ಗೋಹತ್ಯೆ ಗಲಭೆ: ಸುಬೋಧ್ ಸಿಂಗ್ ಹತ್ಯೆಯ ಹಿಂದೆ ಪಿತೂರಿ?

ಲಖನೌ: ಗೋಹತ್ಯೆ ನಡೆದಿದೆ ಎಂದು ಆರೋಪಿಸಿ ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯ ಚಿಂಗರ್‌ವಾಟಿ ಪೊಲೀಸ್ ಹೊರಠಾಣೆ ಮೇಲೆ ನಡೆದ ಗುಂಪು ದಾಳಿ ಒಳಸಂಚು ಎಂದು ಉತ್ತರ ಪ್ರದೇಶ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.
ಈ ಗುಂಪು ದಾಳಿಯಲ್ಲಿ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ ಸಾವಿಗೀಡಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
ಬುಲಂದ್‌ಶಹರ್ ಜಿಲ್ಲೆಯ ಕಬ್ಬಿನ ಗದ್ದೆಯೊಂದರಲ್ಲಿ ದನದ ಕಳೇಬರ ಸಿಕ್ಕಿದ್ದು ಅದು ಸಂಘರ್ಷಕ್ಕೆ ಕಾರಣವಾಗಿತ್ತು. ಸುಮಾರು 400ರಷ್ಟು ಮಂದಿ ಸಂಘರ್ಷದಲ್ಲೇರ್ಪಟ್ಟಾಗ ಅದನ್ನು ಚದುರಿಸಲು ಸುಬೋಧ್ ಸಿಂಗ್ ಹೋಗಿದ್ದರು.
ಜನರ ಗುಂಪನ್ನು ಚದುರಿಸುತ್ತಿದ್ದಾಗ ಜನರು ಕಲ್ಲು ತೂರಾಟ ಮಾಡಿದ್ದಾರೆ. ಈ ಮಧ್ಯೆ ಗುಂಡು ತಗುಲಿ ಸುಬೋಧ್ ಸಿಂಗ್ ಸಾವಿಗೀಡಾಗಿದ್ದಾರೆ. ಈ ಸಂಘರ್ಷದಲ್ಲಿ 20ರ ಹರೆಯದ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದ.
ಪ್ರಕರಣದ ಬಗ್ಗೆ ಮಾತನಾಡಿದ ಉತ್ತರ ಪ್ರದೇಶ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಸಿಂಗ್, ಬಾಬರಿ ಮಸೀದಿ ಧ್ವಂಸಗೀಡಾದ ದಿನದ ವಾರ್ಷಿಕಕ್ಕೆ ಮೂರು ದಿನ ಮುನ್ನ ಹಸುವಿನ ಕಳೇಬರ ಗದ್ದೆಯಲ್ಲಿ ಹೇಗೆ ಬಂತು ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ಗೋಹಂತಕರ ಮತ್ತು ಸಂಘರ್ಷದಲ್ಲೇರ್ಪಟ್ಟವರ ವಿರುದ್ಧ ಎರಡು ಎಫ್‌ಐಆರ್ ದಾಖಲಿಸಲಾಗಿದೆ.
ಎಲ್ಲಿ ಹಸುವಿನ ಹತ್ಯೆಯಾಗಿದೆ ಮತ್ತು ಅದರ ಕಳೇಬರ ಗದ್ದೆಯಲ್ಲಿ ಹೇಗೆ ಬಂತು? ಡಿಸೆಂಬರ್ 3ನೇ ತಾರೀಖಿನಿಂದೇ ಯಾಕೆ ಹೀಗಾಯಿತು? ಎಂಬುದರ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಪಿಟಿಐ ಜತೆ ಮಾತನಾಡಿದ ಸಿಂಗ್ ಹೇಳಿದ್ದಾರೆ.
ಬಾಬರಿ ಮಸೀದಿ ಧ್ವಂಸದ ವಾರ್ಷಿಕ ದಿನಾಚರಣೆ ಹೊತ್ತಲ್ಲೇ ಕೋಮು ಸಂಘರ್ಷ ಉಂಟುಮಾಡುವ ಹುನ್ನಾರ ಇದಾಗಿತ್ತೇ? ಎಂಬ ಪ್ರಶ್ನೆಗೆ ಉತ್ತರಿಸಿದ ಸಿಂಗ್, ನಾವು ಎಲ್ಲ ಕೋನಗಳಿಂದಲೂ ನೋಡುತ್ತಿದ್ದೇವೆ. ಹಸುವಿನ ಕಳೇಬರ ಹಾಕಿರುವ ಜಾಗ ಮತ್ತು ಹಾಕಿದ ಸಮಯವನ್ನೂ ಪರಿಗಣಿಸುತ್ತಿದ್ದೇವೆ., ಸ್ಥಳೀಯ ಪೊಲೀಸರು ಸರಿಯಾದ ಸಮಯಕ್ಕೆ ತಲುಪದೇ ಇರುತ್ತಿದ್ದರೆ ಅಲ್ಲೊಂದು ಕೋಮು ಗಲಭೆ ನಡೆಯುತ್ತಿತ್ತು. ಸಂಘರ್ಷವೇರ್ಪಟ್ಟ ಸ್ಥಳದಿಂದ 40 ಕಿಮೀ ದೂರದಲ್ಲಿ ಮುಸ್ಲಿಮರ ಸಭೆ ತಬ್ಲಿಜಿ ಲಜೆತ್ಮಾ ನಡೆಯುತ್ತಿತ್ತು. ಅಲ್ಲಿ ಲಕ್ಷಗಟ್ಟಲೆ ಮಂದಿ ಸೇರಿದ್ದರು. ಡಿಸೆಂಬರ್ 2ರಂದು ಈ ಸಭೆ ಮುಗಿದಿದ್ದರೂ, ಇಲ್ಲಿ ಘಟನೆ ನಡೆದ ದಿನವಾದ ಡಿಸೆಂಬರ್ 3 ರಂದು ಅಲ್ಲಿ 6 ಲಕ್ಷಕ್ಕಿಂತಲೂ ಹೆಚ್ಚು ಮುಸ್ಲಿಮರು ಇದ್ದರು ಎಂದಿದ್ದಾರೆ ಸಿಂಗ್.
2015ರಲ್ಲಿ ಗುಂಪು ದಾಳಿಗೊಳಗಾದ ಮೊಹಮ್ಮದ್ ಇಖ್ಲಾಕ್ ಹತ್ಯೆ ಪ್ರಕರಣದ ತನಿಖೆಯನ್ನು ಸುಬೋಧ್ ಕುಮಾರ್ ಸಿಂಗ್ ಅವರು ನಡೆಸುತ್ತಿದ್ದರು. ಹಾಗಾಗಿ ಸಿಂಗ್ ಅವರ ಹತ್ಯೆಯಲ್ಲಿ ಪಿತೂರಿ ನಡೆದಿದೆ ಎಂದು ಸಿಂಗ್ ಅವರ ಸಹೋದರಿ ದೂರಿದ್ದರು.
ಏತನ್ಮಧ್ಯೆ, ಸಿಂಗ್ ಹತ್ಯೆಯ ಹಿಂದೆ ಪಿತೂರಿ ಇದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.
ಇದೊಂದು ಪಿತೂರಿ. ಗೋಹತ್ಯೆಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಯೋಗಿ ಹೇಳಿದ್ದಾರೆ.
ಇದನ್ನೂ ಓದಿ
ಗೋ ಹಂತಕರ ಬಂಧನಕ್ಕೆ ಆದೇಶಿಸಿ, ಪೊಲೀಸ್ ಅಧಿಕಾರಿ ವಿಚಾರದಲ್ಲಿ ಮೌನ ತಳೆದ ಯೋಗಿ
ಗೋಹತ್ಯೆ ಆರೋಪ: ಉತ್ತರ ಪ್ರದೇಶದಲ್ಲಿ ಗುಂಪು ಗಲಭೆ; ಇನ್ಸ್ಪೆಕ್ಟರ್, ಯುವಕ ಸಾವು
ಗೋಹತ್ಯೆ ಆರೋಪ, ಗುಂಪು ಗಲಭೆ: ಪೊಲೀಸ್ ಅಧಿಕಾರಿ ಹತ್ಯೆ ಸಂಬಂಧ ನಾಲ್ವರ ಬಂಧನ
ಪೊಲೀಸ್ ಅಧಿಕಾರಿ ಸುಬೋಧ್ ಸಿಂಗ್ ಮೇಲೆ ದಾಳಿ ಪೂರ್ವಯೋಜಿತ ಕೃತ್ಯ?
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.