ನವದೆಹಲಿ: ಶಿಮ್ಲಾದ ಕೋಟ್‌ಖಾಯಿನಲ್ಲಿ ಅಪ್ರಾಪ್ತ ವಯಸ್ಸಿನ ಶಾಲಾ ಬಾಲಕಿ ಮೇಲೆ ನಡೆದಿದ್ದ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎನ್‌ಎ ಸಾಮ್ಯತೆಯಿಂದ 25 ವರ್ಷದ ಆರೋಪಿಯನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
‘ಆರೋಪಿಯು ಸೌದೆ ಕಡಿಯುವ ವೃತ್ತಿಯವನಾಗಿದ್ದು, ಈ ಹಿಂದೆ ಹಲವು ಅಪರಾಧಗಳನ್ನು ಎಸಗಿದ್ದ. ಅಪರಾಧ ನಡೆದಿದ್ದ ಮತ್ತು ಮೃತ ಬಾಲಕಿಯ ದೇಹದಲ್ಲಿ ದೊರೆತ ಜೈವಿಕ ಮಾದರಿಯು ಆರೋಪಿಯ ಡಿಎನ್‌ಎ ಮಾದರಿಯೊಂದಿಗೆ ಸಾಮ್ಯತೆ ಹೊಂದಿದ ಆಧಾರದ ಮೇಲೆ ಬಂಧಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಜುಲೈನಲ್ಲಿ ಬಾಲಕಿ ಮೇಲೆ ನಡೆದಿದ್ದ ಭೀಕರ ಅತ್ಯಾಚಾರ ಹಾಗೂ ಕೊಲೆಗೆ ಸಂಬಂಧಿಸಿದಂತೆ ರಾಜ್ಯ ಪೊಲೀಸರು ಐವರನ್ನು ಬಂಧಿಸಿದ್ದರು. ಅವರ ವಿರುದ್ಧ ಯಾವುದೇ ಸಾಕ್ಷ್ಯಗಳು ಸಿಕ್ಕಿರಲಿಲ್ಲ. ಇದರಿಂದ ಅಮಾಯಕರನ್ನು ಬಂಧಿಸಲಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಈ ಪ್ರಕರಣ ತೀವ್ರ ಆಕ್ರೋಶಕ್ಕೆ ಗುರಿಯಾಗಿತ್ತು. ಬಳಿಕ ಪ್ರಕರಣದ ತನಿಖೆಯನ್ನು ಹಿಂದಿನ ಕಾಂಗ್ರೆಸ್ ಸರ್ಕಾರ ಸಿಬಿಐಗೆ ವಹಿಸಿತ್ತು.
ಕಳೆದ 9 ತಿಂಗಳಿನಿಂದ ಅಪರಾಧ ಕೃತ್ಯ ಊರಿನಲ್ಲೇ ಬೀಡುಬಿಟ್ಟಿದ್ದ ಸಿಬಿಐನ 40 ಅಧಿಕಾರಿಗಳ ತಂಡವು ಸ್ಥಳೀಯರ ನೆರವಿನಿಂದ ಸಾಕ್ಷ್ಯ ಕಲೆಹಾಕಿತ್ತು. ‘ಅತ್ಯಂತ ಸೂಕ್ಷ್ಮ ಹಾಗೂ ಸವಾಲಿನ ಪ್ರಕರಣವನ್ನು ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ನೆರವಿನಿಂದ ಬಗೆಹರಿಸಲಾಗಿದೆ’ ಸಿಬಿಐ ವಕ್ತಾರ ಅಭಿಷೇಕ್ ದಯಾಳ್ ತಿಳಿಸಿದ್ದಾರೆ.
ಜುಲೈ 4ರಂದು ಒಂಬತ್ತನೇ ತರಗತಿ ವಿದ್ಯಾರ್ಥಿನಿ ಶಾಲೆ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಆರೋಪಿ ಅನಿಲ್‌ಕುಮಾರ್ ಆಕೆಯನ್ನು ಅತ್ಯಾಚಾರವೆಸಗಿ ಕೊಲೆಗೈದಿದ್ದ. ಎರಡು ದಿನಗಳ ಬಳಿಕ ಬಾಲಕಿಯ ಮೃತದೇಹವು ಹಲಿಯಾಲ್ ಅರಣ್ಯದಲ್ಲಿ ಪತ್ತೆಯಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.