ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಯಾನ ನೌಕೆಗೆ ಚಂದಿರ ಇನ್ನಷ್ಟು ಸನಿಹ

ಚಂದ್ರಯಾನ–2: ಇಸ್ರೊ ಕಾರ್ಯಾಚರಣೆ ಯಶಸ್ವಿ
Last Updated 28 ಆಗಸ್ಟ್ 2019, 15:38 IST
ಅಕ್ಷರ ಗಾತ್ರ

ಬೆಂಗಳೂರು: ಚಂದ್ರಯಾನ–2 ನೌಕೆಯನ್ನು ಚಂದ್ರನ ಕಕ್ಷೆಗೆ ಇನ್ನಷ್ಟು ಸನಿಹಗೊಳಿಸುವ ಕಾರ್ಯಾಚರಣೆಯನ್ನು ಇಸ್ರೊ ಬುಧವಾರ ಯಶಸ್ವಿಯಾಗಿ ಪೂರ್ಣಗೊಳಿಸಿದೆ.ನೌಕೆಯು ಚಂದ್ರನ ಅಂಗಳದಲ್ಲಿ ಇಳಿಯಲು 11 ದಿನಗಳು ಬಾಕಿಯಿದ್ದು, ಈ ಅವಧಿಯಲ್ಲಿ ಇಂತಹ ಇನ್ನೆರೆಡು ಕಾರ್ಯಾಚರಣೆಗಳು ನಡೆಯಲಿವೆ.

‘ಚಾಲನಾ ವ್ಯವಸ್ಥೆಯನ್ನು (ಪ್ರೊಪಲ್ಷನ್) ಬಳಸಿಕೊಂಡು ಬೆಳಿಗ್ಗೆ 9.04 ಗಂಟೆಗೆ ಆರಂಭವಾದ ಕಾರ್ಯಾಚರಣೆ, 1,190 ಸೆಕೆಂಡ್‌ಗಳಲ್ಲಿ ಮುಕ್ತಾಯವಾಗಿ,179 ಕಿ.ಮೀ. x 1412 ಕಿ.ಮೀ. ಅಂತರದ ಕಕ್ಷೆಯನ್ನು ಸೇರಿತು’ ಎಂದು ಇಸ್ರೊ ತಿಳಿಸಿದೆ. ಆಗಸ್ಟ್ 30ರಂದು ನೌಕೆ ಚಂದ್ರನಿಗೆ ಮತ್ತಷ್ಟು ಸನಿಹಕ್ಕೆ ಚಲಿಸಲಿದ್ದು, ಅಂದು ಸಂಜೆ 6ರಿಂದ 7 ಗಂಟೆಯೊಳಗೆ ನಾಲ್ಕನೇ ಕಾರ್ಯಾಚರಣೆ ನಿಗದಿಯಾಗಿದೆ.

ಆಗಸ್ಟ್ 20ರಂದು ಮಹತ್ವದ ಮೈಲುಗಲ್ಲು ನಿರ್ಮಿಸಿದ್ದ ಕಾರ್ಯಾಚರಣೆಯಲ್ಲಿ ಭೂಕಕ್ಷೆಯಿಂದ ಚಂದ್ರನ ಕಕ್ಷೆಗೆ ನೌಕೆಯನ್ನು ಸೇರಿಸುವಲ್ಲಿ ಇಸ್ರೊ ಯಶಕಂಡಿತ್ತು. ಮರುದಿನವೇ ನೌಕೆ ಸೆರೆಹಿಡಿದ ಕೆಲವು ಚಿತ್ರಗಳನ್ನು ಬಿಡುಗಡೆ ಮಾಡಲಾಗಿತ್ತು.

ಇನ್ನೆರಡು ಕಾರ್ಯಾಚರಣೆಗಳ ಮೂಲಕ ಕೊನೆಯ ಹಂತದ ಕಕ್ಷೆಯನ್ನು ಪ್ರವೇಶಿಸುವ ನೌಕೆಯು 100 ಕಿ.ಮೀ ದೂರದಲ್ಲಿ ನೆಲೆಯಾಗಲಿದೆ. ಬಳಿಕ ಕಕ್ಷೆಗಾಮಿಯಿಂದ ಲ್ಯಾಂಡರ್ ಬೇರ್ಪಟ್ಟು, 100 ಕಿ.ಮೀX 30 ಕಿ.ಮೀ ದೂರದ ಕಕ್ಷೆಗೆ ಸರಿಯಲಿದೆ.

ಇಲ್ಲಿಂದಲೇ ಅತಿಸೂಕ್ಷ್ಮ ಹಾಗೂ ಮಹತ್ವದ ಸುರಕ್ಷಿತ ನೌಕೆ ಇಳಿಸುವ ಕೆಲಸ ಶುರುವಾಗಲಿದೆ. ಸೆಪ್ಟೆಂಬರ್ 7ರಂದು ಚಂದ್ರದ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಯಲಿದೆ. ಅಂದು ನಡೆಯಲಿರುವ ಕಾರ್ಯಾಚರಣೆ ಭಾರಿ ಮಹತ್ವದ್ದಾಗಿದ್ದು, ಇಸ್ರೊ ಈವರೆಗೆ ಇಂತಹದ್ದನ್ನು ಮಾಡಿಲ್ಲ ಎಂದು ಅಧ್ಯಕ್ಷ ಕೆ. ಶಿವನ್ ಹೇಳಿದ್ದಾರೆ.

ಅಗಾಧ ಸಾಮರ್ಥ್ಯದಿಂದಾಗಿ ‘ಬಾಹುಬಲಿ’ ಎಂದು ಖ್ಯಾತಿ ಪಡೆದಿರುವ ಭಾರತದ ಜಿಎಸ್‌ಎಲ್‌ವಿ ಮಾರ್ಕ್–3 ರಾಕೆಟ್, ಚಂದ್ರಯಾನ–2 ನೌಕೆಯನ್ನು ಹೊತ್ತು ಜುಲೈ 22ರಂದು ನಭಕ್ಕೆ ನೆಗೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT