ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್: ತೆಲಂಗಾಣ, ಮಿಜೋರಾಂನಲ್ಲಿ ಸ್ಥಳೀಯ ಪಕ್ಷ

ಛತ್ತೀಸ್‌ಗಡದಲ್ಲಿ ಕಾಂಗ್ರೆಸ್‌
Last Updated 11 ಡಿಸೆಂಬರ್ 2018, 9:55 IST
ಅಕ್ಷರ ಗಾತ್ರ

ಐದು ರಾಜ್ಯಗಳ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಪ್ರಕ್ರಿಯೆ ಮಂಗಳವಾರ ನಡೆಯುತ್ತಿದ್ದು, ಬಿಜೆಪಿ ಭದ್ರಕೋಟೆಯಲ್ಲಿ ಕಾಂಗ್ರೆಸ್‌ ಪ್ರಾಬಲ್ಯ ಸಾಧಿಸುತ್ತಿದೆ. ಮಿಜೋರಾಂ ಮತ್ತು ತೆಲಂಗಾಣದಲ್ಲಿ ಮತದಾರರು ರಾಷ್ಟ್ರೀಯ ಪಕ್ಷಗಳೊಂದಿಗೆ ಅಂತರ ಕಾಯ್ದುಕೊಂಡು ಪ್ರಾದೇಶಿಕ ಪಕ್ಷಗಳಿಗೆ ಬೆಂಬಲ ನೀಡಿರುವುದು ಸ್ಪಷ್ಟವಾಗಿದೆ.

ಕಳೆದ ಹದಿನೈದು ವರ್ಷಗಳಿಂದ ಛತ್ತೀಸ್‌ಗಡದಲ್ಲಿ ಅಧಿಕಾರ ಸ್ಥಾಪಿಸಿರುವ ಬಿಜೆಪಿ ಈ ಬಾರಿ ಹಿನ್ನಡೆ ಅನುಭವಿಸಿದೆ. 90 ಕ್ಷೇತ್ರಗಳ ಪೈಕಿ ಕೇವಲ 15ರಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಸಿಎಂ ರಮಣ್‌ ಸಿಂಗ್‌ ಸಹ ಸ್ವಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕರುಣಾ ಶುಕ್ಲಾ ತೀವ್ರ ಪೈಪೋಟಿ ನೀಡಿದ್ದಾರೆ. ಬಿಜೆಪಿ ಕಚೇರಿ ಚಟುವಟಿಕೆಗಳಿಲ್ಲದೆ ಬಿಕೋ ಎನ್ನುತ್ತಿದೆ. ಇನ್ನೂ ರಾಜಸ್ಥಾನದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಸಮಬಲದ ಹೋರಾಟ ಕಂಡು ಬಂದಿದ್ದು, 89 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವ ಕಾಂಗ್ರೆಸ್‌ ಸಚಿನ್‌ ಪೈಲಟ್‌ ನೇತೃತ್ವದಲ್ಲಿ ಸರ್ಕಾರ ರಚನೆಯ ಕಸರತ್ತಿಗೆ ಮುಂದಾಗಿದೆ.

119 ವಿಧಾನಸಭಾ ಕ್ಷೇತ್ರಗಳಿರುವ ತೆಲಂಗಾಣದಲ್ಲಿ ಎರಡನೇ ಬಾರಿಗೆ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ.ಅದಾಗಲೇ ಒಂದು ಕ್ಷೇತ್ರದಲ್ಲಿ ಗೆಲುವು ಪಡೆದು 87 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಟಿಆರ್‌ಎಸ್‌ ಪೂರ್ಣ ಬಹುಮತ ಪಡೆಯುವ ಹಾದಿಯಲ್ಲಿದೆ. ಸರ್ಕಾರ ರಚನೆಗೆ 60 ಸ್ಥಾನಗಳ ಅಗತ್ಯವಿದೆ. ಚುನಾವಣಾ ಪೂರ್ಣ ಮಹಾಮೈತ್ರಿ ಮಾಡಿಕೊಂಡ ಕಾಂಗ್ರೆಸ್, ’ಪ್ರಜಾಕೂಟ’ ಸ್ಥಾಪಿಸಿಕೊಂಡು ಪ್ರಚಾರ ನಡೆಸಿತ್ತು. ಪ್ರಜಾಕೂಟವು 22 ಸ್ಥಾನಗಳಲ್ಲಿ ಮುನ್ನಡೆ ಪಡೆದಿದೆ.

ಕಳೆದ ಬಾರಿಈಶಾನ್ಯ ರಾಜ್ಯ ಮಿಜೋರಾಂನಲ್ಲಿ ಅಧಿಕಾರ ವಿಸ್ತರಿಸಿಕೊಂಡಿದ್ದ ಕಾಂಗ್ರೆಸ್‌ನ್ನು ಮತದಾರರು ಈಬಾರಿ ಕೈಬಿಟ್ಟಿದ್ದಾರೆ. ಪ್ರಾದೇಶಿಕ ಪಕ್ಷ ಮಿಜೋ ನ್ಯಾಷನಲ್ ಫ್ರಂಟ್(ಎಂಎನ್‌ಎಫ್‌) ಕೈಹಿಡಿದಿರುವ ಜನರು 10 ವರ್ಷಗಳ ನಂತರ ಮತ್ತೆ ಸರ್ಕಾರ ರಚಿಸುವ ಅವಕಾಶ ನೀಡಿದ್ದಾರೆ.ಮಿಜೋರಾಂ ಮುಖ್ಯಮಂತ್ರಿ, ಕಾಂಗ್ರೆಸ್ ಅಭ್ಯರ್ಥಿ ಲಾಲ್ ಥನ್ಹಾವ್ಲಾ ಪರಾಭವಗೊಂಡಿರುವುದು ಕಾಂಗ್ರೆಸ್‌‍ ಹಿನ್ನಡೆಗೆ ಸಾಕ್ಷಿಯಂತಿದೆ. ಈಗಾಗಲೇ ಎಂಎನ್‌ಎಫ್‌ 9 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ 16 ಕ್ಷೇತ್ರಗಳಲ್ಲಿ ಮುನ್ನಡೆ ಹೊಂದಿದ್ದು, ಎರಡನೇ ಸ್ಥಾನದಲ್ಲಿರುವ ಕಾಂಗ್ರೆಸ್‌ 6 ಕ್ಷೇತ್ರಗಳಲ್ಲಷ್ಟೇ ಮುನ್ನಡೆ ಕಂಡಿದೆ. ಬಿಜೆಪಿ ಪ್ರಾಬಲ್ಯವಿರದ ಇಲ್ಲಿ ಮೂರು ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಕಾಯ್ಡುಕೊಂಡಿದ್ದಾರೆ.

ಛತ್ತೀಸ್‌ಗಢದಂತೆ 15 ವರ್ಷಗಳಿಂದ ಬಿಜೆಪಿ ಭದ್ರಕೋಟೆಯಾಗಿರುವ ಮಧ್ಯಪ್ರದೇಶದಲ್ಲಿ ಪಕ್ಷಕ್ಕೆ ಹಿನ್ನಡೆ ಉಂಟಾಗಿದೆ. ಬಿಜೆಪಿ ಆಡಳಿತ ವಿರೋಧಿ ಅಲೆ ಜೋರಾಗಿರುವುದು ಫಲಿತಾಂಶದಲ್ಲಿ ಕಂಡುಬಂದಿದೆ. 2013ರ ಚುನಾವಣೆಯಲ್ಲಿ 230 ವಿಧಾನಸಭಾ ಕ್ಷೇತ್ರಗಳ ಪೈಕಿ 165 ಸ್ಥಾನಗಳಲ್ಲಿ ಗೆಲುವು ಪಡೆದು ಸರ್ಕಾರ ರಚಿಸಿದ್ದ ಬಿಜೆಪಿ, ಪ್ರಸ್ತುತ 109 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಕಂಡಿದೆ. ವಿರೋಧಿ ಪಕ್ಷ ಕಾಂಗ್ರೆಸ್‌ ಸಹ 109 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡು ಜಿದ್ದಾಜಿದ್ದಿ ಹೋರಾಟ ಕಂಡುಬಂದಿದೆ. ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆಗೆ ಪಕ್ಷೇತರು ನಿರ್ಣಾಯಕ ಪಾತ್ರವಹಿಸುವ ಸಾಧ್ಯತೆ ಹೇರಳವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT