ಸಚಿವ, ಡಿಜಿಪಿ ಮನೆಯಲ್ಲಿ ಸಿಬಿಐ ಶೋಧ

7
ತಮಿಳುನಾಡಿನ ಹಲವರಿಗೆ ಗುಟ್ಕಾ ಹಗರಣದ ಉರುಳು?

ಸಚಿವ, ಡಿಜಿಪಿ ಮನೆಯಲ್ಲಿ ಸಿಬಿಐ ಶೋಧ

Published:
Updated:

ಚೆನ್ನೈ: ತಮಿಳುನಾಡು ಆರೋಗ್ಯ ಸಚಿವ ಸಿ.ವಿಜಯಭಾಸ್ಕರ್‌ ಮತ್ತು ಪೊಲೀಸ್‌ ಮಹಾ ನಿರ್ದೇಶಕ ಟಿ.ಕೆ. ರಾಜೇಂದ್ರನ್‌ ಅವರ ನಿವಾಸ ಮತ್ತು ಅವರಿಗೆ ಸೇರಿದ ಇತರ ಸ್ಥಳಗಳಲ್ಲಿ ಸಿಬಿಐ ಅಧಿಕಾರಿಗಳು ಬುಧವಾರ ಶೋಧ ನಡೆಸಿದ್ದಾರೆ. ಬಹುಕೋಟಿ ಗುಟ್ಕಾ ಹಗರಣಕ್ಕೆ ಸಂಬಂಧಿಸಿ ಈ ಶೋಧ ನಡೆದಿದೆ.

ನಿವೃತ್ತ ಐಪಿಎಸ್‌ ಅಧಿಕಾರಿ ಎಸ್.ಜಾರ್ಜ್‌ ಮತ್ತು ಎಐಎಡಿಎಂಕೆ ಮುಖಂಡ ಮತ್ತು ಮಾಜಿ ಸಚಿವರೊಬ್ಬರ ನಿವಾಸ ಸೇರಿ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ಹುಡುಕಾಟ ನಡೆದಿದೆ. 

ಗುಟ್ಕಾ ಹಗರಣದ ಬಗ್ಗೆ ತಮಿಳುನಾಡಿನ ಜಾಗೃತ ಮತ್ತು ಭ್ರಷ್ಟಾಚಾರ ತಡೆ ನಿರ್ದೇಶನಾಲಯವು (ಡಿವಿಎಸಿ) ತನಿಖೆ ನಡೆಸುತ್ತಿತ್ತು. ಮದ್ರಾಸ್‌ ಹೈಕೋರ್ಟ್‌ ನಿರ್ದೇಶನದಂತೆ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲಾಗಿದೆ. ಡಿಎಂಕೆ ಶಾಸಕ ಅನ್ಬಳಗನ್‌ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ್ದ ಮದ್ರಾಸ್‌ ಹೈಕೋರ್ಟ್‌ ಈ ನಿರ್ದೇಶನ ನೀಡಿತ್ತು. 

ಎಂಡಿಎಂ ಗುಟ್ಕಾ ಕಂಪನಿಯ ಮಾಲೀಕ ಮಾಧವ ರಾವ್‌ ಅವರ ಮನೆಯಲ್ಲಿ 2016ರ ಜುಲೈನಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಶೋಧ ನಡೆಸಿದ್ದಾಗ ಡೈರಿಯೊಂದು ಪತ್ತೆಯಾಗಿತ್ತು. ಇದರಲ್ಲಿ ವಿಜಯಭಾಸ್ಕರ್‌, ರಾಜೇಂದ್ರನ್ ಮತ್ತು ಜಾರ್ಜ್‌ ಅವರಿಗೆ ನೀಡಿದ್ದ ಲಂಚದ ಮಾಹಿತಿ ಇತ್ತು ಎಂದು ಹೇಳಲಾಗಿತ್ತು. ಗುಟ್ಕಾ ಮಾರಾಟಕ್ಕೆ ನಿಷೇಧ ಇದ್ದರೂ ಮಾರಾಟಕ್ಕೆ ಅವಕಾಶ ಕೊಟ್ಟದ್ದಕಾಗಿ ಈ ಹಣ ನೀಡಲಾಗಿದೆ ಎಂದು ಆರೋಪಿಸಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ್ದ ಡಿವಿಎಸಿ, ಕೆಳಹಂತದ ಕೆಲವು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು. ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಕೋರಿ ಅನ್ಬಳಗನ್‌ ಅವರು ಮದ್ರಾಸ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ತನಿಖೆಯನ್ನು ಸಿಬಿಐಗೆ ಒಪ್ಪಿಸುವುದನ್ನು ತಮಿಳುನಾಡು ಸರ್ಕಾರ ಬಲವಾಗಿ ವಿರೋಧಿಸಿತ್ತು. 

ಭೂಗತ ಗುಟ್ಕಾ ವ್ಯವಹಾರವು ಸಮಾಜದ ವಿರುದ್ಧ ಎಸಗುತ್ತಿರುವ ಅಪರಾಧವಾಗಿದೆ. ಹಾಗಾಗಿ ಇದು ಸಿಬಿಐ ತನಿಖೆಗೆ ಅರ್ಹವಾದ ಪ್ರಕರಣ ಎಂದು ಇದೇ ಏಪ್ರಿಲ್‌ 26ರಂದು ಹೈಕೋರ್ಟ್‌ ಆದೇಶ ನೀಡಿತ್ತು. 

ಮಾಧವ ರಾವ್‌ ಅವರನ್ನು ಸಿಬಿಐ ಕಳೆದ ವಾರ ವಿಚಾರಣೆಗೆ ಒಳಪಡಿಸಿತ್ತು. ಅವರು ಕೊಟ್ಟ ಸುಳಿವುಗಳ ಆಧಾರದಲ್ಲಿ ಬುಧವಾರದ ಶೋಧ ಕಾರ್ಯಾಚರಣೆ ನಡೆದಿದೆ ಎನ್ನಲಾಗಿದೆ. 

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !