ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯ ಅಭಿವೃದ್ಧಿಗೆ ಯೋಜನೆ

Last Updated 4 ಮೇ 2018, 11:34 IST
ಅಕ್ಷರ ಗಾತ್ರ

ದೇವದುರ್ಗ: ತಾಲ್ಲೂಕಿನ ಅರಕೇರಾ ಗ್ರಾಮದವರಾದ ಮಾಜಿ ಸಂಸದ, ಶಾಸಕರಾಗಿದ್ದ ದಿ. ಎ.ವೆಂಕಟೇಶ ನಾಯಕ ಅವರ ಎರಡನೇ ಪುತ್ರ ಮತ್ತು ರಾಜಕೀಯ ಹಿನ್ನೆಲೆ ಇರುವಂಥ ಕುಟುಂಬದಿಂದ ಬಂದಿರುವ ರಾಜಶೇಖರ ನಾಯಕ ಅವರು, ಒಂದು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಮತ್ತು ಆರ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ದೇವದುರ್ಗ ಪರಿಶಿಷ್ಟ ಪಂಗಡ ಮೀಸಲು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸರ್ಧಿಸಿದ್ದು, ಅವರೊಂದಿಗೆ ‘ಪ್ರಜಾವಾಣಿ’ ನಡೆಸಿರುವ ಸಂದರ್ಶನ ಇಲ್ಲಿದೆ.

ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು?

ನಮ್ಮ ತಂದೆಯವರು ಸುಮಾರು 20 ವರ್ಷಗಳ ಕಾಲ ಸಂಸದರಾಗಿ, ಮೂರು ವರ್ಷ ಶಾಸಕರಾಗಿದ್ದ ಸಂದರ್ಭದಲ್ಲಿ ಅನೇಕ ಜನಪರ ಕಾರ್ಯಗಳನ್ನು ಮಾಡುವ ಮೂಲಕ ಬಡವರು, ಕೂಲಿಕಾರರು ಮತ್ತು ಮಧ್ಯಮ ವರ್ಗದ ಜನರ ನಾಡಿಮಿಡಿತವನ್ನು ಅರಿತುಕೊಂಡು ಅವರ ಕಷ್ಟ, ಸುಖಗಳಲ್ಲಿ ಭಾಗಿಯಾಗಿದ್ದೇನೆ. ಪ್ರತಿ ಗ್ರಾಮಕ್ಕೂ ಹೋಗಿ ಸ್ಥಳೀಯ ಸಮಸ್ಯೆಗಳು ಮತ್ತು ರೈತರ ಸಮಸ್ಯಗಳಿಗೆ ಸ್ಪಂದಿಸಿದ್ದೇನೆ. ಜನರ ಅಹವಾಲುಗಳನ್ನು ಆಲಿಸಿದ ಸಂತೃಪ್ತಿ ನನಗಿದೆ.

ಕ್ಷೇತ್ರದಲ್ಲಿ ನೀವು ಗುರುತಿಸುವ ಸಮಸ್ಯೆಗಳೇನು?

ನಾರಾಯಣಪುರ ಬಲದಂಡೆ ಕಾಲುವೆ ನಿರ್ಮಾಣವಾಗಿ 12 ವರ್ಷಗಳು ಕಳೆದಿವೆ. ಇಂದಿಗೂ ಕೊನೆಯ ಗ್ರಾಮಗಳ ರೈತರಿಗೆ ನೀರು ಸಿಗುತ್ತಿಲ್ಲ. ಪ್ರತಿವರ್ಷ ರೈತರು ಹೋರಾಟ ಮಾಡುತ್ತಿದ್ದರೂ ನೀರಾವರಿ ಇಲಾಖೆಯಿಂದ ಸ್ಪಂದನೆ ಇಲ್ಲದಂತಾಗಿದೆ. ಇದನ್ನು ಅರಿತುಕೊಂಡಿರುವ ನಾನು ಈಗಾಗಲೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಸಹೋದರ ಸಂಸದ ಬಿ.ವಿ. ನಾಯಕ ಅವರ ಮೂಲಕ ಇಲಾಖೆಯ ಮೇಲಧಿಕಾರಿಗಳಿಗೂ ಸ್ಥಳೀಯ ರೈತರ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಮತ್ತು ಕೆಲವು ಹಳ್ಳಿಗಳಿಗೆ ರಸ್ತೆ ಇಲ್ಲದೆ ಇರುವುದು ನನ್ನ ಗಮನಕ್ಕೆ ಬಂದಿದೆ. ತಾಲ್ಲೂಕಿನಲ್ಲಿ ನಿರುದ್ಯೋಗ ಸಮಸ್ಯೆ ವರ್ಷಕ್ಕಿಂತ ವರ್ಷಕ್ಕೆ ಹೆಚ್ಚಾಗಿದೆ. ಇವೆಲ್ಲ ಸಮಸ್ಯೆಗಳಿಗೆ ಪರಿಹಾರ ಇಲ್ಲದಂತಾಗಿದೆ.

ನಿಮಗೆ ಏಕೆ ಮತ ಹಾಕಬೇಕು?

ನನ್ನ ತಂದೆಯವರ ಕಾಲದಿಂದಲೂ ನಾನು ರಾಜಕೀಯವನ್ನು ಕಂಡಿದ್ದೇನೆ. ಪ್ರತಿ ಗ್ರಾಮದಲ್ಲಿನ ಸಮಸ್ಯೆಗಳನ್ನು ಅರಿತುಕೊಂಡಿದ್ದೇನೆ ರಸ್ತೆ, ಕುಡಿಯುವ ನೀರು, ಶಿಕ್ಷಣ ಮತ್ತು ಕೃಷಿಗೆ ಹೆಚ್ಚಿನ ಆದ್ಯತೆ ಅಗತ್ಯವಾಗಿದೆ. ಮುಂದೆ ನಾನು ಶಾಸಕನಾಗಿ ಆಯ್ಕೆಯಾದರೆ ಇವೆಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಅನುಕೂಲವಾಗುತ್ತದೆ ಎಂಬ ಕಾರಣಕ್ಕಾಗಿ ಈ ಬಾರಿ ನನಗೆ ಮತ ಕೊಡುವಂತೆ ಕೇಳಿಕೊಳ್ಳುತ್ತೇನೆ.

ತಾಲ್ಲೂಕಿನ ಬಗ್ಗೆ ನಿಮ್ಮ ಪರಿಕಲ್ಪನೆ ಏನು?

ಶಿಕ್ಷಣದಿಂದ ಇನ್ನಷ್ಟು ಅಭಿವೃದ್ಧಿ ಆಗಬೇಕಾಗಿರುವುದರಿಂದ ಇನ್ನಷ್ಟು ಶಾಲಾ, ಕಾಲೇಜುಗಳನ್ನು ಆರಂಭಿಸುವ ಮೂಲಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಅಗತ್ಯವಾಗಿದೆ. ಅಗತ್ಯವಾಗಿರುವ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವುದು ನನ್ನ ಪರಿಕಲ್ಪನೆಯಾಗಿದೆ.

ಗೆದ್ದ ಮೇಲೆ ನಿಮ್ಮ ಆದ್ಯತೆ ಏನು?

ರೈತನು ಈ ದೇಶದ ಬೆನ್ನೆಲಬು ಆಗಿರುವುದರಿಂದ ತಾಲ್ಲೂಕಿನ ಪ್ರತಿಯೊಬ್ಬ ರೈತನ ಜಮೀನಿಗೆ ಕಾಲುವೆ ಅಥವಾ ಏತಾ ನೀರಾವರಿ ಮೂಲಕ ನೀರು ಹರಿಯುವಂತೆ ಮಾಡುವುದು ನನ್ನ ಅದ್ಯತೆಯಾಗಿದೆ. ಸಾಕ್ಷರತೆಯ ಪ್ರಮಾಣ ಇನ್ನಷ್ಟು ಹೆಚ್ಚಿಸುವ ಮೂಲಕ ತಾಲ್ಲೂಕಿನ ಪ್ರತಿ ಮನೆಯಲ್ಲಿ ಉದ್ಯೋಗ ಸಿಗುವಂತೆ ಕ್ರಮ ಕೈಗೊಳ್ಳುವುದು ನನ್ನ ಅದ್ಯತೆಯಾಗಿದೆ.

ವೆಂಕಟೇಶ ನೀಲಗಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT