ಗೋಹತ್ಯೆ ಆರೋಪ, ಗುಂಪು ಗಲಭೆ: ಪೊಲೀಸ್‌ ಅಧಿಕಾರಿ ಹತ್ಯೆ ಸಂಬಂಧ ನಾಲ್ವರ ಬಂಧನ

7

ಗೋಹತ್ಯೆ ಆರೋಪ, ಗುಂಪು ಗಲಭೆ: ಪೊಲೀಸ್‌ ಅಧಿಕಾರಿ ಹತ್ಯೆ ಸಂಬಂಧ ನಾಲ್ವರ ಬಂಧನ

Published:
Updated:

ನವದೆಹಲಿ/ಲಖನೌ: ಪೊಲೀಸ್‌ ಇನ್‌ಸ್ಪೆಕ್ಟರ್‌ ಕಾರು ಹಿಂಬಾಲಿಸಿದ ಗುಂಪು ದಾಳಿ ನಡೆಸಿ ಇನ್‌ಸ್ಪೆಕ್ಟರ್‌ ಸುಭೋದ್‌ ಸಿಂಗ್‌ ಅವರ ಹತ್ಯೆ ಮಾಡಿತ್ತು. ಈ ಪ್ರಕರಣದಲ್ಲಿ ಬಲ ಪಂಥೀಯ ಸಂಘಟನೆಯ ಕಾರ್ಯಕರ್ತ ’ಆರೋಪಿ ನಂ.1’ ಆಗಿದ್ದಾನೆ. 

ಉತ್ತರ ಪ್ರದೇಶದ ಬುಲಂದ್‌ಷಹರ್‌ನ ಅರಣ್ಯ ಪ್ರದೇಶದ ಸಮೀಪ ಗೋವಿನ ಎಲುಬುಗಳು ಬಿದ್ದಿರುವುದನ್ನು ಗಮನಿಸಿದ್ದ ಸ್ಥಳೀಯರು ಸೋಮವಾರ ಗಲಭೆ ಪ್ರಾರಂಭಿಸಿ ಪೊಲೀಸ್‌ ಹೊರಠಾಣೆ ಹಾಗೂ ಪೊಲೀಸರ ಮೇಲೆ ದಾಳಿ ಮಾಡಿದ್ದರು. ಕಲ್ಲು ತೂರಾಟ, ಬೆಂಕಿ ಹಚ್ಚುವುದು, ರಸ್ತೆ ತಡೆ ನಡೆಸಿದ್ದ ಉದ್ರಿಕ್ತ ಗುಂಪು ಇನ್‌ಸ್ಪೆಕ್ಟರ್‌ ಸುಭೋದ್‌ ಸಿಂಗ್‌ ಹತ್ಯೆಗೆ ಕಾರಣವಾಯಿತು. 

ಗಲಭೆಯಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿ ಬಜರಂಗ ದಳದ ಯೋಗೇಶ್‌ ರಾಜ್‌ ಕಾಣೆಯಾಗಿದ್ದು, ಇತರೆ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಗೋಹತ್ಯೆಗೆ ಸಂಬಂಧಿಸಿದಂತೆ ಈತ ಪ್ರತ್ಯೇಕ ದೂರು ದಾಖಲಿಸಿದ್ದ, ಪೊಲೀಸರು ಈತನನ್ನು ಸಾಮಾಧಾನ ಪಡಿಸುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ. 

ಸತ್ತ ಪ್ರಾಣಿಗಳ ಎಲುಬುಗಳನ್ನು ಟ್ರಕ್‌ಗಳಲ್ಲಿ ಸಂಗ್ರಹಿಸಿ ತಂದು ರಸ್ತೆ ತಡೆ ನಡೆಸುತ್ತಿದ್ದವರನ್ನು ತೆರವುಗೊಳಿಸಲು ಪೊಲೀಸರು ಮುಂದಾದಾಗ, ಗುಂಪು ಪೊಲೀಸರ ಮೇಲೆಯೇ ದಾಳಿ ನಡೆಸಿದೆ. ಪೊಲೀಸರನ್ನು ನೂರಾರು ಮಂದಿ ಅಟ್ಟಾಡಿಸಿ ಕಲ್ಲುಗಳನ್ನು ತೂರಿದ್ದಾರೆ, ಹೊರಠಾಣೆ ಮತ್ತು ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ. ’ಗೋಹತ್ಯೆಗೆ ಸಂಬಂಧಿಸಿದ ದೂರುಗಳಿಗೆ ಪೊಲೀಸರು ಯಾವುದೇ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ’ ಎಂದು ಬಿಜೆಪಿ ಮುಖಂಡ ದೇವೇಂದ್ರ ಲೋಧಿ ಹೇಳಿದ್ದಾರೆ. 

ಉದ್ರಿಕ್ತ ಗುಂಪನ್ನು ನಿಯಂತ್ರಿಸಲು ಮುಂದಾಗಿದ್ದ ಇನ್‌ಸ್ಪೆಕ್ಟರ್‌ ಸುಭೋದ್‌ ಕುಮಾರ್‌ ಸಿಂಗ್‌ ಅವರ ತಲೆಗೆ ಕಲ್ಲಿಂದ ಹೊಡೆತಬಿದ್ದು ತೀವ್ರವಾಗಿ ಗಾಯಗೊಂಡರು. ಅವರ ಕಾರು ಚಾಲಕ ಸುಭೋದ್‌ರನ್ನು ಕಾರಿನೊಳಗೆ ಕೂರಿಸಿ ಆಸ್ಪತ್ರೆಗೆ ಸಾಗಿಸುವ ಪ್ರಯತ್ನದಲ್ಲಿದ್ದಾಗ, ಗುಂಪು ಕಾರನ್ನು ಹಿಂಬಾಲಿಸಿ ಅಡ್ಡಗಟ್ಟಿದರು, ಇನ್‌ಸ್ಪೆಕ್ಟರ್‌ ಮೇಲೆ ಗುಂಡಿನ ದಾಳಿ ನಡೆಸಿದರು. ’ನಾನು ಪ್ರಾಣ ಉಳಿಸಿಕೊಳ್ಳಲು ಅಲ್ಲಿಂದ ಓಡಿದೆ. ಗುಂಪು ಜೀಪ್‌ ಸಮೀಪಕ್ಕೆ ಹೋದ ಬಳಿಕ ಏನು ನಡೆಸಿದರು ಎಂಬುದು ಸ್ಪಷ್ಟವಿಲ್ಲ’ ಎಂದು ಕಾರು ಚಾಲಕ ಹೇಳಿದ್ದಾರೆ.

ಗುಂಪಿನಲ್ಲೊಬ್ಬ ಚಿತ್ರೀಕರಿಸಿರುವ ವಿಡಿಯೊದಲ್ಲಿ ಕಾರಿನ ಒಳಗಿಂದ ಇನ್‌ಸ್ಪೆಕ್ಟರ್‌ ದೇಹ ಜೋತು ಬಿದ್ದಿರುವುದನ್ನು ಕಾಣಬಹುದಾಗಿದೆ. ಹಲವು ಸುತ್ತುಗಳ ಗುಂಡಿನ ಮೊರೆತ ಕೇಳುತ್ತಿದ್ದಂತೆ ಗುಂಪು ಅಲ್ಲಿಂದ ಚದುರುತ್ತ, ’ಗೋಲಿ ಮಾರೋ’ ಎಂದು ಕೂಗಿರುವುದನ್ನು ಗಮನಿಸಬಹುದು. 

ಸುಭೋದ್‌ ಸಿಂಗ್‌ ಅವರ ಎಡ ಹುಬ್ಬಿನ ಕೆಳಗೆ ಗುಂಡು ತಗುಲಿ ಮೃತಪಟ್ಟಿರುವುದು ಶವಪರೀಕ್ಷೆಯ ವರದಿಯಿಂದ ತಿಳಿದು ಬಂದಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. ಗುಂಪಿನಲ್ಲಿ ಕೆಲವರು ಸುಭೋದ್ ಅವರ ಗನ್‌ ಹಾಗೂ ಮೊಬೈಲ್‌ ಫೋನ್‌ನ್ನು ಕಸಿದುಕೊಂಡಿದ್ದಾರೆ. ಮಂಗಳವಾರ ತಂದೆಯ ಮೃತ ದೇಹ ಕಂಡ ಸುಭೋದ್ ಅವರ ಇಬ್ಬರು ಪುತ್ರರರು ದುಃಖದ ಮಡುವಿನಲ್ಲಿ ಕುಸಿದರು. 

ಇದನ್ನೂ ಓದಿ: ಗೋಹತ್ಯೆ ಆರೋಪ: ಉತ್ತರ ಪ್ರದೇಶದಲ್ಲಿ ಗುಂಪು ಗಲಭೆ; ಇನ್‌ಸ್ಪೆಕ್ಟರ್‌, ಯುವಕ ಸಾವು

20 ವರ್ಷದ ಸ್ಥಳೀಯ ಯುವಕ ಸಹ ಗುಂಪು ಗಲಭೆಯಲ್ಲಿ ಮೃತಪಟ್ಟಿದ್ದಾನೆ. 

ಸುಭೋದ್‌ ಸಿಂಗ್‌ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ₹40 ಲಕ್ಷ ಪರಿಹಾರ ಘೋಷಿಸಿದ್ದಾರೆ. ಸುಭೋದ್ ಪಾಲಕರಿಗೆ ₹10 ಲಕ್ಷ ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡುವ ಭರವಸೆ ನೀಡಿದ್ದಾರೆ. 

ಪೊಲೀಸರು ಸುಭೋದ್‌ ಒಬ್ಬರನ್ನೇ ಬಿಟ್ಟು ದೂರ ಹೋಗಿದ್ದು ಏಕೆ? ಎಂಬುದರ ಬಗ್ಗೆ ತನಿಖೆಗೆ ವಿಶೇಷ ತನಿಖಾ ತಂಡ ನಿಯೋಜಿಸಲಾಗಿದೆ. ಈ ಪ್ರಕರಣದಲ್ಲಿ ದಾಖಲಾಗಿರುವ ಆರೋಪಿಗಳ ಪೈಕಿ 27 ಮಂದಿಯ ಹೆಸರು ಪತ್ತೆಯಾಗಿದ್ದು, 60 ಮಂದಿ ಅನಾಮಿಕರಿದ್ದಾರೆ. 

’ಗೋವು ನಮ್ಮ ತಾಯಿ ಸಮ. ಅದನ್ನು ನಾನು ಒಪ್ಪುತ್ತೇನೆ. ಆಕೆಗಾಗಿ ನನ್ನ ಸಹೋದರ ತನ್ನ ಪ್ರಾಣವನ್ನೇ ನೀಡಿದ್ದಾನೆ. ಮುಖ್ಯಮಂತ್ರಿ ಸದಾ ಗೋವು..ಗೋವು..ಗೋವು.. ಎಂದು ಪಠಿಸುತ್ತಿರುತ್ತಾರೆ. ಅವರೇ ಏಕೆ ಗೋವು ರಕ್ಷಣೆಗೆ ಬರಬಾರದು?’ ಎಂದು ಸುಭೋದ್‌ ಅವರ ಸಹೋದರಿ ಸುನಿತಾ ಸಿಂಗ್‌ ಕುಪಿತರಾಗಿ ಪ್ರಶ್ನಿಸಿದ್ದಾರೆ. 

ಇದನ್ನೂ ಓದಿ: ಪೊಲೀಸ್ ಅಧಿಕಾರಿ ಸುಬೋಧ್ ಸಿಂಗ್ ಮೇಲೆ ದಾಳಿ ಪೂರ್ವಯೋಜಿತ ಕೃತ್ಯ?

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !