ಶನಿವಾರ, ಫೆಬ್ರವರಿ 22, 2020
19 °C

ಅಟಾರಿ- ವಾಘಾ ಗಡಿ ದಾಟಿ ಭಾರತದೊಳಗೆ ಬಂದಿದ್ದಾರೆ 200 ಪಾಕಿಸ್ತಾನಿ ಹಿಂದೂಗಳು

ಪಿಟಿಐ Updated:

ಅಕ್ಷರ ಗಾತ್ರ : | |

Pakistani Hindu pilgrims arrive at the India-Pakistan Wagah border post, about 35km from Amritsar on February 3, 2020.

ನವದೆಹಲಿ: ಅಟಾರಿ- ವಾಘಾ ಗಡಿ ಮೂಲಕ ಸುಮಾರು 200 ಪಾಕಿಸ್ತಾನಿ ಹಿಂದೂಗಳು  ದೇಶದೊಳಗೆ ಬಂದಿದ್ದಾರೆ ಎಂದು ಗಡಿಭಾಗದ ಅಧಿಕಾರಿಗಳು ಹೇಳಿದ್ದಾರೆ. ಭಾರತದೊಳಗೆ ಬಂದ ಈ ಜನರಲ್ಲಿ ಕೆಲವರು ವಾಪಸ್ ಪಾಕಿಸ್ತಾನಕ್ಕೆ ಹೋಗಲು ಇಚ್ಛಿಸುವುದಿಲ್ಲ. ಇವರು ವಿಸಿಟಿಂಗ್ ವೀಸಾದಡಿಯಲ್ಲಿ ಭಾರತಕ್ಕೆ ಬಂದಿದ್ದರೂ ಕೆಲವರು ಪಾಕಿಸ್ತಾನ ಸುರಕ್ಷಿತವಲ್ಲ ಎಂಬ ಕಾರಣದಿಂದ ಬಂದಿದ್ದಾರೆ.  ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ಬಂದರೆ ತಮಗೆ ಪೌರತ್ವ ಸಿಗಬಹುದು ಎಂಬ ನಿರೀಕ್ಷೆ ಅವರದ್ದು ಎಂದಿದ್ದಾರೆ ಅಧಿಕಾರಿಗಳು.

ಪಾಕಿಸ್ತಾನದಲ್ಲಿ ಧಾರ್ಮಿಕ  ದೌರ್ಜನ್ಯಕ್ಕೊಳಗಾಗಿ ಅಲ್ಲಿಂದ ನಾಲ್ಕು ಕುಟುಂಬಗಳು ಓಡಿ ಬಂದಿವೆ ಎಂದು ಅಕಾಲಿ ನೇತಾರ ಮತ್ತು ದೆಹಲಿ ಸಿಖ್ ಗುರುದ್ವಾರ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಮಂಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ.

 ಕಳೆದ ತಿಂಗಳಿನಿಂದ ಪಾಕಿಸ್ತಾನದಿಂದ ಭಾರತಕ್ಕೆ ಬರುವ ಹಿಂದೂಗಳ ಸಂಖ್ಯೆ ಜಾಸ್ತಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಿಎಎ ಜಾರಿಯಾದರೆ  ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನದಲ್ಲಿ ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ವಲಸೆ ಬರುವ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರೈಸ್ತ ಸಮುದಾಯದ ಜನರಿಗೆ ಭಾರತ ಪೌರತ್ವ ನೀಡಲಿದೆ.

ಭಾನುವಾರ ಗಡಿದಾಟಿ ಬಂದ ಈ ಜನರು  ಸಿಂಧ್ ಮತ್ತು ಕರಾಚಿ ಪ್ರದೇಶದವರಾಗಿದ್ದಾರೆ. ಕೆಲವೊಬ್ಬರು ಲಗೇಜ್  ಹೊತ್ತು ಬಂದಿದ್ದು, ತಾವು ಭಾರತದಲ್ಲಿ  ಆಶ್ರಯ ಪಡೆಯಲಿದ್ದೇವೆ ಎಂದಿದ್ದಾರೆ. 

ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದಲ್ಲಿರುವ ಹಿಂದೂ ಮತ್ತು ಸಿಖ್ಖರು ಭಾರತದಲ್ಲಿ ಪೌರತ್ವ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಎಂದು ಹೆಸರು ಹೇಳಲು ಬಯಸದ ಪಾಕಿಸ್ತಾನಿ ಹಿಂದೂವೊಬ್ಬರು ಹೇಳಿದ್ದಾರೆ. ಇವರಲ್ಲಿ ಹೆಚ್ಚಿನವರು ರಾಜಸ್ಥಾನದಲ್ಲಿರುವ ಸಂಬಂಧಿಕರನ್ನು ಭೇಟಿಯಾಗಲು ಹೊರಟಿದ್ದಾರೆ.

ನಾವು ಪಾಕಿಸ್ತಾನದಲ್ಲಿ ಸುರಕ್ಷಿತರಲ್ಲ. ಹೆಣ್ಮಕ್ಕಳು ಅಪಹರಣಕ್ಕೊಳಗಾಗಬಹುದು ಎಂಬ ಭಯ ಕಾಡುತ್ತದೆ. ಪೊಲೀಸರು ಮೂಕ ಪ್ರೇಕ್ಷಕರಾಗಿ ಬಿಡುತ್ತಾರೆ. ಪಾಕಿಸ್ತಾನದ ವಾಯವ್ಯ  ಪ್ರದೇಶದಲ್ಲಿ ನಮ್ಮ ಹೆಣ್ಣು ಮಕ್ಕಳಿಗೆ  ಸ್ವತಂತ್ರವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ.

 ಪಾಕಿಸ್ತಾನದಲ್ಲಿ ಹಿಂದೂ ಹೆಣ್ಮಕ್ಕಳನ್ನು ಅಪಹರಿಸುವುದು ಸರ್ವೇ ಸಾಮಾನ್ಯವಾಗಿ ಹೋಗಿದೆ. ಈ ದುಷ್ಕರ್ಮಿಗಳ ವಿರುದ್ಧ ದೂರು ನೀಡಲು ಯಾವುದೇ ಕುಟುಂಬಗಳಿಗೆ ಧೈರ್ಯ ಸಾಲದು ಎಂದು ಹೆಸರು ಹೇಳಲಿಚ್ಛಿಸದ ಮಹಿಳೆಯರು ಹೇಳಿದ್ದಾರೆ.

 ನಾನು ಮಂಗಳವಾರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಈ ಜನರಿಗೆ ಭಾರತದ ಪೌರತ್ವ ನೀಡುವಂತೆ ಮನವಿ ಮಾಡಲಿದ್ದೇನೆ ಎಂದು ಸಿರ್ಸಾ ಟ್ವೀಟಿಸಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು