ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಂಟೀನ್‌ ವೇಟರ್‌ ಹುದ್ದೆಗೆ ಪದವೀಧರರ ಆಯ್ಕೆ !

ಅಗತ್ಯವಿರುವ ವಿದ್ಯಾರ್ಹತೆ–4ನೇ ತರಗತಿ, ಅರ್ಜಿ ಸಲ್ಲಿಸಿದವರು–7 ಸಾವಿರ ಅಭ್ಯರ್ಥಿಗಳು
Last Updated 18 ಜನವರಿ 2019, 11:45 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದ ಸಚಿವಾಲಯದ ಕ್ಯಾಂಟೀನ್‌ಗಳಲ್ಲಿ ಖಾಲಿ ಇದ್ದ 13 ವೇಟರ್‌ ಹುದ್ದೆಗಳಿಗೆ 7 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. 4ನೇ ತರಗತಿ ಮಟ್ಟದ ವಿದ್ಯಾರ್ಹತೆ ಹೊಂದಿರುವ ಈ ಹುದ್ದೆಗೆ ಅರ್ಜಿ ಸಲ್ಲಿಸಿದ್ದವರಲ್ಲಿ ಪದವೀಧರರೇ ಹೆಚ್ಚು !

‘ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಕಳೆದ ಡಿಸೆಂಬರ್‌ 31ರಂದು ಅಭ್ಯರ್ಥಿಗಳು 100 ಅಂಕಗಳ ಲಿಖಿತ ಪರೀಕ್ಷೆ ಬರೆದಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘13 ಹುದ್ದೆಗಳಿಗೆ ಎಂಟು ಪುರುಷರು, ಐವರು ಮಹಿಳೆಯರು ಆಯ್ಕೆಯಾಗಿದ್ದಾರೆ. ಈ ಪೈಕಿ, 12 ಜನ ಪದವೀಧರರಾಗಿದ್ದರೆ, ಮತ್ತೊಬ್ಬರು ದ್ವಿತೀಯ ಪಿಯು ಉತ್ತೀರ್ಣರಾಗಿದ್ದಾರೆ. ಇವರೆಲ್ಲರೂ 25ರಿಂದ 27 ವರ್ಷ ವಯಸ್ಸಿನವರು ಎಂದು ಅವರು ಹೇಳಿದ್ದಾರೆ.

ಪದವೀಧರರನ್ನು ಕ್ಯಾಂಟೀನ್‌ ವೇಟರ್‌ ಹುದ್ದೆಗೆ ನೇಮಿಸಿಕೊಂಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಮಹಾರಾಷ್ಟ್ರ ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಧನಂಜಯ್‌ ಮುಂಡೆ, ‘ಪದವೀಧರರಿಂದ ವೇಟರ್‌ ಕೆಲಸ ಮಾಡಿಸಿಕೊಳ್ಳುವುದಕ್ಕೆ ಮಂತ್ರಿಗಳು ಮತ್ತು ಅಧಿಕಾರಿಗಳಿಗೆ ನಾಚಿಕೆಯಾಗಬೇಕು’ ಎಂದು ಟೀಕಿಸಿದ್ದಾರೆ.

‘ದೇಶದಲ್ಲಿ ಮತ್ತು ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಪರಿಸ್ಥಿತಿ ಹೇಗಿದೆ ಎಂಬುದಕ್ಕೆ ಈ ಬೆಳವಣಿಗೆ ಸಾಕ್ಷಿಯಾಗಿದೆ. ನಾಲ್ಕನೇ ತರಗತಿ ವಿದ್ಯಾರ್ಹತೆಯ ಹುದ್ದೆಯನ್ನು ಡಿಗ್ರಿ ಆದವರು ಮಾಡಬೇಕಾಗಿರುವುದು ನಮ್ಮ ದುರದೃಷ್ಟ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

‘ತಮ್ಮ ಅವಧಿಯಲ್ಲಿ ಎರಡು ಕೋಟಿಗೂ ಹೆಚ್ಚು ಜನರಿಗೆ ಉದ್ಯೋಗ ಒದಗಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಆ ಭರವಸೆ ಈಡೇರಿದೆಯೇ’ ಎಂದು ಪ್ರಶ್ನಿಸಿರುವ ಮುಂಡೆ, ‘ಇತ್ತೀಚೆಗೆ ಮಹಾರಾಷ್ಟ್ರದ ಪೊಲೀಸ್‌ ಇಲಾಖೆಯಲ್ಲಿ ಖಾಲಿ ಇದ್ದ 852 ಹುದ್ದೆಗಳಿಗೆ 10.5 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ದೇಶದಲ್ಲಿ ರೈಲ್ವೆ ಸಚಿವಾಲಯದಲ್ಲಿ ಖಾಲಿ ಇದ್ದ 10 ಸಾವಿರ ಹುದ್ದೆಗಳಿಗೆ ಒಂದು ಕೋಟಿಗೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಹಾಕಿದ್ದರು’ ಎಂದು ಅವರು ಹೇಳಿದರು.

‘ನೋಟು ರದ್ದು ಹಾಗೂ ಜಿಎಸ್‌ಟಿಯಂತಹ ನಿರ್ಧಾರಗಳಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ನಾಶವಾಗಿ ಹೋಗಿವೆ. 2018ರಲ್ಲಿ ಒಂದು ಕೋಟಿಗೂ ಹೆಚ್ಚು ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಈ ಪೈಕಿ 65 ಲಕ್ಷ ಮಹಿಳೆಯರೇ ಇದ್ದಾರೆ. ಮೇಕ್‌ ಇನ್‌ ಇಂಡಿಯಾ, ಮೇಕ್‌ ಇನ್‌ ಮಹಾರಾಷ್ಟ್ರ, ಸ್ಕಿಲ್‌ ಇಂಡಿಯಾದಂತಹ ಕಾರ್ಯಕ್ರಮಗಳು ಸಂಪೂರ್ಣ ವಿಫಲವಾಗಿವೆ’ ಎಂದು ಧನಂಜಯ್‌ ಮುಂಡೆ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT