ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಗೇಕೆ ಈಗ ಮಾತಿಲ್ಲ –ಕಾಂಗ್ರೆಸ್‌: ರಾಹುಲ್‌ಗೇಕೆ ಇಂಥಾ ಸಂಭ್ರಮ- ಬಿಜೆಪಿ

ಮಸೂದ್‌ ಅಜರ್‌ ನಿಷೇಧಕ್ಕೆ ಚೀನಾ ತಡೆ: ಕಾಂಗ್ರೆಸ್‌–ಬಿಜೆಪಿ ವಾಕ್ಸಮರ
Last Updated 15 ಮಾರ್ಚ್ 2019, 4:54 IST
ಅಕ್ಷರ ಗಾತ್ರ

ನವದೆಹಲಿ: ನರೇಂದ್ರ ಮೋದಿ ಅವರು ದುರ್ಬಲ ಪ್ರಧಾನಿ, ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ರನ್ನು ಕಂಡರೆ ಅವರಿಗೆ ಭಯ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಲೇವಡಿ ಮಾಡಿದ್ದಾರೆ.

ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆಯು ಘೋಷಿಸುವುದಕ್ಕೆ ಚೀನಾ ತಡೆ ಒಡ್ಡಿರುವುದಕ್ಕೆ ಅವರು ಈ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಚೀನಾದ ತಡೆಯ ಬಗ್ಗೆ ಮೋದಿ ಅವರು ಒಂದಕ್ಷರವನ್ನೂ ಮಾತನಾಡಿಲ್ಲ ಎಂದೂ ಅವರು ಹೇಳಿದ್ದಾರೆ.ಷಿ ಅವರ ಜತೆಗೆ ಮೋದಿ ಅವರು ಗುಜರಾತಿನಲ್ಲಿ ತಿರುಗಾಡಿದ್ದರಿಂದ ಏನು ಲಾಭವಾಯಿತು ಎಂದು ಅವರು ಪ್ರಶ್ನಿಸಿದ್ದಾರೆ.

ಭಯೋತ್ಪಾದನೆ ವಿರುದ್ಧದ ಜಾಗತಿಕ ಹೋರಾಟದಲ್ಲಿ ಇದೊಂದು ಭಾರಿ ಬೇಸರದ ದಿನ. ಕ್ರೂರ ಹತ್ಯೆಯ ಹಿಂದಿನ ಭಯೋತ್ಪಾದಕನನ್ನು ಬಿಜೆಪಿ ಮತ್ತೊಮ್ಮೆ ಬಿಟ್ಟಿದೆ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ ಹೇಳಿದ್ದಾರೆ.

ಮೋದಿ ಅವರ ವಿದೇಶಾಂಗ ನೀತಿಯು ರಾಜತಾಂತ್ರಿಕ ದುರಂತಗಳ ಸರಣಿ ಎಂದು ಅವರು ಆರೋಪಿಸಿದ್ದಾರೆ.

1999ರಲ್ಲಿ ಬಿಜೆಪಿಯೇ ಅಜರ್‌ನನ್ನು ಭಾರತದ ಜೈಲಿನಿಂದ ಹೊರಗೆ ಬಿಟ್ಟಿತು ಎಂಬುದನ್ನು ಆ ಪಕ್ಷದ ಮುಖಂಡರು ಜನರಿಗೆ ಹೇಳಬೇಕು ಎಂದೂ ರಾಹುಲ್‌ ಕುಟುಕಿದ್ದಾರೆ.

ಮೋದಿಗೆ ಭೀತಿ
ದುರ್ಬಲ ಮೋದಿಗೆ ಷಿ ಬಗ್ಗೆ ಭೀತಿ. ಭಾರತದ ವಿರುದ್ಧ ಚೀನಾ ಕೈಗೊಂಡ ನಿರ್ಧಾರದ ಬಗ್ಗೆ ಅವರ ಬಾಯಿಯಿಂದ ಒಂದು ಮಾತೂ ಬಂದಿಲ್ಲ. ‘ನಮೋ’ ಅವರ ಚೀನಾ ಬಗೆಗಿನ ವಿದೇಶಾಂಗ ನೀತಿ ಹೀಗಿದೆ: 1. ಷಿ ಜತೆಗೆ ಗುಜರಾತ್‌ನಲ್ಲಿ ಸುತ್ತಾಟ 2. ದೆಹಲಿಯಲ್ಲಿ ಷಿಯ ಅಪ್ಪುಗೆ 3. ಚೀನಾದಲ್ಲಿ ಷಿಗೆ ಶರಣು

ರಾಹುಲ್‌ಗೇಕೆ ಇಂಥಾ ಸಂಭ್ರಮ: ಬಿಜೆಪಿ ಪ್ರಶ್ನೆ
‘ಚೀನಾದ ಧೋರಣೆಯಿಂದ ಇಡೀ ದೇಶಕ್ಕೆ ನೋವಾಗಿರುವಾಗ ರಾಹುಲ್‌ ಗಾಂಧಿ ಅವರು ಸಂಭ್ರಮಾಚರಣೆ ಮಾಡುತ್ತಿರುವುದು ಏಕೆ’ ಎಂದು ಬಿಜೆಪಿ ಮುಖಂಡ ರವಿಶಂಕರ್‌ ಪ್ರಸಾದ್‌ ಪ್ರಶ್ನಿಸಿದ್ದಾರೆ.

ರಾಹುಲ್‌ ಅವರ ಹೇಳಿಕೆ ಗಮನಿಸಿದರೆ ಅವರು ಮಸೂದ್‌ ಅಜರ್‌ಗೆ ಬಹಳ ಹತ್ತಿರವಾಗಿರುವಂತೆ ಕಾಣಿಸುತ್ತಿದೆ ಎಂದು ಪ್ರಸಾದ್‌ ಲೇವಡಿ ಮಾಡಿದ್ದಾರೆ.

2009ರಲ್ಲಿ ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಮಸೂದ್‌ನನ್ನು ನಿಷೇಧಿಸುವ ಪ್ರಯತ್ನಕ್ಕೆ ಚೀನಾ ಅಡ್ಡಗಾಲು ಹಾಕಿತ್ತು. ರಾಹುಲ್‌ ಆಗ ಏಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ಪ್ರಸಾದ್‌ ಕೇಳಿದ್ದಾರೆ.

ಚೀನಾದ ಜತೆಗೆ ಉತ್ತಮ ಸಂಬಂಧ ಸಾಧಿಸಲು ಭಾರತ ಪ್ರಯತ್ನ ಮಾಡಿದೆ. ಹಾಗಿದ್ದರೂ ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ದೇಶದ ನಿಲುವಿನಲ್ಲಿ ಯಾವುದೇ ರಾಜಿ ಇಲ್ಲ ಎಂದು ಅವರು ಹೇಳಿದ್ದಾರೆ.

ರಾಹುಲ್‌ ಅವರ ಟ್ವೀಟ್‌ ಪಾಕಿಸ್ತಾನದಲ್ಲಿ ದೊಡ್ಡ ಸುದ್ದಿ ಆಗಿರಲೇಬೇಕು, ಜೈಷ್‌ ಕಚೇರಿಯಲ್ಲಿ ಈ ಸುದ್ದಿಯನ್ನು ಸಂಭ್ರಮದಿಂದ ಹಂಚಿಕೊಂಡಿರುತ್ತಾರೆ. ಇದು ರಾಹುಲ್‌ ಅವರಿಗೂ ಖುಷಿ ಕೊಡಬಹುದು ಎಂದು ಪ್ರಸಾದ್‌ ತಿರುಗೇಟು ನೀಡಿದ್ದಾರೆ.

ಚೀನಾದ ಸಚಿವರ ಜತೆಗೆ ರಾಹುಲ್‌ ಮಾತುಕತೆ ನಡೆಸಿದ್ದರು. ರಾಹುಲ್‌ ಅವರು ಕಳೆದ ವರ್ಷ ಮಾನಸ ಸರೋವರ ಯಾತ್ರೆ ಕೈಗೊಂಡಿದ್ದಾಗ ಬೀಳ್ಕೊಡಲು ಚೀನಾ ರಾಯಭಾರ ಕಚೇರಿ ಮುಂದಾಗಿತ್ತು. ಆದರೆ, ಭಾರತ ಸರ್ಕಾರ ಅದಕ್ಕೆ ಅನುಮತಿ ಕೊಟ್ಟಿರಲಿಲ್ಲ. ರಾಹುಲ್‌ ಅವರಿಗೆ ಚೀನಾದ ಜತೆಗೆ ಅಷ್ಟೊಂದು ನಿಕಟ ಸಂಬಂಧ ಇದ್ದರೆ, ಅಜರ್‌ನ ಮೇಲೆ ನಿಷೇಧ ಹೇರಲು ಸಹಕರಿಸುವಂತೆ ಅವರು ಮನವೊಲಿಸಬಹುದಿತ್ತು ಎಂದೂ ಪ್ರಸಾದ್‌ ಹೇಳಿದ್ದಾರೆ.

ತಪ್ಪು ಯಾರದ್ದು?
ಕಾಶ್ಮೀರ ಮತ್ತು ಚೀನಾದ ವಿಚಾರದಲ್ಲಿ ಮೊದಲ ತಪ್ಪು ಮಾಡಿದವರು ಒಬ್ಬರೇ ವ್ಯಕ್ತಿ ಎಂದು ಕೇಂದ್ರ ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ. 1955ರಲ್ಲಿ ಆಗಿನ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ಮುಖ್ಯಮಂತ್ರಿಗಳಿಗೆ ಬರೆದಿದ್ದ ಪತ್ರವನ್ನು ಅವರು ಉಲ್ಲೇಖಿಸಿದ್ದಾರೆ.

‘ಚೀನಾವನ್ನು ವಿಶ್ವಸಂಸ್ಥೆಗೆ ಸೇರಿಸಿಕೊಳ್ಳಬೇಕು. ಭಾರತಕ್ಕೆ ಭದ್ರತಾ ಮಂಡಳಿಯಲ್ಲಿ ಸ್ಥಾನ ಕೊಡಬೇಕು ಎಂಬ ಸಲಹೆ ಅನೌಪಚಾರಿಕವಾಗಿ ಬಂದಿದೆ. ಆದರೆ, ಇದನ್ನು ನಾವು ಒಪ್ಪಿಕೊಂಡರೆ ಚೀನಾದ ಜತೆಗಿನ ಸಂಬಂಧ ಕೆಡಬಹುದು. ಚೀನಾದಂತಹ ಶ್ರೇಷ್ಠ ದೇಶವನ್ನು ಭದ್ರತಾ ಮಂಡಳಿಗೆ ಸೇರಿಸಿಕೊಳ್ಳಬೇಕು’ ಎಂದು ಈ ಪತ್ರದಲ್ಲಿ ಹೇಳಲಾಗಿತ್ತು ಎಂದು ಜೇಟ್ಲಿ ಹೇಳಿದ್ದಾರೆ.

‘ತಪ್ಪಿನ ಮೂಲ ಯಾವುದು ಎಂದು ಕಾಂಗ್ರೆಸ್‌ ಅಧ್ಯಕ್ಷರು ಹೇಳಬೇಕು’ ಎಂದು ಜೇಟ್ಲಿ ಸವಾಲೆಸೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT