‘ಕಾವೇರಿ ಮಲಿನಕ್ಕೆ ಕರ್ನಾಟಕ ಹೊಣೆಯಲ್ಲ’

7
ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರದ ಹೇಳಿಕೆ

‘ಕಾವೇರಿ ಮಲಿನಕ್ಕೆ ಕರ್ನಾಟಕ ಹೊಣೆಯಲ್ಲ’

Published:
Updated:

ನವದೆಹಲಿ: ‘ನದಿ ಪರಿಸರಕ್ಕೆ ಧಕ್ಕೆ ಉಂಟಾಗುವುದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಕಾವೇರಿ ಮತ್ತು ದಕ್ಷಿಣ ಪಿನಾಕಿನಿ ನದಿಗಳು ತಮಿಳುನಾಡಿನಲ್ಲೇ ಹೆಚ್ಚು ಮಲಿನಗೊಂಡಿವೆ’ ಎಂದು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

‘ಕರ್ನಾಟಕದ ಧೋರಣೆಯಿಂದಾಗಿ ಕಾವೇರಿ, ಅರ್ಕಾವತಿ ಮತ್ತು ದಕ್ಷಿಣ ಪಿನಾಕಿನಿ ನದಿಗಳು ಮಲಿನಗೊಂಡಿವೆ’ ಎಂದು ದೂರಿ ತಮಿಳುನಾಡು ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು ಈ ಹೇಳಿಕೆ ಸಲ್ಲಿಸಿದ್ದು, ‘ನದಿಗಳ ಮಾಲಿನ್ಯಕ್ಕೆ ಕರ್ನಾಟಕವನ್ನು ಹೊಣೆ ಮಾಡಕೂಡದು’ ಎಂದು ಮನವಿ ಮಾಡಿದ್ದಾರೆ.

‘ಈ ನದಿಗಳು ಮಲಿನಗೊಳ್ಳಲು ಕರ್ನಾಟಕವೇ ಕಾರಣ ಎಂಬ ತಮಿಳುನಾಡಿನ ವಾದದಲ್ಲಿ ಹುರುಳಿಲ್ಲ. ಅಲ್ಲದೆ, ಇತ್ತೀಚೆಗೆ ಸಮೀಕ್ಷೆ ನಡೆಸಿರುವ ಜಂಟಿ ಮಾಲಿನ್ಯ ನಿಯಂತ್ರಣ ಸಮಿತಿಯ ವರದಿಯಲ್ಲೂ ರಾಜ್ಯದ ಪರ ವ್ಯತಿರಿಕ್ತ ಮತ್ತು ಸಂಶಯಾಸ್ಪದ ಅಂಶಗಳು ಸೇರಿವೆ. ರಾಜ್ಯ ಸರ್ಕಾರ ಮಾಲಿನ್ಯ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ತಮಿಳುನಾಡಿನ ಅರ್ಜಿ ವಜಾಗೊಳಿಸಬೇಕು’ ಎಂದು ಕರ್ನಾಟಕ ಕೋರಿದೆ.

ಈ ಬಗ್ಗೆ ಪರಿಶೀಲಿಸಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ನೇತೃತ್ವದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಒಳಗೊಂಡ ಜಂಟಿ ಸಮಿತಿಯೊಂದನ್ನು ರಚಿಸಿದ ಸುಪ್ರೀಂ ಕೋರ್ಟ್, ತಮಿಳುನಾಡಿನ ದೂರನ್ನು ಪರಿಶೀಲಿಸುವಂತೆ ಸೂಚಿಸಿತ್ತು. 2017ರ ಸೆಪ್ಟೆಂಬರ್‌ನಿಂದ 2018ರ ಮೇ ತಿಂಗಳ ಅವಧಿಯಲ್ಲಿ ಕಾವೇರಿ, ಅರ್ಕಾವತಿ ಮತ್ತು ದಕ್ಷಿಣ ಪಿನಾಕಿನಿ ನದಿಗಳ ಪರಿಸರಕ್ಕೆ ಭೆಟಿ ನೀಡಿ ಪರಿಶೀಲನೆ ನಡೆಸಿದ್ದ ಜಂಟಿ ಸಮಿತಿಯು ಕಳೆದ ಜುಲೈನಲ್ಲಿ ಸುಪ್ರೀಂ ಕೋರ್ಟ್‌ಗೆ ವರದಿ ನೀಡಿ, ದಕ್ಷಿಣ ಪಿನಾಕಿನಿ ನದಿಯು ಸಂಪೂರ್ಣ ಮಲಿನಗೊಂಡಿದ್ದು, ಕಾವೇರಿ, ಅರ್ಕಾವತಿ ನದಿಗಳು ಮಲಿನಗೊಳ್ಳುತ್ತಿವೆ ಎಂಬ ವರದಿ ನೀಡಿತ್ತು.

ಅರ್ಕಾವತಿ ನದಿಯು ರಾಜ್ಯದ ಕನಕಪುರದ ಬಳಿ ಕಾವೇರಿ ನದಿ ಸೇರುತ್ತದೆ. ಕನಕಪುರದಿಂದ ಕೆಳಗಿರುವ ಅಜ್ಜಿಬೋರೆ ಗ್ರಾಮದ ಹತ್ತಿರ ಮಾದರಿ ಸಂಗ್ರಹ ಮಾಡಿಕೊಳ್ಳಲಾಗಿದೆ. ಸ್ವಲ್ಪ ಪ್ರಮಾಣದಲ್ಲಿ ಕರ್ನಾಟಕ ನದಿಯ ಮಲಿನಕಲ್ಕೆ ಕಾರಣವಾಗಿದ್ದರೂ, ಸಂಪೂರ್ಣ ಹಾನಿ ಮಾಡಿಲ್ಲ. ದಕ್ಷಿಣ ಪಿನಾಕಿನಿ ನದಿಯ ವಿಷಯದಲ್ಲೂ ತಮಿಳುನಾಡಿಗೆ ರಾಜ್ಯದಿಂದ ತೊಂದರೆ ಆಗಿಲ್ಲ ಎಂದು ಕರ್ನಾಟಕ ತಿಳಿಸಿದೆ.

ನ್ಯಾಯಮೂರ್ತಿಗಳಾದ ಎಸ್.ಎ.ಬೋಬಡೆ ಹಾಗೂ ಎಲ್‌. ನಾಗೇಶ್ವರ ರಾವ್ ಅವರಿದ್ದ ಪೀಠದೆದುರು ರಾಜ್ಯದ ಪರ ವಕೀಲ ವಿ.ಎನ್.ರಘುಪತಿ ಈ ಹೇಳಿಕೆ ಸಲ್ಲಿಸಿದರು. ಕರ್ನಾಟಕದ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಲು ತಮಿಳುನಾಡಿಗೆ ಎರಡು ವಾರಗಳ ಸಮಯಾವಕಾಶ ನೀಡಿದ ನ್ಯಾಯಪೀಠ ಪ್ರಕರಣದ ವಿಚಾರಣೆಯನ್ನು ಮುಂದೂಡಿತು.

ಬರಹ ಇಷ್ಟವಾಯಿತೆ?

 • 20

  Happy
 • 2

  Amused
 • 2

  Sad
 • 1

  Frustrated
 • 2

  Angry

Comments:

0 comments

Write the first review for this !