷ್ಕೃತ ಮಹಾಯೋಜನೆಯ ವಲಯ ನಿಬಂಧನಗಳಿಗೆ ತಿದ್ದುಪಡಿ ತರುವ ಮೂಲಕ ಎಫ್‌ಎಆರ್‌ ನಿರ್ಧರಿಸುವ ಅಂಶಗಳನ್ನು ತುರ್ತಾಗಿ ಮಾರ್ಪಾಡು ಮಾಡಲು ಸಿದ್ಧತೆ ನಡೆದಿದೆ.

2015ರ ಆರ್‌ಎಂಪಿಯ ವಲಯ ನಿಬಂಧನೆಗಳಿಗೆ ತಿದ್ದುಪಡಿ ತರುವ ಸಲುವಾಗಿನಗರಾಭಿವೃದ್ಧಿ ಇಲಾಖೆಯು ಇದೇ ಮಾರ್ಚ್‌ 7ರಂದು ರಾಜ್ಯಪತ್ರದಲ್ಲಿ ಪ್ರಕಟಿಸಿರುವ ಕರಡು ಅಧಿಸೂಚನೆಯಲ್ಲಿ ಎಫ್‌.ಎ.ಆರ್‌ ಮಾನದಂಡ ಮಾರ್ಪಾಡು ಮಾಡುವ ಅಂಶಗಳಿವೆ.

ಪ್ರಸ್ತುತ ಎಫ್‌ಎಆರ್‌ ನಿರ್ಧರಿಸುವಾಗ ಕೆಲವೊಂದು ರಚನೆ ಪ್ರಕಾರ ಎಫ್‌ಎಆರ್‌ ಕಂಡು ಹಿಡಿಯುವಾಗ ಎಸ್ಕಲೇಟರ್‌ಗಳು, ಕಾರಿಡಾರ್‌ಗಳನ್ನು ತೆರೆದ ಬಾಲ್ಕನಿ, ಮೆಟ್ಟಿಲುಗಳನ್ನು (ಸ್ಟೇರ್‌ಕೇಸ್‌ಗಳು) ಪರಿಗಣಿಸಲಾಗುತ್ತಿದೆ. ಆದರೆ, ವಾಹನ ನಿಲುಗಡೆ ತಾಣ, ಮೆಟ್ಟಿಲುಗಳ ಮುಖ್ಯ ಕೊಠಡಿ, ಲಿಫ್ಟ್‌ ಓಣಿ, ಲಿಫ್ಟ್‌ ಬಾವಿ, ಲಿಫ್ಟ್‌ ಯಂತ್ರೋಪಕರಣಗಳ ಕೊಠಡಿ, ರ‍್ಯಾಂಪ್‌ಗಳು, ವಾತಾಯನ ಕೊಳವೆಗಳು, ಶೌಚಾಲಯದ ಕೊಳವೆ ಗಳು, ಓವರ್‌ಹೆಡ್‌ ಟ್ಯಾಂಕ್‌ಗಳಿಗೆ ವಿನಾಯಿತಿ ಇದೆ. ಆದರೆ, ವಿನಾಯಿತಿ ಹೊಂದಿರುವ ರಚನೆಗಳ ಪಟ್ಟಿಗೆ ಮತ್ತಷ್ಟನ್ನು ಸೇರ್ಪಡೆ ಮಾಡುವ ಸಲುವಾಗಿ 2015ರ ಆರ್‌ಎಂಪಿಯ ಮೂರನೇ ಅಧ್ಯಾಯದಲ್ಲಿ ಕ್ರಮಸಂಖ್ಯೆ 3.4ಕ್ಕೆ ಕೆಲವೊಂದು ತಿದ್ದುಪಡಿಗಳನ್ನು ಸೂಚಿಸಲಾಗಿದೆ.

ಕಟ್ಟಡದ ಎತ್ತರವನ್ನು ನಿರ್ಧರಿಸುವಾಗಲೂ ಕೆಲವೊಂದು ರಚನೆಗಳನ್ನು ಪರಿಗಣಿಸದಿರಲು ನಗರಾಭಿವೃದ್ಧಿ ಇಲಾಖೆ ಚಿಂತನೆ ನಡೆಸಿದೆ. ಈ ಸಲುವಾಗಿ 2015ರ ಆರ್‌ಎಂಪಿಯ 3ನೇ ಅಧ್ಯಾಯದಲ್ಲಿ 3.4ಎ ಕ್ರಮಸಂಖ್ಯೆಯನ್ನು ಹೆಚ್ಚುವರಿಯಾಗಿ ಸೇರಿಸುವ ಪ್ರಸ್ತಾವ ತಿದ್ದುಪಡಿ ಕರಡಿನಲ್ಲಿದೆ.

ರಾಜ್ಯಪತ್ರದಲ್ಲಿ ಸೂಚಿಸಿರುವ ಕರಡುಗಳಿಗೆ ಆಕ್ಷೇಪಣೆ ಸಲ್ಲಿಸಲು ಅಥವಾ ಸಲಹೆ ನೀಡಲು 30 ದಿನ ಕಾಲಾವಕಾಶ ನೀಡಲಾಗಿದೆ.

ವಿಳಾಸ: ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ವಿಕಾಸ ಸೌಧ, ಬೆಂಗಳೂರು 560001

ಎಫ್‌ಎಆರ್‌ ಮಾನದಂಡ: ಮಾರ್ಪಾಡುಗಳೇನು?

2015ರ ಆರ್‌ಎಂಪಿಯ ವಲಯ ನಿಬಂಧನೆಗಳಿಗೆ ತಿದ್ದುಪಡಿ ತರುವ ಸಲುವಾಗಿ ಹೊರಡಿಸಿರುವ ಅಧಿಸೂಚನೆ ಪ್ರಕಾರ ಎಫ್‌ಎಆರ್‌ ನಿರ್ಧರಿಸುವಾಗ ಈ ಅಂಶಗಳನ್ನು ಪರಿಗಣಿಸುವಂತಿಲ್ಲ.

* ಎಲೆಕ್ಟ್ರಿಕಲ್‌ ಸಬ್‌ಸ್ಟೇಷನ್‌ ಅಥವಾ ಪ್ಯಾನೆಲ್ ಕೊಠಡಿ, ಜನರೇಟರ್‌, ಪಂಪ್‌ ಕೊಠಡಿ, ಹವಾನಿಯಂತ್ರಣ ಘಟಕದ ಕೊಠಡಿ, ಘನತ್ಯಾಜ್ಯ ನಿರ್ವಹಣಾ ಘಟಕ, ಅಗ್ನಿ ನಿಯಂತ್ರಣ ಕೊಠಡಿ, ಭದ್ರತಾ ಅಥವಾ ಸಿ.ಸಿ.ಟಿವಿ ಕೊಠಡಿ

* ಬಹುಮಹಡಿ ಕಟ್ಟಡಗಳಲ್ಲಿ ಅಗ್ನಿಶಾಮಕ ನಿಯಮಗಳಿಗೆ ಅನುಗುಣವಾಗಿ ರಚಿಸಿದ ಸುರಕ್ಷಿತ ಆಶ್ರಯ ತಾಣ

* ವಸತಿಯೇತರ ಸಂಕೀರ್ಣ ಅಥವಾ ಘಟಕದಲ್ಲಿ ನಿರ್ಮಿಸಿರುವ ಪ್ರತ್ಯೇಕ ಸಾರ್ವಜನಿಕ ಶೌಚಾಲಯ

* ಮೆಟ್ಟಿಲು/ ಮೆಟ್ಟಿಲು ಕೊಠಡಿ

* ಜೀವಿಸಲು ಅಥವಾ ಇತರ ಉದ್ದೇಶಕ್ಕೆ ಬಳಕೆಯಾಗದ ವಾಸ್ತು ರಚನೆಗಳು

* ಹೊಗೆಕೊಳವೆ (ಚಿಮಣಿ)

* ವಾತಾಯನ ಕೊಳವೆ ಮತ್ತು ಕಸದ ಒಣಿ

* ಕೊಳವೆಗಳು

* ಮಾರ್ಗ ಹಾಗೂ ರ‍್ಯಾಂಪ್‌ಗಳನ್ನು ಒಳಗೊಂಡಂತೆ ವಾಹನ ನಿಲುಗಡೆ ತಾಣ

* ಎಲ್ಲ ನಿವಾಸಿಗಳು ಬಳಸುವ ಸಲುವಾಗಿ ಅಂಗಳದಲ್ಲಿ ಅಥವಾ ಮಹಡಿಗಳಲ್ಲಿ ನಿರ್ಮಿಸಿರುವ ಈಜುಕೊಳ ಮತ್ತು ಅದಕ್ಕೆ ಹೊಂದಿಕೊಂಡ ಶೌಚಾಲಯ

* ಓವರ್‌ಹೆಡ್‌ ಟ್ಯಾಂಕ್‌

* ಎಸ್ಕಲೇಟರ್‌

* ಲಿಫ್ಟ್‌ ಬಾವಿಗಳು ಹಾಗೂ ಲಿಫ್ಟ್‌ ಯಂತ್ರೊಪಕರಣಗಳ ಕೊಠಡಿ

* ಕಾವಲುಗಾರನ ಚೌಕ (2 ಚ.ಮೀಗಿಂತ ಹೆಚ್ಚು ವಿಸ್ತೀರ್ಣ ಹೊಂದಿರಬಾರದು)

* ಘನತ್ಯಾಜ್ಯ ನಿರ್ವಹಣಾ ಘಟಕ (ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಗಳಿಗನುಸಾರ ನಿರ್ಮಿಸಿರುವುದು) ಹಾಗೂ ಪಂಪ್‌ ಕೊಠಡಿಗಳು

**
ಕಟ್ಟಡದ ಎತ್ತರ ನಿರ್ಧರಿಸುವಾಗ ಇವು ಗಣನೆಗಿಲ್ಲ

(ತಿದ್ದುಪಡಿ ಕರಡಿನ ಪ್ರಕಾರ)

* ಟೆರೇಸ್‌ ಮೇಲಿನ ಮಹಡಿಯಲ್ಲಿ ಎ.ಸಿ.ಚಿಲ್ಲರ್‌ ಘಟಕ, ಸೋಲಾರ್‌ ಪ್ಯಾನೆಲ್‌, ಡಿರೈಡ್‌ ಆಂಟೆನ್ನಾ, ಲಿಫ್ಟ್‌ ಯಂತ್ರೋಪಕರಣಗಳ ಕೊಠಡಿ, ಓವರ್‌ ಹೆಡ್‌ ಟ್ಯಾಂಕ್‌, ಸ್ಟೇರ್‌ಕೇಸ್‌ ಹೆಡ್‌ ಕೊಠಡಿಯ ಚಾವಣಿ, (3.5 ಮೀ ಎತ್ತರದವರೆಗೆ) ಹೊಗೆಕೊಳವೆ, ತಡೆಗೋಡೆ (1.2 ಮೀಎತ್ತರದವರೆಗೆ), ಇತರ ವಾಸ್ತು ಅಂಶಗಳು ಮತ್ತಿತರ ಸ್ಲ್ಯಾಬ್‌ಗಳು/ ಸಂರಚನೆಗಳು

* ಮಳೆ ನೀರು ಕಟ್ಟಡದೊಳಗೆ ಪ್ರವೇಶಿಸದಂತೆ ರಚಿಸಿರುವ ಕವಚ (2 ಮೀಟರ್‌ಗಿಂತ ಎತ್ತರ ಇರುವಂತಿಲ್ಲ ಹಾಗೂ ಇದು ಶಾಶ್ವತ ರಚನೆ ಆಗಿರಬಾರದು)

* ಏರೋಡ್ರೋಮ್‌ಗಳ ಆಸುಪಾಸಿನಲ್ಲಿ ಮಾತ್ರ ಈ ಮೇಲಿನ ಅಂಶಗಳನ್ನೂ ಪರಿಗಣಿಸಿ ಕಟ್ಟಡದ ಒಟ್ಟು ಎತ್ತರವನ್ನು ನಿರ್ಧರಿಸಬೇಕು

* ಬೆಂಗಳೂರು ಮಹಾನಗರ ಪ್ರದೇಶದ (ಸ್ಥಳೀಯ ಯೋಜನಾ ವಲಯ) ವ್ಯಾಪ್ತಿಯಲ್ಲಿ ಕಟ್ಟಡದ ಎತ್ತರ ಹಾಗೂ ಇತರ ರಚನೆಗಳು ವಿಮಾನನಿಲ್ದಾಣ ಪ್ರಾಧಿಕಾರಗಳು ನಿಗದಿಪಡಿಸಿದ ಏರ್ ಫನೆಲ್‌ ಝೋನ್‌ಗಳ ಮಿತಿಗಳಿಗೆ ಅನುಗುಣವಾಗಿಯೇ ಇರಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT