ಯುಜಿಸಿ ಬದಲು ರಾಷ್ಟ್ರೀಯ ಶಿಕ್ಷಣ ಆಯೋಗ

7
ಇತಿಹಾಸ ಸೇರಲಿರುವ ವಿಶ್ವವಿದ್ಯಾಲಯ ಅನುದಾನ ಆಯೋಗ: ಹೊಸ ಮಸೂದೆಯ ಕರಡು ಸಿದ್ಧ

ಯುಜಿಸಿ ಬದಲು ರಾಷ್ಟ್ರೀಯ ಶಿಕ್ಷಣ ಆಯೋಗ

Published:
Updated:
ಯುಜಿಸಿ

ನವದೆಹಲಿ: ಶಿಕ್ಷಣ ಕ್ಷೇತ್ರ ನಿಯಂತ್ರಣಕ್ಕೆ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಬದಲಿಗೆ ಹೊಸ ಸಂಸ್ಥೆಯನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ನಿಯಮಗಳನ್ನು ಅನುಸರಿಸುವಂತೆ ಆದೇಶಿಸುವ ಮತ್ತು ಕಳಪೆ ಗುಣಮಟ್ಟದ ಹಾಗೂ ನಕಲಿ ಸಂಸ್ಥೆಗಳನ್ನು ಮುಚ್ಚಿಸುವ ಅಧಿಕಾರವನ್ನು ಪ್ರಸ್ತಾವಿತ ಸಂಸ್ಥೆಗೆ ನೀಡಲು ಉದ್ದೇಶಿಸಲಾಗಿದೆ. 

ಪ್ರಸ್ತಾವಿತ ಸಂಸ್ಥೆಗೆ ಭಾರತೀಯ ಉನ್ನತ ಶಿಕ್ಷಣ ಆಯೋಗ (ಎಚ್‌ಇಸಿಐ) ಎಂದು ಹೆಸರು ಇರಿಸಲಾಗುವುದು. ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ನಿಯಮ ಮತ್ತು ನಿರ್ದೇಶನಗಳನ್ನು ಅನುಸರಿಸದೆ ಇದ್ದರೆ ದಂಡ ವಿಧಿಸುವ ಅಧಿಕಾರ ಈ ಆಯೋಗಕ್ಕೆ ಇರಲಿದೆ. 

ದಂಡ ಕಟ್ಟದೇ ಇದ್ದರೆ ಅಂತಹ ಸಂಸ್ಥೆಗಳ ಮುಖ್ಯಸ್ಥರು ಮತ್ತು ಆಡಳಿತ ಮಂಡಳಿ ಸದಸ್ಯರ ವಿರುದ್ಧ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಅಡಿಯಲ್ಲಿ ಪ್ರಕರಣ ದಾಖಲಿಸಬಹುದು. ಈ ತಪ್ಪಿಗೆ ಗರಿಷ್ಠ ಮೂರು ವರ್ಷ ಶಿಕ್ಷೆ ವಿಧಿಸಲು ಅವಕಾಶ ಇದೆ. 

1956ರ ಯುಜಿಸಿ ಕಾಯ್ದೆಯನ್ನು ರದ್ದುಪಡಿಸಿ ಎಚ್‌ಇಸಿಐ ಸ್ಥಾಪಿಸುವ ಮಸೂದೆಯ ಕರಡನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಚ್‌ಆರ್‌ಡಿ) ಸಿದ್ಧಪಡಿಸಿದೆ. ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದು ಯುಜಿಸಿಯನ್ನು ರದ್ದುಪಡಿಸುವುದರ ಹಿಂದಿನ ಉದ್ದೇಶ ಎಂದು ಹೇಳಲಾಗಿದೆ. 

ರಾಜ್ಯ ಮತ್ತು ಕೇಂದ್ರದ ಶಾಸನಗಳ ಮೂಲಕ ಸ್ಥಾಪನೆಯಾದ ಎಲ್ಲ ವಿಶ್ವವಿದ್ಯಾಲಯಗಳು, ಡೀಮ್ಡ್‌ ವಿಶ್ವವಿದ್ಯಾಲಯದ ಸ್ಥಾನ ಹೊಂದಿರುವ ಸಂಸ್ಥೆಗಳಿಗೆ ಎಚ್‌ಇಸಿಐ ಅನ್ವಯ ಆಗಲಿದೆ. 

ಸದಸ್ಯತ್ವ ವಿವರ: ಎಚ್‌ಆರ್‌ಡಿ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆ, ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಗಳು ಎಚ್‌ಇಸಿಐನಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಸದಸ್ಯರಾಗಿರುತ್ತಾರೆ. 

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್‌ ಮತ್ತು ಶಿಕ್ಷಕರ ಶಿಕ್ಷಣದ ರಾಷ್ಟ್ರೀಯ ಪರಿಷತ್‌ನ ಅಧ್ಯಕ್ಷರು ನಿಯಂತ್ರಣ ಸಂಸ್ಥೆಗಳ ಪ್ರತಿನಿಧಿಗಳು ಎಂಬ ಕಾರಣಕ್ಕೆ ಸದಸ್ಯತ್ವ ಪಡೆಯುತ್ತಾರೆ. ಶಿಕ್ಷಣ ಗುಣಮಟ್ಟದ ಮಾನ್ಯತೆಯ ಎರಡು ಸಂಸ್ಥೆಗಳ ಮುಖ್ಯಸ್ಥರನ್ನೂ ಸದಸ್ಯರನ್ನಾಗಿ ಮಾಡಲಾಗುತ್ತದೆ. 

ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಇಬ್ಬರು ಕುಲಪತಿಗಳು, ಇಬ್ಬರು ಪ್ರಾಧ್ಯಾಪಕರು ಮತ್ತು ಉದ್ಯಮದ ಹಿರಿಯರೊಬ್ಬರು ಸದಸ್ಯರಲ್ಲಿ ಸೇರಿರುತ್ತಾರೆ. 

ಎಚ್‌ಇಸಿಐಗೆ ಸಲಹಾ ಪರಿಷತ್ತು ಇರುತ್ತದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು ಇದರ ಅಧ್ಯಕ್ಷರಾಗಿರುತ್ತಾರೆ. ರಾಜ್ಯಗಳ ಉನ್ನತ ಶಿಕ್ಷಣ ಪರಿಷತ್‌ನ ಉಪಾಧ್ಯಕ್ಷರು ಸಲಹಾ ಪರಿಷತ್‌ ಸದಸ್ಯರಾಗಿರುತ್ತಾರೆ.

ಜನರ ಸಲಹೆ, ಸೂಚನೆಗೆ ಅವಕಾಶ ಕರಡು ಮಸೂದೆಯ ಬಗ್ಗೆ ಸಲಹೆ ಮತ್ತು ಸೂಚನೆಗಳನ್ನು ನೀಡುವಂತೆ ಶಿಕ್ಷಣ ತಜ್ಞರು ಮತ್ತು ಇತರರಿಗೆ ಎಚ್‌ಆರ್‌ಡಿ ಸಚಿವ ಪ್ರಕಾಶ್‌ ಜಾವಡೇಕರ್‌ ಮನವಿ ಮಾಡಿದ್ದಾರೆ.

ಜುಲೈ 7ರಂದು ಸಂಜೆ 5 ಗಂಟೆಯವರೆಗೆ ಸಲಹೆ, ಸೂಚನೆಗಳನ್ನು ನೀಡಲು ಅವಕಾಶ ಇದೆ ಎಂದು ಸರಣಿ ಟ್ವೀಟ್‌ಗಳ ಮೂಲಕ ಜಾವಡೇಕರ್‌ ತಿಳಿಸಿದ್ದಾರೆ.

ಶೋಧ ಸಮಿತಿ
ಸಂಪುಟ ಕಾರ್ಯದರ್ಶಿ ನೇತೃತ್ವದ ಶೋಧ ಮತ್ತು ಆಯ್ಕೆ ಸಮಿತಿಯು ಎಚ್‌ಇಸಿಐ ಅಧ್ಯಕ್ಷ ಸ್ಥಾನಕ್ಕೆ ಹೆಸರುಗಳನ್ನು ಶಿಫಾರಸು ಮಾಡಲಿದೆ. ಉಪಾಧ್ಯಕ್ಷರ ಹುದ್ದೆಗೂ ಈ ಸಮಿತಿಯೇ ಹೆಸರುಗಳನ್ನು ಶಿಫಾರಸು ಮಾಡಲಿದೆ. ಆದರೆ, ಉಪಾಧ್ಯಕ್ಷ ಹುದ್ದೆಗೆ ಹೆಸರು ಶಿಫಾರಸು ಮಾಡುವ ಸಮಿತಿಯಲ್ಲಿ ಎಚ್‌ಇಸಿಐ ಅಧ್ಯಕ್ಷರು ಸದಸ್ಯರಾಗಿರುತ್ತಾರೆ.

Tags: 

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !