ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವೀಣ್ ಖಾಂಡ್ಯ ಜಾಮೀನು ಅರ್ಜಿ ಎರಡನೇ ಬಾರಿಗೆ ತಿರಸ್ಕೃತ

Last Updated 11 ಫೆಬ್ರುವರಿ 2019, 19:32 IST
ಅಕ್ಷರ ಗಾತ್ರ

ಬೆಂಗಳೂರು: ಎಚ್‌.ಎಂ.ತೇಜಸ್‌ ಅಪಹರಣ ಪ್ರಕರಣದ ಪ್ರಮುಖ ಆರೋಪಿಯಾದ ವಿಶ್ವ ಹಿಂದೂ ಪರಿಷತ್‌ ಶಿವಮೊಗ್ಗ ವಿಭಾಗೀಯ ಕಾರ್ಯದರ್ಶಿ ಪ್ರವೀಣ್‌ ಖಾಂಡ್ಯ ಅವರಿಗೆ ಜಾಮೀನು ಮಂಜೂರು ಮಾಡಲು ಹೈಕೋರ್ಟ್ ಎರಡನೇ ಬಾರಿಗೆ ನಿರಾಕರಿಸಿದೆ.

ಈ ಕುರಿತ ಪ್ರಕರಣವನ್ನು ನ್ಯಾಯಮೂರ್ತಿ ಬಿ.ಎ.ಪಾಟೀಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿ, ‘ಜಾಮೀನು ನೀಡಲು ಯಾವುದೇ ಬಲವಾದ ಅಂಶಗಳು ಕೋರ್ಟ್‌ಗೆ ಮನವರಿಕೆಯಾಗಿಲ್ಲ’ ಎಂದು ಅಭಿಪ್ರಾಯದೊಂದಿಗೆ ಅರ್ಜಿ ತಿರಸ್ಕರಿಸಿದೆ.

ಪ್ರಕರಣವೇನು? : ಎಚ್.ಎಂ. ತೇಜಸ್ ಅವರನ್ನು 2016ರ ಜೂನ್ 28ರಂದು ಅಪಹರಿಸಿ ₹ 25 ಲಕ್ಷ ನೀಡುವಂತೆ ಬೇಡಿಕೆಯಿಟ್ಟ ಪ್ರಕರಣದಲ್ಲಿ ಪ್ರವೀಣ್ ಖಾಂಡ್ಯ ನಾಲ್ಕನೇ ಆರೋಪಿಯಾಗಿದ್ದಾರೆ.

2016ರ ಡಿಸೆಂಬರ್‌ 16ರಂದು ಖಾಂಡ್ಯಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಈ ಕ್ರಮವನ್ನು ಪ್ರಶ್ನಿಸಿ ಪ್ರಕರಣದ ತನಿಖೆ ನಡೆಸಿದ್ದ ಚಿಕ್ಕಮಗಳೂರು ಜಿಲ್ಲೆಯ ಬಸವನಹಳ್ಳಿ ಠಾಣಾ ಪೊಲೀಸರು ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು. ಪರಿಣಾಮ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿತ್ತು.

ನಂತರ ಆರೋಪಿ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇದರಿಂದಾಗಿ ಖಾಂಡ್ಯ ಅವರು, 2018ರ ಸೆಪ್ಟೆಂಬರ್‌ನಲ್ಲಿ ಜಾಮೀನು ಕೋರಿ ಮೊದಲ ಬಾರಿಗೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು 2018ರ ಅಕ್ಟೋಬರ್‌ 22ರಂದು ಹೈಕೋರ್ಟ್ ತಿರಸ್ಕರಿಸಿತ್ತು.

ಇದಾದ ನಂತರ ಖಾಂಡ್ಯ ಪುನಃ ಜಾಮೀನು ಕೋರಿ 2018ರ ಡಿಸೆಂಬರ್‌ 19ರಂದು ಹೈಕೋರ್ಟ್‌ಗೆ ಎರಡನೇ ಬಾರಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನೂ ಈಗ ವಜಾಗೊಳಿಸಲಾಗಿದೆ.

ರಾಜ್ಯ ಪ್ರಾಸಿಕ್ಯೂಷನ್‌ ಪರವಾಗಿ ನಮಿತಾ ಕಲ್ಲೇಶ್‌ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT