ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯ್ದೆ ತಿದ್ದುಪಡಿ ಮೂಲಕ ತಡೆಯಲು ಸಲಹೆ

ಚಿಕ್ಕ ಮಕ್ಕಳ ಮೇಲೆ ಡಿಜಿಟಲ್ ದೌರ್ಜನ್ಯ:
Last Updated 3 ಜನವರಿ 2019, 18:17 IST
ಅಕ್ಷರ ಗಾತ್ರ

ನವದೆಹಲಿ: ಚಿಕ್ಕ ಮಕ್ಕಳ ಸುರಕ್ಷತೆಗೆ ಅಡ್ಡಿಯಾಗಿರುವ ಮೊಬೈಲ್ ಅಪ್ಲಿಕೇಷನ್‌ಗಳು, ಮಕ್ಕಳ ಮೇಲಿನ ಡಿಜಿಟಲ್ ಲೈಂಗಿಕ ದೌರ್ಜನ್ಯ ಹಾಗೂ ಸುಳ್ಳು ಸುದ್ದಿ ಹರಡುವಿಕೆ ತಡೆಗೆ ಕ್ರಮ ಕೈಗೊಳ್ಳುವಂತೆ ಕೋರಿ ರಾಜ್ಯಸಭೆ ಸದಸ್ಯ ರಾಜೀವ್‌ ಚಂದ್ರಶೇಖರ್‌ ಮಾಡಿಕೊಂಡ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ.

ಸೂಕ್ತ ಕ್ರಮಕ್ಕೆ ಆಗ್ರಹಿಸಿ ಕೇಂದ್ರದ ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಕಳೆದ ಡಿಸೆಂಬರ್‌ 26ರಂದು ಪತ್ರ ಬರೆದು ಮಾಡಿಕೊಂಡಿದ್ದ ಮನವಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರವು ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ತಿದ್ದುಪಡಿ ತರುವುದಾಗಿ ಭರವಸೆ ನೀಡಿದೆ.

ಗೂಗಲ್ ಪ್ಲೇ, ಆ್ಯಪ್‌ ಸ್ಟೋರ್‌ ಹಾಗೂ ಇತರ ಅಪ್ಲಿಕೇಷನ್ ಸ್ಟೋರ್‌ಗಳಲ್ಲಿ ಲಭ್ಯವಿರುವ ಕೆಲವು ಆ್ಯಪ್‌ಗಳಿಂದ ಮಕ್ಕಳ ಸುರಕ್ಷತೆಗೆ ಆತಂಕ ಎದುರಾಗಿದೆ. ಮಕ್ಕಳ ಪೋರ್ನೊಗ್ರಫಿ ವಿನಿಮಯ ಸಂಖ್ಯೆ ಹೆಚ್ಚುತ್ತಿರುವ ಕುರಿತೂ ಮಾದ್ಯಮಗಳಲ್ಲಿ ವರದಿಯಾಗಿದ್ದಾಗಿ ಪತ್ರದಲ್ಲಿ ಗಮನ ಸೆಳೆಯಲಾಗಿತ್ತು.

2017ರಲ್ಲಿ ಜಾಗತಿಕವಾಗಿ 2.4 ದಶಲಕ್ಷ ಮಕ್ಕಳ ಮೇಲೆ ಆನ್‌ಲೈನ್ ದೌರ್ಜನ್ಯದ ಪ್ರಕರಣಗಳು ದಾಖಲಾಗಿವೆ ಎಂದು ಇಂಟರ್ ಪೋಲ್‌ನ ವರದಿ ತಿಳಿಸಿದೆ. ಪ್ರಾದೇಶಿಕ ಮನರಂಜನಾ ಗ್ರಾಹಕರಿಂದ ಈ ಅಪ್ಲೀಕೇಶನ್‌ಗಳಿಗೆ ಬೇಡಿಕೆ ಇದ್ದು, ಲೈಂಗಿಕ ದೌರ್ಜನ್ಯ ಎಸಗುವವರು ಮಕ್ಕಳನ್ನು ಸಂಪರ್ಕಿಸಿ ಶೋಷಿಸುತ್ತಿದ್ದಾರೆ ಎಂದು ರಾಜೀವ್ ಚಂದ್ರಶೇಖರ್ ಪತ್ರದಲ್ಲಿ ತಿಳಿದಿದ್ದರು.

ಸುರಕ್ಷಿತ ಬಾಲ್ಯವು ದೇಶದ ಭವಿಷ್ಯವಾಗಿವಾಗಿರುವ ಮಕ್ಕಳ ಹಕ್ಕು. ಅದರ ರಕ್ಷಣೆ ಸಮಾಜದ ಜವಾಬ್ದಾರಿ. ಮಕ್ಕಳ ಮೇಲೆ ನಡೆಯುತ್ತಿರುವ ಡಿಜಿಟಲ್ ದೌರ್ಜನ್ಯವನ್ನು ತಡೆಯಲು ಸೂಕ್ತ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದೂ ಅವರು ತಿಳಿಸಿದ್ದರು.

ಮಕ್ಕಳ ಮೇಲಿನ ಡಿಜಿಟಲ್ ದೌರ್ಜನ್ಯಗಳನ್ನು ಅವಲೋಕಿಸಲು ಸಮರ್ಥ ಸಾಂಸ್ಥಿಕ ವ್ಯವಸ್ಥೆಯನ್ನು ರೂಪಿಸಬೇಕು. ಗೃಹ ಸಚಿವಾಲಯ, ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಸಚಿವಾಲಯ, ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಗಳಿಗೂ ಇದರ ಜವಾಬ್ದಾರಿ ವಹಿಸಬೇಕು. ಡಿಜಿಟಲ್ ದೌರ್ಜನ್ಯ ಕುರಿತು ಜನಜಾಗೃತಿ ಹಮ್ಮಿಕೊಳ್ಳಬೇಕು. ಮಕ್ಕಳನ್ನು ಶೋಷಿಸುವಂತಹ ಅಂಶ ಒಳಗೊಂಡ ಅಪ್ಲಿಕೇಷನ್‌ಗಳನ್ನು ನಿಷೇಧಿಸಬೇಕು. ಮಕ್ಕಳ ಮೇಲಿನ ದೌರ್ಜನ್ಯವನ್ನು ಪ್ರೋತ್ಸಾಹಿಸುವ ಆನ್‌ಲೈನ್ ಕಂಟೆಂಟ್‌ಗಳಿಗೆ ದಂಡ ಮತ್ತು ಶಿಕ್ಷೆ ವಿಧಿಸಲು ಐಟಿ ಕಾಯ್ದೆ– 2000 ಹಾಗೂ ಪೊಕ್ಸೋ ಕಾಯ್ದೆಗೆ ತಿದ್ದುಪಡಿ ತರಬೇಕು ಎಂಬ ಸಲಹೆಯನ್ನೂ ನೀಡಲಾಗಿತ್ತು.

ಮಕ್ಕಳ ಮೇಲಿನ ಡಿಜಿಟಲ್‌ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ– -2000ಕ್ಕೆ ತಿದ್ದುಪಡಿ ತರುವ ಪ್ರಸ್ತಾವನೆ ಸರ್ಕಾರದ ಮುಂದಿರುವುದಾಗಿ ಸಚಿವರೂ ಮಾಹಿತಿ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT