ಸರ್ಕಾರಿ ಆಸ್ಪತ್ರೆಯಲ್ಲಿ ಸಿಗದ ಸ್ಟ್ರೆಚರ್‌ ಸೌಲಭ್ಯ:ರೋಗಿಯನ್ನು ಎಳೆದೊಯ್ದ ಸಂಬಂಧಿ

7
ಮಹಾರಾಷ್ಟ್ರದ ನಂದದ್‌ ಸರ್ಕಾರಿ ಆಸ್ಪತ್ರೆಯಲ್ಲಿ ವರದಿ ಮತ್ತೊಂದು ಪ್ರಕರಣ

ಸರ್ಕಾರಿ ಆಸ್ಪತ್ರೆಯಲ್ಲಿ ಸಿಗದ ಸ್ಟ್ರೆಚರ್‌ ಸೌಲಭ್ಯ:ರೋಗಿಯನ್ನು ಎಳೆದೊಯ್ದ ಸಂಬಂಧಿ

Published:
Updated:
ಸರ್ಕಾರಿ ಆಸ್ಪತ್ರೆಯಲ್ಲಿ ಸಿಗದ ಸ್ಟ್ರೆಚರ್‌ ಸೌಲಭ್ಯ ಸಿಗದೆ ಅನಾರೋಗ್ಯದಿಂದ ಬಳಲುತ್ತಿರುವ ಮಹಿಳೆಯನ್ನು ಎಳೆದೊಯ್ಯುತ್ತಿರುವ ಸಂಬಂಧಿಕರು

ಮುಂಬೈ: ಸರ್ಕಾರಿ ಆಸ್ಪತ್ರೆಗಳಲ್ಲಿ ಆಂಬುಲೆನ್ಸ್‌ ಸೇವೆ ಸೇರಿದಂತೆ ಸೂಕ್ತ ಸೌಲಭ್ಯಗಳು ದೊರೆಯದೆ ರೋಗಿಗಳು ತೊಂದರೆಗೊಳಗಾದ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಿದ್ದರೂ ಸರ್ಕಾರಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಇದೀಗ ಇಂತಹ ಮತ್ತೊಂದು ಪ್ರಕರಣ ಮಹಾರಾಷ್ಟ್ರದ ನಂದದ್‌ ಸರ್ಕಾರಿ ಆಸ್ಪತ್ರೆಯಲ್ಲಿ ವರದಿಯಾಗಿದೆ.

ಸ್ಟ್ರೆಚರ್‌ ಸೌಲಭ್ಯ ದೊರೆಯದ ಕಾರಣ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯನ್ನು ಸಂಬಂಧಿಕರು ಬೆಡ್‌ಶೀಟ್‌ನಲ್ಲಿ ಕೂರಿಸಿ ಎಳೆದುಕೊಂಡು ಹೋಗಿರುವ ಅಮಾನವೀಯ ಘಟನೆ ಗುರುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮೇ. 05ರಂದು ಡೆಹ್ರಾಡೂನ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಇಂತದೇ ಪ್ರಕರಣ ವರದಿಯಾಗಿತ್ತು. ಆಸ್ಪತ್ರೆ ಸಿಬ್ಬಂದಿ ಸ್ಟ್ರೆಚರ್ ನೀಡಲು ನಿರಾಕರಿಸಿದ ಕಾರಣ ಅನಾರೋಗ್ಯದಿಂದ ನರಳುತ್ತಿದ್ದ ಸಹೋದರನನ್ನು ವ್ಯಕ್ತಿಯೊಬ್ಬರು ಬೆನ್ನ ಮೇಲೆ ಹೊತ್ತೊಯ್ದಿದ್ದರು.

ಕರ್ನಾಟಕದಲ್ಲಿಯೂ ಇಂತಹ ಹಲವು ಪ್ರಕರಣಗಳು ವರದಿಯಾಗಿವೆ.

ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಕಳದೆ ವರ್ಷ ಜೂನ್‌ ತಿಂಗಳಲ್ಲಿ ಘಟನೆ ನಡೆದಿತ್ತು. ಎಕ್ಸ್‌ರೇ ಮಾಡಿಸುವ ಕೊಠಡಿಗೆ ಪತಿಯನ್ನು ಕರೆದೊಯ್ಯಲು ಆಸ್ಪತ್ರೆಯ ಸಿಬ್ಬಂದಿ ಸ್ಟ್ರೆಚರ್‌ ನೀಡದ ಕಾರಣ ವೃದ್ದೆಯೊಬ್ಬರು ಪತಿಯ ಕಾಲು ಹಿಡಿದುಕೊಂಡು ಎಳೆದುಕೊಂಡು ಹೋಗಿದ್ದರು.

ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಈ ದೃಶ್ಯಾವಳಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿತ್ತು.

ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಸಮರ್ಪಕ ಚಿಕಿತ್ಸೆ ಸಿಗದಕಾರಣ ತನ್ನ ಪೋಷಕರಿಬ್ಬರೂ ಒಂದೇ ದಿನ ಮೃತಪಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಯುವಕನೊಬ್ಬ, ಆಸ್ಪತ್ರೆ ಸಿಬ್ಬಂದಿ ವಿರುದ್ಧ ಪ್ರತಿಭಟಿಸಿ ತಾಯಿ ಶವವನ್ನು ಹೆಗಲ ಮೇಲೆಯೇ ಹೊತ್ತು ಹೊರನಡೆದಿದ್ದರು. ಈ ಘಟನೆ 2017ರ ಅಕ್ಟೋಬರ್‌ನಲ್ಲಿ ಬೆಳಕಿಗೆ ಬಂದಿತ್ತು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !