ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸ ಮಾಡದ ಇವಿಎಂ: ಚಂದ್ರಬಾಬು ನಾಯ್ಡು ದೂರು

Last Updated 13 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ಗುರುವಾರ ನಡೆದ ಮೊದಲ ಹಂತದ ಮತದಾನದ ಸಂದರ್ಭದಲ್ಲಿ ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಸಮರ್ಪಕವಾಗಿ ಕಾರ್ಯ ನಿರ್ವಹಿಸಿಲ್ಲ ಎಂದು ಆರೋಪಿಸಿ ತೆಲುಗುದೇಶಂ ಪಕ್ಷದ ಮುಖ್ಯಸ್ಥ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಆಯುಕ್ತ ಸುನೀಲ್ ಅರೋರಾ ಅವರನ್ನು ಶನಿವಾರ ಭೇಟಿಯಾದ ನಾಯ್ಡು, ಈ ಸಂಬಂಧ ಮನವಿ ಪತ್ರವೊಂದನ್ನು ಸಲ್ಲಿಸಿದರು. ಚುನಾವಣೆಯ ಸಂದರ್ಭದಲ್ಲಿ ನಡೆಯಬಹುದಾದ ಹಿಂಸಾಚಾರವನ್ನು ತಡೆಗಟ್ಟಲು ಸೂಕ್ತ ಬಂದೋಬಸ್ತ್ ಸಹ ಮಾಡಿಲ್ಲ ಎಂದೂ ಅವರು ಆರೋಪಿಸಿದ್ದಾರೆ.

‘ಇವಿಎಂಗಳು ಸರಿಯಾಗಿ ಕೆಲಸ ಮಾಡದ ಕಾರಣ ಸಾಕಷ್ಟು ಕಡೆ ಮತದಾನ ವಿಳಂಬವಾಗಿದೆ. ಕೆಲವೆಡೆ 2ರಿಂದ 6 ಗಂಟೆಗಳಷ್ಟು ತಡವಾಗಿದೆ. ಹೀಗಾಗಿ ಜನರು ಮತ ಚಲಾಯಿಸದೇ ಮನೆಗೆ ಹೋಗುವಂತಾಯಿತು’ ಎಂದು ನಾಯ್ಡು ಆರೋಪಿಸಿದ್ದಾರೆ.

ನಿಗದಿತ ಸಮಯಕ್ಕಿಂತ ಎಷ್ಟೋ ಗಂಟೆ ತಡವಾಗಿ ಮತದಾನ ಆರಂಭವಾದ 618 ಮತಗಟ್ಟೆಗಳ ಚುನಾವಣೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿರುವ ನಾಯ್ಡು, ಇವಿಎಂ ಕೆಟ್ಟಿದ್ದರಿಂದ ರಾಜ್ಯದ ಮುಖ್ಯ ಚುನಾವಣಾ ಆಯುಕ್ತರೇ ಮತದಾನ ಮಾಡಲು ಸಮಸ್ಯೆಯಾಯಿತು ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ. ಚುನಾವಣೆಯ ಪಾವಿತ್ರ್ಯವನ್ನು ಮರಳಿ ಸ್ಥಾಪಿಸಲು ಮತಪತ್ರ ವ್ಯವಸ್ಥೆಯನ್ನು ಜಾರಿಗೊಳಿಸುವಂತೆಯೂ ಅವರು ಆಗ್ರಹಿಸಿದ್ದಾರೆ.

ಚುನಾವಣಾ ಪೂರ್ವದಲ್ಲಿ ಅಧಿಕಾರಿಗಳ ವರ್ಗಾವಣೆ ಮಾಡಿದ್ದನ್ನು ಪ್ರಶ್ನಿಸಿರುವ ಅವರು, ಸಾಂವಿಧಾನಿಕ ರೀತಿಯಲ್ಲಿ ಚುನಾವಣೆ ನಡೆಸಲು ಆಯೋಗ ವಿಫಲವಾಗಿದ್ದು, ಇದು ದೇಶದ ಪ್ರಜಾಪ್ರಭುತ್ವಕ್ಕೆ ಮಾರಕ ಎಂದಿದ್ದಾರೆ.

‘ಮತದಾನಕ್ಕೆ ಕೆಲವೇ ದಿನಗಳಿರುವಾಗ ಸರ್ಕಾರದ ಮುಖ್ಯಕಾರ್ಯದರ್ಶಿಯನ್ನು ವರ್ಗಾವಣೆ ಮಾಡಿದ್ದು ಸರಿಯಲ್ಲ. ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ದೂರುಗಳನ್ನು ಆಧರಿಸಿ, ಅಧಿಕಾರಿಗಳಿಂದ ವಿವರಣೆಯನ್ನೂ ಕೇಳದೇ ವರ್ಗಾಯಿಸಲಾಗಿದೆ. ಚುನಾವಣಾ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಇಂತಹ ಹೀನ ಕೃತ್ಯಕ್ಕೆ ಕೈಹಾಕಲಾಗಿದೆ’ ಎಂದು ಚಂದ್ರಬಾಬು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT